ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಕೃಷ್ಣಾ ನದಿ ತೀರದ ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಸಿದ್ಧವಿದೆ. ಈಗಾಗಲೇ ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚಿಂತನೆ ನಡೆದಿದೆ. ಸಂತ್ರಸ್ತರು ತಾವೇ ಸ್ಥಳ ಗುರುತಿಸಿ ನಿವೇಶನ ನಿರ್ಮಿಸಿಕೊಳ್ಳಲು ಸಿದ್ಧವಿದ್ದರೇ ಸರ್ಕಾರ ಪರಿಹಾರ ಕೊಡಲು ಸಾಧ್ಯವಿದೆ. ಇದರಿಂದ ಮಾತ್ರ ಶಾಶ್ವತ ಪರಿಹಾರ ಕಾಣಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಪಟ್ಟಣದಲ್ಲಿ ಮಂಗಳವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿವೃಷ್ಟಿ, ಇಲ್ಲವೇ ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾದಲ್ಲಿ ಪ್ರತಿ ಬಾರಿಯೂ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಬರುತ್ತದೆ. ನೆರೆಪೀಡಿತ ಗ್ರಾಮಸ್ಥರಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬುವುದು ಅಲ್ಲಿನ ಜನರ ಬಹುವರ್ಷಗಳ ಬೇಡಿಕೆಯಾಗಿದೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದ್ದು, ಮುಖ್ಯಮಂತ್ರಿಗಳು ಸೇರಿದಂತೆ ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಿ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು ಎಂದರು.ತಾಲೂಕಿನ ನೆರೆಪೀಡಿತ ಗ್ರಾಮಗಳ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದುಕೊಂಡಿದ್ದೇನೆ. ಸದ್ಯ ನದಿಯಲ್ಲಿ ಒಳಹರಿವು ಕಡಿಮೆಯಾಗುತ್ತಿದ್ದು, ಮಹಾರಾಷ್ಟ್ರದಲ್ಲಿಯೂ ಮಳೆ ಕಡಿಮೆಯಾಗಿರುವುದರಿಂದ ಆತಂಕ ಪಡುವ ಅಗತ್ಯವಿಲ್ಲ. ಆದರೂ ಕೂಡ ಸದ್ಯ 16 ಕಾಳಜಿ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಊಟ ಮತ್ತು ಉಪಹಾರದ ಜೊತೆಗೆ ಇನ್ನಿತರ ಮೂಲ ಸೌಲಭ್ಯಗಳ ಕೊರತೆಯಾಗದಂತೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲವು ಗ್ರಾಮಗಳ ಸಂಪರ್ಕ ರಸ್ತೆಯನ್ನು ಎತ್ತರಿಸುವುದರಿಂದ ಗ್ರಾಮಸ್ಥರ ಸ್ಥಳಾಂತರ ಮಾಡುವುದನ್ನು ಮತ್ತು ನೆರೆಹಾವಳಿ ತಡೆಯಬಹುದಾಗಿದೆ. ಇದಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದು ಲೋಕೋಪಯೋಗಿ ಇಲಾಖೆಗೆ ಬರುವುದರಿಂದ ಶೀಘ್ರದಲ್ಲಿಯೇ ಅನುದಾನ ಬಿಡುಗಡೆಗೊಳಿಸಿ ರಸ್ತೆಗಳನ್ನು ಎತ್ತರಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ಸದಾಶಿವ ಬುಟಾಳಿ, ಸುರೇಶಗೌಡ ಪಾಟೀಲ, ರಾವಸಾಬ ಐಹೊಳೆ, ಅಸಲಂ ನಾಲಬಂದ, ರಮೇಶ ಸಿಂದಗಿ, ಸಿದ್ದಾರ್ಥ ಸಿಂಗೆ, ಬಸವರಾಜ ಬುಟಾಳಿ ಇತರರು ಉಪಸ್ಥಿತರಿದ್ದರು.ಈಗಾಗಲೇ ಕೆಲವು ಗ್ರಾಮಗಳ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರಗಳಲ್ಲಿ ನಿವೇಶನ ನಿರ್ಮಿಸಿಕೊಳ್ಳಲು ಹಕ್ಕುಪತ್ರ ನೀಡಬೇಕಾಗಿದ್ದು, ಈ ಬಗ್ಗೆ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಕೂಡಲೇ ಆ ಗ್ರಾಮಸ್ಥರಿಗೆ ಹಕ್ಕುಪತ್ರಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ.-ಸತೀಶ ಜಾರಕಿಹೊಳಿ
ಜಿಲ್ಲಾ ಉಸ್ತುವಾರಿ ಸಚಿವರು.