ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮಾಜದ ಶಕ್ತಿ: ಕೃಷ್ಣ ನರೇಗಲ್

| Published : Oct 07 2025, 01:03 AM IST

ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮಾಜದ ಶಕ್ತಿ: ಕೃಷ್ಣ ನರೇಗಲ್
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮಾಜದ ಶಕ್ತಿ. ಇಂದು ತನ್ನದೇ ಆದ ಸಂಘಟಿತ ಶಕ್ತಿಯಿಂದ ಬೆಳೆದು ನಿಂತಿದೆ.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮಾಜದ ಶಕ್ತಿ. ಇಂದು ತನ್ನದೇ ಆದ ಸಂಘಟಿತ ಶಕ್ತಿಯಿಂದ ಬೆಳೆದು ನಿಂತಿದೆ. ಆರೆಸ್ಸೆಸ್ ಎಂದರೆ ಹಿಂದೂ ರಾಷ್ಟ್ರದ ಪರಮ ವೈಭವ ಎಂದು ಆರೆಸ್ಸೆಸ್ ಮಂಡಲದ ದಾಂಡೇಲಿ ಜಿಲ್ಲಾ ಪ್ರಚಾರಕ ಕೃಷ್ಣ ನರೇಗಲ್ ಹೇಳಿದರು.

ವಜ್ರಳ್ಳಿಯ ಸರ್ವೋದಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ವಜ್ರಳ್ಳಿ ಮಂಡಲ ಉತ್ಸವದ ಬೌದ್ಧಿಕ ಸಭೆಯಲ್ಲಿ ಮಾತನಾಡಿದರು.

ದೇಹ ಮನಸ್ಸು ಜಾಗೃತಗೊಳಿಸುವ ವಿಚಾರಗಳ ಸಮನ್ವಯತೆಯಿಂದ ದೇಶ ಕಟ್ಟುವ ಬದುಕಿನ ಭಾಗವು ಸಂಘಟನೆಯ ಮೂಲ ಧ್ಯೇಯವಾಗಿದೆ. ಸಂಘವನ್ನು ಕಟ್ಟಿ ಬೆಳೆಸಿದ ಅನೇಕ ಧೀಮಂತರು ಅನೇಕ ಸ್ವಯಂ ಸೇವಕರ ಶ್ರಮ ಇದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಗತಿ ವಿಧಿಗಳು, ಸಾಮಾಜಿಕ ಸಾಮರಸ್ಯ ಕಾಪಾಡುವುದು, ಗೋರಕ್ಷಣೆ, ಹೀಗೆ ಹತ್ತು ಹಲವು ಕಾರ್ಯದಲ್ಲಿ ತನ್ನನ್ನು ತಾನು ಸಮರ್ಥವಾಗಿ ಸಮರ್ಪಿಸಿಕೊಳ್ಳುವುದು. ಬದುಕಿನಲ್ಲಿ ವ್ಯಕ್ತಿ ಭಾವನೆಗಳಿಗೆ, ಕುಟುಂಬದ ಸಂಬಂಧಗಳಿಗೆ ಗೌರವ ಕೊಡುವ ಶಿಷ್ಟಾಚಾರ ನಮ್ಮದು. ಪರಿವರ್ತನೆಯು ನಮ್ಮ ವ್ಯಕ್ತಿತ್ವದ ಸಮಗ್ರತೆಯ ಅವಲೋಕನದ ಆಶಯಗಳನ್ನು ಬಿಂಬಿಸಬೇಕು ಎಂದರು.

ಮಂಡಲ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿದ್ದ ಉಪನ್ಯಾಸಕ ಡಾ. ಡಿ.ಕೆ.ಗಾಂವ್ಕಾರ ಬೀಗಾರ ಮಾತನಾಡಿ, ಭೂಮಿಯನ್ನು ತಾಯಿ ಎಂದು ನಂಬಿ ಪೂಜಿಸುವ ಪರಂಪರೆ ನಮ್ಮದು. ತಾಯಿಯ ಮೂಲಕ ದೇಶಪ್ರೇಮದ ಸಂಘಟನೆ ಭಕ್ತಿ, ಆತ್ಮ ಸಂತೋಷಕ್ಕಾಗಿ ರಾಷ್ಟ್ರೀಯ ಕಲ್ಪನೆ ಮೂಡಬೇಕು. ಇಡೀ ದೇಶದ ರಕ್ಷಣೆಯ ಜವಾಬ್ದಾರಿ ನಮ್ಮದು. ಅಂತರಾಳದ ಸಂರಕ್ಷಣೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಡುಗೆ ದೊಡ್ಡದು ಎಂದರು.

ಧ್ವಜಾರೋಹಣದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ದೇಶಭಕ್ತಿಗೀತೆ ಪ್ರಸ್ತುತ ಪಡಿಸಿದರು. ನಂತರ ವಜ್ರಳ್ಳಿಯ ವಜ್ರೇಶ್ವರಿ ದೇವಸ್ಥಾನದವರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಪಥಸಂಚಲನದಲ್ಲಿ ದೇಶಭಕ್ತಿಗೀತೆಯ ಗಾಯನದೊಂದಿಗೆ ಹೆಜ್ಜೆ ಹಾಕಿದರು. ಸ್ಥಳೀಯರು ರಂಗೋಲಿ, ಹೂವಿನ ಅಲಂಕಾರದೊಂದಿಗೆ ಸಂಘದ ಕಾರ್ಯಕರ್ತರನ್ನು ಸ್ವಾಗತಿಸಿ, ಗೌರವಿಸಿದರು.