ಕನ್ನಡಪ್ರಭ ವಾರ್ತೆ ಅರಸೀಕೆರೆ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಘನತೆ ಮತ್ತು ಸಂಘಟನಾ ಶಕ್ತಿಯನ್ನು ಮತ್ತಷ್ಟು ವೃದ್ಧಿಸುವ ಹೊಣೆಗಾರಿಕೆ ನೂತನ ಪದಾಧಿಕಾರಿಗಳ ಮೇಲಿದೆ ಎಂದು ಸಹಾಯಕ ಚುನಾವಣಾಧಿಕಾರಿ ಎ. ಎಲ್. ಮೋಹನ್ ಕುಮಾರ್ ಅಭಿಪ್ರಾಯಪಟ್ಟರು.ನಗರದ ಪ್ರವಾಸಿ ಮಂದಿರದಲ್ಲಿ ಮಹಾಸಭೆಯ ತಾಲೂಕು ಘಟಕದ ನೂತನ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, “ಸಂಘಟನೆಯ ಕೊರತೆಯಿಂದ ಸಮುದಾಯ ಹಲವು ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಹಿರಿಯರು ಕಟ್ಟಿದ ಮಹಾಸಭೆಯ ಗೌರವ ಕಾಪಾಡುವುದರ ಜೊತೆಗೆ ಸರ್ಕಾರದ ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯ ನಡೆಯಬೇಕು” ಎಂದು ಹೇಳಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಉಪಾಧ್ಯಕ್ಷ ಎ.ಬಿ. ಗುರುಸಿದ್ದೇಶ್ ಮಾತನಾಡಿ, “ರಾಜಕೀಯ, ಶಿಕ್ಷಣ, ಆರ್ಥಿಕ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ. ಒಳಪಂಗಡಗಳ ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡದೆ ಎಲ್ಲರೂ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು” ಎಂದು ಕರೆ ನೀಡಿದರು.
ನೂತನ ಅಧ್ಯಕ್ಷ ಶೇಖರ್ ಸಂಕೋಡನಹಳ್ಳಿ ಮಾತನಾಡಿ ಹಿರಿಯರ ಮಾರ್ಗದರ್ಶನದಲ್ಲಿ ದೊರೆತಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಸಮುದಾಯದ ಸಂಘಟನೆ ಬಲಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.ತಾಲೂಕು ಘಟಕದ ಅಧ್ಯಕ್ಷ, ನಿರ್ದೇಶಕ ಸೇರಿದಂತೆ 20 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇಖರಪ್ಪ (ಶೇಖರ್ ಸಂಕೋಡನಹಳ್ಳಿ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಎಸ್. ಎಂ.ಎಸ್. ಕುಮಾರ್, ಆರ್.ಜಿ. ರಾಘವೇಂದ್ರ, ಆನಂದ್, ಚಂದ್ರಶೇಖರ್, ಶಶಿಧರ್, ಪವನ್ ಎ.ಪಿ., ಜಗದೀಶ್, ವಿರೂಪಾಕ್ಷಪ್ಪ, ಭರತೇಶ್, ಲೋಕೇಶ್ ನೀರಗುಂದ, ಓಂಕಾರಮೂರ್ತಿ, ಮಲ್ಲೇಶ್, ಹೇಮಾವತಿ, ಗೌರಮ್ಮ, ಸರೋಜಾ ಹಾಗೂ ಪ್ರೇಮಾ ಸೇರಿದಂತೆ ಇತರರಿಗೆ ಪ್ರಮಾಣಪತ್ರ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ನಾಗಸಮುದ್ರ ಶಶಿಧರ್, ಮಹೇಂದ್ರ, ಗಗನ್, ಸಿದ್ದೇಶ್ ರಾಮನಹಳ್ಳಿ, ನಂಜುಂಡಸ್ವಾಮಿ, ಲಿಂಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.