ಪಶ್ಚಿಮಘಟ್ಟದ ಮಂಜು ಮುಸುಕಿದ ಕುದುರೆಮುಖದ ಬೆಟ್ಟಗಳಲ್ಲಿ ಅಪರೂಪದ ನೀಲಕುರಂಜಿ ಹೂವುಗಳು ಅರಳಿದ್ದು, ಪ್ರಕೃತಿ ಪ್ರಿಯರ ಗಮನ ಸೆಳೆದಿವೆ. ಸಾಮಾನ್ಯವಾಗಿ 12 ವರ್ಷಗಳಿಗೊಮ್ಮೆ ಸಮೂಹವಾಗಿ ಅರಳುವ ಈ ಪುಷ್ಪ, ನಿರೀಕ್ಷೆಗಿಂತ ನಾಲ್ಕು ವರ್ಷ ಮುಂಚಿತವಾಗಿಯೇ ಕಾಣಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕಾರ್ಕಳ : ಪಶ್ಚಿಮಘಟ್ಟದ ಮಂಜು ಮುಸುಕಿದ ಕುದುರೆಮುಖದ ಬೆಟ್ಟಗಳಲ್ಲಿ ಅಪರೂಪದ ನೀಲಕುರಂಜಿ ಹೂವುಗಳು ಅರಳಿದ್ದು, ಪ್ರಕೃತಿ ಪ್ರಿಯರ ಗಮನ ಸೆಳೆದಿವೆ. ಸಾಮಾನ್ಯವಾಗಿ 12 ವರ್ಷಗಳಿಗೊಮ್ಮೆ ಸಮೂಹವಾಗಿ ಅರಳುವ ಈ ಪುಷ್ಪ, ನಿರೀಕ್ಷೆಗಿಂತ ನಾಲ್ಕು ವರ್ಷ ಮುಂಚಿತವಾಗಿಯೇ ಕಾಣಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗಂಗಡಿಕಲ್ಲು, ಚಿಟ್ಟೆಗುಡ್ಡ ಹಾಗೂ ಕುದುರೆಮುಖ ಪರ್ವತ ಪ್ರದೇಶಗಳ ಶೋಲಾ ಹುಲ್ಲುಗಾವಲುಗಳಲ್ಲಿ ಕಳೆದ ಒಂದು ತಿಂಗಳಿನಿಂದ ನೀಲಕುರಂಜಿ ಹೂವುಗಳು ಅರಳಿವೆ. 2018ರಲ್ಲಿ ಇಲ್ಲಿ ಸಮೂಹ ಅರಳುವಿಕೆ ಕಂಡುಬಂದ ಹಿನ್ನೆಲೆಯಲ್ಲಿ ಮುಂದಿನ ಪ್ರಮುಖ ಅರಳುವಿಕೆ 2030ರಲ್ಲಿ ನಿರೀಕ್ಷಿಸಲಾಗಿತ್ತು. ಆದರೆ 2026ರಲ್ಲೇ ಹೂವು ಕಾಣಿಸಿಕೊಂಡಿರುವುದು ವಿಶೇಷವಾಗಿದೆ.

ಹವಾಮಾನ ಬದಲಾವಣೆಯ ಪ್ರಭಾವವೇ?

ನೀಲಕುರಂಜಿ ಮುಂಚಿತವಾಗಿ ಅರಳಿರುವುದಕ್ಕೆ ನಿಖರವಾದ ವೈಜ್ಞಾನಿಕ ಕಾರಣ ಇನ್ನೂ ದೃಢಪಟ್ಟಿಲ್ಲ. ಜಾಗತಿಕ ಹವಾಮಾನ ಬದಲಾವಣೆಯಿಂದ ಉಷ್ಣಾಂಶ, ಮಳೆ ಹಾಗೂ ಮಣ್ಣಿನ ತೇವಾಂಶದಲ್ಲಿ ಉಂಟಾಗುತ್ತಿರುವ ವ್ಯತ್ಯಾಸಗಳು ಸಸ್ಯಗಳ ಬೆಳವಣಿಗೆ ಮತ್ತು ಹೂಬಿಡುವಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದರೆ ಕುದುರೆಮುಖದಲ್ಲಿ ಈ ಬಾರಿ ನೀಲಕುರಂಜಿ ಮುಂಚಿತವಾಗಿ ಅರಳಿರುವುದಕ್ಕೆ ಹವಾಮಾನ ಬದಲಾವಣೆಯೇ ನೇರ ಕಾರಣ ಎಂದು ಹೇಳಲು ಸದ್ಯಕ್ಕೆ ವೈಜ್ಞಾನಿಕ ಪುರಾವೆ ಇಲ್ಲ.

ಸ್ಥಳೀಯ ಪರಿಸರ ಪರಿಸ್ಥಿತಿ ಹಾಗೂ ಸಸ್ಯದ ಬೆಳವಣಿಗೆ ಹಂತದಲ್ಲಿನ ವ್ಯತ್ಯಾಸವೂ ಕಾರಣವಾಗಿರಬಹುದು. ಹೀಗಾಗಿ ಈ ಅಸಾಮಾನ್ಯ ಮುಂಚಿತ ಅರಳುವಿಕೆಯ ಹಿಂದಿನ ಕಾರಣವನ್ನು ತಿಳಿಯಲು ಸಸ್ಯಶಾಸ್ತ್ರಜ್ಞರು ಹಾಗೂ ಪರಿಸರ ತಜ್ಞರಿಂದ ಹೆಚ್ಚಿನ ಅಧ್ಯಯನ ಅಗತ್ಯವಾಗಿದೆ.

ಪರಾಗಸ್ಪರ್ಶ ಜೀವಿಗಳಿಗೆ ಆಹಾರಧಾರೆನೀಲಕುರಂಜಿ ಸಸ್ಯವು ಹಲವು ವರ್ಷಗಳ ಕಾಲ ಬೆಳವಣಿಗೆಯಲ್ಲಿ ಶಕ್ತಿ ಸಂಗ್ರಹಿಸಿ, ಬಳಿಕ ಹೂಬಿಟ್ಟು ಬೀಜ ಉತ್ಪಾದನೆಯ ನಂತರ ತನ್ನ ಜೀವನಚಕ್ರವನ್ನು ಪೂರ್ಣಗೊಳಿಸುತ್ತದೆ. ಹೂಬಿಡುವ ಅವಧಿಯಲ್ಲಿ ಜೇನುನೊಣ, ಚಿಟ್ಟೆ ಸೇರಿದಂತೆ ಹಲವು ಪರಾಗಸ್ಪರ್ಶ ಜೀವಿಗಳಿಗೆ ಹೂವುಗಳು ಆಹಾರ ಮತ್ತು ಪರಾಗದ ಪ್ರಮುಖ ಮೂಲವಾಗುತ್ತವೆ.ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಕೆಲವು ಶೋಲಾ ಅರಣ್ಯ ಪ್ರದೇಶಗಳಲ್ಲಿ ಕಂಡುಬರುವ ಈ ಅಪರೂಪದ ಸಸ್ಯವು ಕುದುರೆಮುಖದ ಸೂಕ್ಷ್ಮ ಪರಿಸರ ವ್ಯವಸ್ಥೆಯಲ್ಲೂ ಮಹತ್ವದ ಪಾತ್ರ ಹೊಂದಿದೆ.

ಹೂವು ಕೀಳದಂತೆ ಅರಣ್ಯ ಇಲಾಖೆ ಮನವಿ

ನೀಲಕುರಂಜಿ ಸೇರಿದಂತೆ ಯಾವುದೇ ಹೂವು ಅಥವಾ ಸಸ್ಯಗಳನ್ನು ಮುಟ್ಟುವುದು, ಕೀಳುವುದು ಅಥವಾ ಹಾನಿಗೊಳಿಸುವುದನ್ನು ಪ್ರವಾಸಿಗರು ತಪ್ಪಿಸಬೇಕು ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಡಿಸಿಎಫ್ ರುಥ್ರೇನ್ ಸೂಚಿಸಿದ್ದಾರೆ.

“ಅಪರೂಪದ ನೀಲಕುರಂಜಿ ಹೂವಿನ ಸೌಂದರ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲಿ. ಆದರೆ ಹೂವು ಅಥವಾ ಸಸ್ಯಗಳನ್ನು ಮುಟ್ಟುವುದು, ಕೀಳುವುದು ಹಾಗೂ ಹಾನಿಗೊಳಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಸಸ್ಯದ ಆವಾಸಸ್ಥಾನದ ಸಂರಕ್ಷಣೆಗೆ ಎಲ್ಲರೂ ಸಹಕರಿಸಬೇಕು. ಪ್ರದೇಶದಲ್ಲಿ ನಿರಂತರ ನಿಗಾ ವಹಿಸಲಾಗುತ್ತಿದ್ದು, ನಿಯಮ ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ.”— ರುಥ್ರೇನ್, ಡಿಸಿಎಫ್, ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ