ಉದ್ಘಾಟನೆ ಭಾಗ್ಯ ಕಾಣದ ಅಗ್ನಿಶಾಮಕ ಠಾಣೆ ನೂತನ ಕಟ್ಟಡ

| Published : Oct 27 2025, 12:30 AM IST

ಉದ್ಘಾಟನೆ ಭಾಗ್ಯ ಕಾಣದ ಅಗ್ನಿಶಾಮಕ ಠಾಣೆ ನೂತನ ಕಟ್ಟಡ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು ₹೩ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಟ್ಟಣದ ಅಗ್ನಿಶಾಮಕ ಠಾಣೆ ಕಟ್ಟಡ ಕಾಮಗಾರಿ ಪೂರ್ಣಗೊಂಡು ಸುಮಾರು ೧ ವರ್ಷ ಕಳೆದರೂ ಇದುವರೆಗೂ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ.

₹೩ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ । 1 ವರ್ಷ ಕಳೆದರೂ ಉದ್ಘಾಟನೆ ಇಲ್ಲ, ಮಾಸಿಹೋಗುತ್ತಿರುವ ಬಣ್ಣ

ಸಂತೋಷ ದೈವಜ್ಞ

ಕನ್ನಡಪ್ರಭ ವಾರ್ತೆ ಮುಂಡಗೋಡ

ಸುಮಾರು ₹೩ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಟ್ಟಣದ ಅಗ್ನಿಶಾಮಕ ಠಾಣೆ ಕಟ್ಟಡ ಕಾಮಗಾರಿ ಪೂರ್ಣಗೊಂಡು ಸುಮಾರು ೧ ವರ್ಷ ಕಳೆದರೂ ಇದುವರೆಗೂ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ. ಇದರಿಂದ ಉದ್ಘಾಟನೆಗೂ ಮುನ್ನವೇ ಕಟ್ಟಡಕ್ಕೆ ಹಚ್ಚಿದ್ದ ಬಣ್ಣ ಮಾಸಿಹೋಗುತ್ತಿದೆ.

ಕೆಲವರ್ಷಗಳ ಹಿಂದೆ ತಾಲೂಕಿನ ಯಾವುದೇ ಮೂಲೆಯಲ್ಲಿ ಅಗ್ನಿ ಅನಾಹುತ ನಡೆದರೂ ಆ ಸಮಯದಲ್ಲಿ ಶಿರಸಿ, ಹುಬ್ಬಳ್ಳಿ, ಹಾನಗಲ್ ತಾಲೂಕಿಗೆ ಮಾಹಿತಿ ನೀಡಿ ಅಗ್ನಿಶಾಮಕ ವಾಹನ ಕರೆಸಬೇಕಾಗಿತ್ತು. ಆ ವಾಹನ ಬರುವಷ್ಟರಲ್ಲಿ ಬೆಂಕಿ ಸಂಪೂರ್ಣ ವ್ಯಾಪಿಸಿ ಹೆಚ್ಚು ಅನಾಹುತ ಸಂಭವಿಸುತ್ತಿತ್ತು. ಹೀಗಾಗಿ ಮುಂಡಗೋಡ ಜನತೆಯ ಹಲವು ವರ್ಷಗಳ ಪ್ರತ್ಯೇಕ ಅಗ್ನಿಶಾಮಕ ಠಾಣೆ ಬೇಡಿಕೆ ಹಿನ್ನೆಲೆ ೨೦೧೩ರಲ್ಲಿ ಅಂದಿನ ಶಾಸಕ ವಿ.ಎಸ್. ಪಾಟೀಲ ಅವರ ಇಚ್ಛಾಶಕ್ತಿ ಹಾಗೂ ಪ್ರಯತ್ನದ ಫಲವಾಗಿ ತಾಲೂಕಿಗೆ ಪ್ರತ್ಯೇಕ ಅಗ್ನಿಶಾಮಕ ಠಾಣೆ ಮಂಜೂರಿ ಮಾಡಿಸಿ, ಇಲ್ಲಿಯ ಪಂಚಾಯತ್ ರಾಜ್ ಇಲಾಖೆಯ ಕಚೇರಿಯ ಆವರಣದಲ್ಲಿ ತಾತ್ಕಾಲಿಕವಾಗಿ ಅಗ್ನಿಶಾಮಕ ಠಾಣೆ ನಿರ್ಮಿಸಿ, ಅಗ್ನಿಶಾಮಕ ವಾಹನ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಸುಮಾರು ೭ ವರ್ಷಗಳ ಕಾಲ ಇಲ್ಲಿಯೇ ಕಾರ್ಯನಿರ್ವಹಿಸಿತು. ೨೦೨೦ರಲ್ಲಿ ಪಟ್ಟಣದ ಕೃಷಿ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಪಪಂನಿಂದ ಕೊಳವೆಬಾವಿ ಕೊರೆದು ತಾತ್ಕಾಲಿಕ ಶೆಡ್ ನಿರ್ಮಿಸಿ, ಅಗ್ನಿಶಾಮಕ ಠಾಣೆ ಸ್ಥಳಾಂತರಿಸಲಾಯಿತು. ಆ ಬಳಿಕ ಶಾಸಕ ಶಿವರಾಮ ಹೆಬ್ಬಾರ ಸಚಿವರಾದ ವೇಳೆಯಲ್ಲಿ ಅಗ್ನಿಶಾಮಕ ಠಾಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಎಪಿಎಂಸಿ ಆವರಣದಲ್ಲಿ ಲೀಜ್ ಮೂಲಕ ಜಾಗ ಪಡೆದು ಸುಮಾರು ₹೩ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಅನುದಾನ ಮಂಜೂರಿ ಮಾಡಲಾಯಿತು. ಅದರಂತೆ ಈಗಾಗಲೇ ಸುಸಜ್ಜಿತವಾದ ಅಗ್ನಿಶಾಮಕ ಠಾಣೆ ಕಟ್ಟಡ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿ ನಿಂತಿದೆ.

ಹೆಚ್ಚುವರಿ ವಾಹನಕ್ಕೆ ಆಗ್ರಹ:

ಸದ್ಯ ಇಲ್ಲಿಯ ಅಗ್ನಿಶಾಮಕ ಠಾಣೆಯಲ್ಲಿ ಒಂದೇ ಒಂದು ವಾಹನ ಕಾರ್ಯನಿರ್ವಹಿಸುತ್ತಿರುವುದರಿಂದ ಒಂದಕ್ಕಿಂತ ಹೆಚ್ಚು ಕಡೆ ಅಗ್ನಿ ಅಪಘಾತ ನಡೆದರೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ತಾಲೂಕು ವಿಸ್ತಾರವಾಗಿರುವುದರಿಂದ ಕನಿಷ್ಠ ೨ ಅಗ್ನಿಶಾಮಕ ವಾಹನ ನೀಡಬೇಕಿದೆ. ಸ್ವಂತ ಕಟ್ಟಡ ಇಲ್ಲದ ಕಾರಣದಿಂದ ಒಂದೇ ಒಂದು ಅಗ್ನಿಶಾಮಕ ವಾಹನ ಕಾರ್ಯನಿರ್ವಹಿಸುತ್ತಿತ್ತು. ಹೊಸದಾಗಿ ನಿರ್ಮಾಣ ಮಾಡಲಾಗಿರುವ ಠಾಣೆಯಲ್ಲಿ ಮೂರು ಅಗ್ನಿಶಾಮಕ ವಾಹನ ನಿಲ್ಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಅದರಂತೆ ಹೆಚ್ಚುವರಿ ವಾಹನ ಮತ್ತು ಸಿಬ್ಬಂದಿ ನೇಮಿಸಬೇಕೆಂಬುದು ನಾಗರಿಕರ ಆಗ್ರಹವಾಗಿದೆ.