ಭಾರತದಲ್ಲಿ ಜನರ ಮೌಖಿಕ ಸಂಭಾಷಣೆಯ ಸಂಶೋಧನೆಯ ಅಗತ್ಯ

| Published : Aug 04 2025, 12:30 AM IST

ಭಾರತದಲ್ಲಿ ಜನರ ಮೌಖಿಕ ಸಂಭಾಷಣೆಯ ಸಂಶೋಧನೆಯ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪಾಶ್ಚಾತ್ಯರ ಪ್ರಕಾರ ಇತಿಹಾಸ ಎಂದರೇ ಕಾಲ, ಸ್ಥಳ ಮತ್ತು ಕುರುಹು ಇದ್ದರೇ ಮಾತ್ರ ಅದನ್ನು ಇತಿಹಾಸ ಎಂದು ಒಪ್ಪಿಕೊಳ್ಳುತ್ತಾರೆ

ಕೊಪ್ಪಳ: ಭಾರತದ ಇತಿಹಾಸ ಕೇವಲ ರಾಜರ ಇತಿಹಾಸ ಎನ್ನುವಂತಾಗಿದೆ. ಆದರೆ, ಅದನ್ನು ಮೀರಿಯೂ ಇರುವ ಜನಸಾಮಾನ್ಯರ ಮೌಖಿಕ ಸಂಭಾಷಣೆ ಸಂಶೋಧನೆ ಮಾಡಿದಾಗ ನಿಜವಾದ ಇತಿಹಾಸದ ದರ್ಶನವಾಗುತ್ತದೆ ಎಂದು ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಹೇಳಿದ್ದಾರೆ.

ನಗರದ ಹಿರಿಯ ಸಾಹಿತಿ ಡಾ. ಬಸವರಾಜ ಪೂಜಾರ ಅವರ ನಿವಾಸದಲ್ಲಿ ಮೆಘನಾ ಪ್ರಕಾಶನ ಹಾಗೂ ಕೋಪಣನಾಡು ಸಂಶೋಧನಾ ಸಂಸ್ಥೆ ಜಂಟಿಯಾಗಿ ಹಮ್ಮಿಕೊಂಡಿದ್ದ ಕೃಷ್ಣದೇವರಾಯನ ಸಮಾಧಿ ಹಾಗೂ ಕೆಂಪೇಗೌಡ ಬಂಧನದಲ್ಲಿದ್ದ ಸೆರೆಮನೆ ಎನ್ನುವ ತಮ್ಮದೇ ಸಂಶೋಧನಾ ಕಿರು ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತದಲ್ಲಿ ಕತೆ, ಕಾದಂಬರಿ, ಧಾರ್ಮಿಕ ಗ್ರಂಥಗಳು ರಾಶಿ ರಾಶಿ ಇವೆ. ಇವುಗಳನ್ನು ಹಿಂಡಿದಾಗ ಒಂದು ಗಿಂಡಿಯೂ ಸಹ ಇತಿಹಾಸ ದೊರೆಯುವುದಿಲ್ಲ ಎನ್ನುವ ಆಪಾದನೇ ಇದೆ. ಪಾಶ್ಚಾತ್ಯ ಇತಿಹಾಸಕಾರರು ಭಾರತದಲ್ಲಿ ಇತಿಹಾಸ ಹೇಳು ಎಂದರೇ ಕತೆಗಳನ್ನು ಹೇಳುತ್ತಾರೆ ಎನ್ನುತ್ತಾರೆ.

ಪಾಶ್ಚಾತ್ಯರ ಪ್ರಕಾರ ಇತಿಹಾಸ ಎಂದರೇ ಕಾಲ, ಸ್ಥಳ ಮತ್ತು ಕುರುಹು ಇದ್ದರೇ ಮಾತ್ರ ಅದನ್ನು ಇತಿಹಾಸ ಎಂದು ಒಪ್ಪಿಕೊಳ್ಳುತ್ತಾರೆ. ಆದರೆ, ಭಾರತದ ಇತಿಹಾಸ ರಚನೆಯಲ್ಲಿ ಇದಕ್ಕೆ ಒತ್ತು ನೀಡಿಲ್ಲವಾದ್ದರಿಂದ ನಮ್ಮ ಇತಿಹಾಸ ಸಂಶೋಧನೆ ನಡೆಸುವುದು ಎಂದರೇ ಜನರ ಮೌಖಿಕ ಸಂಭಾಷಣೆ ಸಂಶೋಧನೆಗೆ ಒಳಪಡಿಸಿದಾಗ ನಿಜವಾದ ಇತಿಹಾಸ ದೊರೆಯುತ್ತದೆ ಎಂದರು.

ಶಾಸನಗಳು ಕೇವಲ ರಾಜರ ಹಿರಿಮೆ, ಗರಿಮೆ ಹೇಳುತ್ತವೆ. ರಾಜರ ಬಳಿಯೇ ಇರುತ್ತಿದ್ದ ಇತಿಹಾಸಕಾರರು, ಸಾಹಿತಿಗಳು ಅವರನ್ನು ಕುರಿತು ಬಣ್ಣಿಸಿದ್ದಾರೆಯೇ ಹೊರತು ಅವರು ಸಾಮಾನ್ಯರ ಇತಿಹಾಸ ಹೇಳಿಯೇ ಇಲ್ಲ. ವಿಜಯನಗರ ಸಾಮ್ರಾಜ್ಯದ ಇತಿಹಾಸ ನಮಗೆ ಶಾಸನಗಳಲ್ಲಿ ದೊರೆಯುತ್ತದೆ. ಆದರೆ, ಕುಮಾರರಾಮ ಚರಿತ್ರೆ ಜನಮಾನಸದಲ್ಲಿಯೇ ಇದೆಯೇ ಹೊರತು ಎಲ್ಲಿಯೂ ಶಾಸನಗಳಿಂದ ತಿಳಿದು ಬರುವುದಿಲ್ಲ ಎಂದರು.

ಹೀಗಾಗಿ, ಈಗ ಹೊಸ ಸಂಶೋಧನೆಯ ಪ್ರಕಾರ ಮೌಖಿಕ ಸಾಹಿತ್ಯ ಗಂಭೀರವಾಗಿ ಪರಿಗಣಿಸಿ ನಿಜವಾದ ಸಾಹಿತ್ಯ ಸಂಶೋಧನೆ ಮಾಡಲಾಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಇಂಥ ಅನೇಕ ಸತ್ಯಗಳು ಹುದುಗಿದ್ದು, ಅವುಗಳನ್ನು ಸಂಶೋಧಿಸಿ, ದಾಖಲಿಸುವ ಕಾರ್ಯ ಆಗಬೇಕಾಗಿದೆ ಎಂದರು.

ಕೃಷ್ಣದೇವರಾಯರ ಸಮಾಧಿ ಕುರಿತು ಜನರಲ್ಲಿ ಇರುವ ಅರಿವು ದಾಖಲೆಯಲ್ಲಿ ಇಲ್ಲ. ಹಾಗೆಯೇ ಕೆಂಪೇಗೌಡ ಬಂಧಿಯಾಗಿರುವ ಸೆರೆಮನೆಯ ಕುರಿತು ಜನರು ಹೇಳುತ್ತಾರೆಯಾದರೂ ಆ ಕುರಿತು ದಾಖಲಿಸುವ ಕಾರ್ಯ ಆಗಿರಲಿಲ್ಲ. ಆಗ ಮಾಡಲಾಗಿದೆ ಎಂದರು.

ಹಿರಿಯ ಉಪನ್ಯಾಸಕ ಪ್ರೊ. ಶರಣಬಸಪ್ಪ ಬಿಳಿಎಲಿ ಕೃತಿ ಕುರಿತು ಮಾತನಾಡಿ, ಹಿರಿಯ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಸುಮಾರು 300-400 ವರ್ಷಗಳಿಂದ ಆಗದೆ ಇರುವ ಸಂಶೋಧನೆ ಮಾಡಿ, ಕೆಂಪೇಗೌಡ ಬಂಧನವಾಗಿದ್ದ ಸೆರೆಮನೆ ಪತ್ತೆ ಮಾಡಿ, ಅದರ ಮೇಲೆ ಬೆಳಕು ಚೆಲ್ಲಿದ್ದಾರೆ. ಈ ಮೂಲಕ ಕೆಂಪೇಗೌಡ ಆನೆಗೊಂದಿ ಬಳಿ ಬಂಧಿಯಾಗಿದ್ದರು ಹಾಗೂ ಇಲ್ಲ ಎನ್ನುವ ವಾದಕ್ಕೆ ತೆರೆ ಎಳೆಯುವ ಮಹತ್ವದ ಕಾರ್ಯ ಮಾಡಿದ್ದಾರೆ ಎಂದರು.

ಕೃತಿ ಲೋಕಾರ್ಪಣೆ ಮಾಡಿದ ಡಾ.ಬಸವರಾಜ ಪೂಜಾರ ಮಾತನಾಡಿ, ಕೆಂಪೇಗೌಡ ಬಂಧನದಲ್ಲಿದ್ದ ಸೆರೆಮನೆ ಮೇಲೆ ಡಾ.ಶರಣಬಸಪ್ಪ ಕೋಲ್ಕಾರ ಬೆಳಕು ಚೆಲ್ಲಿದ್ದಾರೆ. ಈ ಕುರಿತು ಕೆಲವರು ಆಕ್ಷೇಪ ಎತ್ತಿದರೂ ಅದಕ್ಕೆ ನಾನು ಉತ್ತರ ನೀಡಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಕೃತಿಯಲ್ಲಿಯೇ ಸಾಕಷ್ಟು ಪುರಾವೆ ಒದಗಿಸಿದ್ದಾರೆ ಎಂದರು.

ಇದೇ ರೀತಿ ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯ ಸಮಾಧಿಯ ಕುರಿತು ಸ್ಪಷ್ಟ ಬೆಳಕು ಚೆಲ್ಲಿದ್ದಾರೆ. ಅವರ ಅರಮನೆ ಪತ್ತೆ ಮಾಡುವ, ಸಂಶೋಧನೆ ಮಾಡುವ ಕಾರ್ಯ ಆಗಬೇಕು ಎಂದರು.

ಗ್ರಂಥದಾನಿ ಡಾ.ಮಹಾಂತೇಶ ಮಲ್ಲನಗೌಡ ಅಧ್ಯಕ್ಷತೆ ವಹಿಸಿದ್ದರು. ಡಾ. ಸಿದ್ಲಿಂಗಪ್ಪ ಕೊಟ್ನೇಕಲ್ ಪ್ರಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ರಾಜಕುಮಾರ ಕಾರ್ಯಕ್ರಮ ನಿರೂಪಿಸಿದರು.