ಜಗತ್ತಲ್ಲಿ ರಕ್ತದ ಅಗತ್ಯತೆ ಹೆಚ್ಚಿದೆ: ರಾಜಯೋಗಿನಿ ಮಹಾಲಕ್ಷ್ಮೀ

| Published : Aug 25 2025, 01:00 AM IST

ಸಾರಾಂಶ

ಪ್ರತಿ ವರ್ಷ ೨೦ ಲಕ್ಷಕ್ಕೂ ಅಧಿಕ ಜನರು ರಕ್ತದ ಕೊರತೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಪ್ರತಿಯೊಬ್ಬ ೧೮ ರಿಂದ ೬೦ ವರ್ಷ ಪ್ರಾಯದ ಆರೋಗ್ಯಕರ ವ್ಯಕ್ತಿಯೂ ರಕ್ತದಾನ ಮಾಡಬಹುದು.

ಕನ್ನಡಪ್ರಭ ವಾರ್ತೆ ಯಳಂದೂರು

ಪಟ್ಟಣದ ಅಗ್ರಹಾರ ಬೀದಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ವಿಶ್ವ ಬಂಧುತ್ವ ದಿನಾಚರಣೆ ನಿಮಿತ್ತ ರೋಟರಿ ಗ್ರೀನ್‌ವೇ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಮಹಾಲಕ್ಷ್ಮೀಜಿ ಮಾತನಾಡಿ, ರಾಜಯೋಗಿನಿ ಪ್ರಕಾಶಮಣಿ ದಾದೀಜಿ ರವರ ಪುಣ್ಯಸ್ಮೃತಿ ಮತ್ತು ವಿಶ್ವ ಬಂಧುತ್ವ ದಿನದ ಅಂಗವಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇಂದು ವಿಶ್ವದಲ್ಲಿ ಅನೇಕರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಜಗತ್ತಿನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಸವಗಳು ಆಪರೇಷನ್ ಮೂಲಕ ಹೆಚ್ಚಾಗಿ ಆಗುತ್ತಿವೆ. ಕ್ಯಾನ್ಸರ್ ರೋಗದಿಂದ ಅನೇಕರು ಬಳಲುತ್ತಿದ್ದಾರೆ. ಇದಕ್ಕೆಲ್ಲಾ ಮೂಲ ರಕ್ತದ ಅವಶ್ಯಕತೆ ಹೆಚ್ಚಾಗಿದೆ. ಪ್ರತಿ ವರ್ಷ ೨೦ ಲಕ್ಷಕ್ಕೂ ಅಧಿಕ ಜನರು ರಕ್ತದ ಕೊರತೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಪ್ರತಿಯೊಬ್ಬ ೧೮ ರಿಂದ ೬೦ ವರ್ಷ ಪ್ರಾಯದ ಆರೋಗ್ಯಕರ ವ್ಯಕ್ತಿಯೂ ರಕ್ತದಾನ ಮಾಡಬಹುದು, ಇದು ಇನ್ನೊಂದು ಜೀವ ಉಳಿಸುವ ಪುಣ್ಯದ ಕಾರ್ಯವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು. ಇದರಿಂದ ನಮ್ಮ ದೇಹದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತದೆ. ಕ್ಯಾನ್ಸರ್ ಬರುವ ಸಂಭವ ಕಡಿಮೆ ಇರುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನಾವು ರಕ್ತ ನೀಡಿದರೆ ಮತ್ತೆ ೨೪ ರಿಂದ ೩೦ ಗಂಟೆಯೊಳಗೆ ನಮ್ಮ ದೇಹದಲ್ಲಿ ರಕ್ತ ಮತ್ತೆ ಉತ್ಪತ್ತಿಯಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಎಂದು ಮನವಿ ಮಾಡಿದರು.

ರೋಟರಿ ಕ್ಲಬ್‌ನ ಅಧ್ಯಕ್ಷ ವೈ.ಜಿ. ನಿರಂಜನ್, ಖಜಾಂಚಿ ಗೌಡಹಳ್ಳಿ ರವಿ, ಸದಸ್ಯರಾದ ವೈ.ಡಿ. ಸೂರ್ಯನಾರಾಯಣ, ವೈ.ಕೆ. ಮೋಳೆ ನಾಗರಾಜು, ರುದ್ರಯ್ಯ, ಪ್ರಕಾಶ್‌, ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಶೋಭಾ, ಗೀತಾ, ಬಸವರಾಜಪ್ಪ, ಪುಟ್ಟಸ್ವಾಮಿ, ಜಾನಕಮ್ಮ, ಸಾವಿತ್ರಮ್ಮ, ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ರಂಜನಿ, ದುಗ್ಗಹಟ್ಟಿ ಕುಮಾರ್, ಸಾಹಸ್, ಚಂದ್ರು, ಈಶ್ವರ್, ಮಧು, ಶ್ರೀಧರ್, ಚೇತನ್ ಇದ್ದರು.