ಒಕ್ಕೂಟ ವ್ಯವಸ್ಥೆಯಲ್ಲಿ ದಕ್ಷಿಣ ರಾಜ್ಯಗಳ ಕಡೆಗಣನೆ ಆಕ್ಷೇಪಾರ್ಹ

| Published : Nov 02 2024, 01:18 AM IST / Updated: Nov 02 2024, 01:19 AM IST

ಸಾರಾಂಶ

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಕನ್ನಡ ಚುನಾವಣೆಯ ವಿಷಯ ಆಗಬೇಕಾಗಿದೆ. ಒಕ್ಕೂಟ ಸರ್ಕಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕನ್ನಡಿಗರು ಧ್ವನಿ ಎತ್ತಬೇಕಾಗಿದೆ ಎಂದು ಬೆಂ.ಗ್ರಾ. ಜಿಲ್ಲಾ ಕಸಾಪ ಮಾಜಿ ಕೋಶಾಧ್ಯಕ್ಷ ನಂ.ಮಹಾದೇವ್ ತಿಳಿಸಿದರು.

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಕನ್ನಡ ಚುನಾವಣೆಯ ವಿಷಯ ಆಗಬೇಕಾಗಿದೆ. ಒಕ್ಕೂಟ ಸರ್ಕಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕನ್ನಡಿಗರು ಧ್ವನಿ ಎತ್ತಬೇಕಾಗಿದೆ ಎಂದು ಬೆಂ.ಗ್ರಾ. ಜಿಲ್ಲಾ ಕಸಾಪ ಮಾಜಿ ಕೋಶಾಧ್ಯಕ್ಷ ನಂ.ಮಹಾದೇವ್ ತಿಳಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಒಕ್ಕೂಟ ವ್ಯವಸ್ಥೆಯ ಸರ್ಕಾರದಲ್ಲಿ ಹಿಂದಿ ಭಾಷೆಯ ರಾಜ್ಯಗಳಿಗೆ ಸಿಗುತ್ತಿರುವ ಮನ್ನಣೆ ದಕ್ಷಿಣ ಭಾರತದ ರಾಜ್ಯಗಳಿಗೆ ಸಿಗುತ್ತಿಲ್ಲ. ಕರ್ನಾಟಕ ರಾಜ್ಯಕ್ಕೆ ತೆರಿಗೆ ಪಾಲು ಸಮರ್ಪಕವಾಗಿ ಸಿಗುತ್ತಿಲ್ಲ. ನಮ್ಮ ರಾಜ್ಯದಲ್ಲಿರುವ ಬ್ಯಾಂಕ್, ಅಂಚೆ, ರೈಲ್ವೆ ಮುಂತಾದ ಕಡೆಗಳಲ್ಲಿ ಕನ್ನಡ ಭಾಷೆಗೆ ಸೂಕ್ತ ಮನ್ನಣೆ ಇಲ್ಲದಾಗಿದೆ. ಒಕ್ಕೂಟ ವ್ಯವಸ್ಥೆ ಸರ್ಕಾರದಲ್ಲಿ ಕರ್ನಾಟಕದ ಜನಪ್ರತಿನಿಧಿಗಳು ಕನ್ನಡದ ಹಿತವನ್ನು ಕಾಪಾಡುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕಾಗಿದೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್ ಮಾತನಾಡಿ, ಕನ್ನಡಿಗರ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣವಾಯಿತು. ಕರ್ನಾಟಕದಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅಗ್ರಸ್ಥಾನ ಇರಲೇಬೇಕು. ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡ ನಾಡು, ನುಡಿ ವಿಚಾರದಲ್ಲಿ ಅಭಿಮಾನ ಹೊಂದಿರಬೇಕೆಂದು ಕರ್ನಾಟಕದಲ್ಲಿ ಪ್ರತಿಯೊಬ್ಬ ಕನ್ನಡಿಗರೂ ಕನ್ನಡದ ರಾಯಭಾರಿಗಳಾಗಿ ಕನ್ನಡದ ಕೆಲಸ ಮಾಡಬೇಕಾಗಿದೆ ಎಂದರು.

ಪ್ರಾಂಶುಪಾಲ ಎಂ.ಸಿ.ಮಂಜುನಾಥ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಆಯುಕ್ತ ವೆಂಕಟರಾಜು, ಭಾರತ ಸೇವಾದಳ‌ ಕಾರ್ಯದರ್ಶಿ ಜ್ಯೋತಿಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಗಂಗರಾಜು ಶಿರವಾರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಗೋವಿಂದರಾಜು, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಇದೇ ವೇಳೆ ನಂ.ಮಹದೇವ್, ಡಿ.ಶ್ರೀಕಾಂತ ಮತ್ತು ಜಿ.ಸುರೇಶ್‌ ಅವರನ್ನು ಅಭಿನಂದಿಸಲಾಯಿತು.

1ಕೆಡಿಬಿಪಿ1- ದೊಡ್ಡಬಳ್ಳಾಪುರದ ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಲಾಯಿತು.