ಸಾರಾಂಶ
ನಾನು ಯಾವುದೇ ಸಚಿವ ಸ್ಥಾನದ ನಿರೀಕ್ಷೆ ಇಟ್ಟಿಕೊಂಡಿಲ್ಲ. ಪಕ್ಷದ ಹೈಕಮಾಂಡ್ ನನಗೆ ಏನೇ ಜವಾಬ್ದಾರಿ ಕೊಟ್ಟರೂ ಅದನ್ನು ನಿಭಾಯಿಸುತ್ತೇನೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿ:
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಡಿಮೆ ಸ್ಥಾನಗಳು ಬಂದರೂ ಎನ್‌ಡಿಎ ನೇತೃತ್ವದ ಸರ್ಕಾರ ರಚನೆ ಮಾಡುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ, ನೂತನ ಸಂಸದ ಜಗದೀಶ ಶೆಟ್ಟರ ಹೇಳಿದರು.ಅವರು ಬುಧವಾರ ಸಂಸದರಾದ ಮೇಲೆ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿ ಸಿದ್ಧಾರೂಢ ಶ್ರೀಗಳ ಗದ್ದುಗೆ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಾನು 1.80 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಅಲ್ಲಿನ ನಾಯಕರು, ಕಾರ್ಯಕರ್ತರು ಸಂಪೂರ್ಣ ಸಹಕಾರ ನೀಡಿದ್ದರಿಂದಲೇ ನನ್ನ ಗೆಲುವಾಗಿದೆ. ಚುನಾವಣೆಗೆ ಸ್ಪರ್ಧಿಸಿದ ವೇಳೆ ನಾನು ಹೊರಗಿನವನು ಎಂದು ಕೆಲವರು ಟೀಕೆ ಮಾಡಿದರು. ಅಂಥವರಿಗೆ ಕ್ಷೇತ್ರದ ಮತದಾರರು ಸರಿಯಾದ ಉತ್ತರ ನೀಡಿದ್ದಾರೆ. ಇಂತಹ ಯಾವುದೇ ಗೊಂದಲದ ಹೇಳಿಕೆಗಳನ್ನು ಜನತೆ ಮನಸ್ಸಿನಲ್ಲಿ ಇಟ್ಟಿಕೊಳ್ಳದೆ ನನಗೆ ಆಶೀರ್ವಾದ ಮಾಡಿದ್ದಾರೆ ಎಂದರು.ಸಚಿವ ಸ್ಥಾನದ ಆಕಾಂಕ್ಷಿಯಲ್ಲ:
ನಾನು ಯಾವುದೇ ಸಚಿವ ಸ್ಥಾನದ ನಿರೀಕ್ಷೆ ಇಟ್ಟಿಕೊಂಡಿಲ್ಲ. ಪಕ್ಷದ ಹೈಕಮಾಂಡ್ ನನಗೆ ಏನೇ ಜವಾಬ್ದಾರಿ ಕೊಟ್ಟರೂ ಅದನ್ನು ನಿಭಾಯಿಸುತ್ತೇನೆ. ಪ್ರಹ್ಲಾದ ಜೋಶಿ ಅವರು ಕಡಿಮೆ ಅಂತರದಲ್ಲಿ ಗೆಲವು ಸಾಧಿಸಿರುವ ಕುರಿತು ಕೇಳಿದ ಪ್ರಶ್ನೆಗೆ, ನಾನು ಬೆಳಗಾವಿ ಚುನಾವಣೆಯಲ್ಲಿ ಕಾರ್ಯನಿರತನಾಗಿದ್ದೆ, ಈ ಕುರಿತು ನಾನು ಗಮನ ಹರಿಸಿಲ್ಲ. ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡುವೆ. ಗುರುವಾರ ದೆಹಲಿಗೆ ಹೋಗಿ ಪಕ್ಷದ ವರಿಷ್ಠರನ್ನು ಭೇಟಿಯಾಗುವುದಾಗಿ ತಿಳಿಸಿದರು.ಯುಪಿಎ ಅವಧಿಯಲ್ಲಿ ಮೊದಲು ಎರಡು ಸಲ ನಮಗೆ ಬಹುಮತ ಸಿಕ್ಕಿರಲಿಲ್ಲ. ಆ ವೇಳೆಯಲ್ಲಿ ಅವರು ಸರ್ಕಾರ ರಚನೆ ಮಾಡಿದ್ದರು. ಆದರೆ, ಈ ಚುನಾವಣೆಯಲ್ಲಿ ನಮ್ಮ ಎನ್‌ಡಿಎಗೆ ಬಹುಮತ ಬಂದಿದೆ. ಹೀಗಾಗಿ ನಾವೇ ಸರ್ಕಾರ ರಚನೆ ಮಾಡುತ್ತೇವೆ ಎಂದರು. ಟೆಂಪಲ್ ರನ್ ನಡೆಸಿದ ಶೆಟ್ಟರ್
ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಬುಧವಾರ ಹುಬ್ಬಳ್ಳಿಗೆ ಪತ್ನಿ ಶಿಲ್ಪಾ ಅವರೊಂದಿಗೆ ಆಗಮಿಸಿದ ಜಗದೀಶ ಶೆಟ್ಟರ ಅವರು ಶ್ರೀ ಸಿದ್ಧಾರೂಢರ ಮಠಕ್ಕೆ ಭೇಟಿ ನೀಡಿದರು. ಶೆಟ್ಟರ್ ಮಠಕ್ಕೆ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಶೆಟ್ಟರ್ ಹಾಗೂ ನರೇಂದ್ರ ಮೋದಿ ಪರ ಘೋಷಣೆ ಕೂಗಿ ಅದ್ಧೂರಿಯಾಗಿ ಸ್ವಾಗತಿಸಿ, ಆರತಿ ಬೆಳಗಿ ಬರಮಾಡಿಕೊಂಡರು. ಸಿದ್ಧಾರೂಢರ ಹಾಗೂ ಗುರುನಾಥರೂಢರ ಗದ್ದುಗೆಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ನಂತರ ಶ್ರೀಸಿದ್ಧಾರೂಢ ಸ್ವಾಮಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ನಂತರ ಮೂರುಸಾವಿರ ಮಠಕ್ಕೆ ಭೇಟಿ ನೀಡಿದ ಶೆಟ್ಟರ್ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ನಂತರ ಶ್ರೀಗಳು ಶೆಟ್ಟರ ದಂಪತಿ ಸನ್ಮಾನಿಸಿದರು.ಅಲ್ಲಿಂದ ನೇರವಾಗಿ ತಮ್ಮ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಬಿಜೆಪಿ ಮಹಿಳಾ ಕಾರ್ಯಕರ್ತರು ಹಾಗೂ ಕುಟುಂಬಸ್ಥರು ಆರತಿ ಬೆಳಗಿ ಸ್ವಾಗತಿಸಿದರು. ಈ ವೇಳೆ ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ವಿಪ ಸದಸ್ಯ ಪ್ರದೀಪ ಶೆಟ್ಟರ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ನಾಗೇಶ ಕಲಬುರ್ಗಿ, ಮಲ್ಲಿಕಾರ್ಜುನ ಸಾವುಕಾರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.