- ಬಾಗಲಕೋಟೆ ಜಿಲ್ಲೆ ಮೂಲ, ಪಶು ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವೀಧರ

- ಚಿಂಚೋಳಿ, ಬೆಂಗಳೂರು ಗ್ರಾಮಾಂತರ, ಹಿರಿಯೂರು, ಬೆಂಗಳೂರು, ಮೈಸೂರಲ್ಲಿ ಕರ್ತವ್ಯ

- ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿದ ದುರಂತದಲ್ಲಿ ಅಮಾನತುಗೊಂಡಿದ್ದ ಡಿಸಿಪಿಯಾಗಿದ್ದರು

- ದಾವಣಗೆರೆಯಿಂದ ವರ್ಗಾವಣೆಯಾದ ಉಮಾ ಪ್ರಶಾಂತ್‌ ಅವರಿಗೆ ಇನ್ನೂ ಸ್ಥಳ ತೋರಿಸಿಲ್ಲ

- - - ಕನ್ನಡಪ್ರಭ ವಾರ್ತೆ ದಾವಣಗೆರೆ


ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ 3 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಉಮಾ ಪ್ರಶಾಂತ ಜಿಲ್ಲೆಯಿಂದ ವರ್ಗಾವಣೆಯಾಗಿದ್ದಾರೆ. ಈಗ ಅವರ ಸ್ಥಾನಕ್ಕೆ ಗುಪ್ತಚರ ವಿಭಾಗದ ಎಸ್‌ಪಿ ಆಗಿದ್ದ ಡಾ.ಶೇಖರ್ ಎಚ್. ಟೆಕ್ಕಣ್ಣನವರ್‌ ಅವರನ್ನು ನೂತನ ಎಸ್‌ಪಿ ಆಗಿ ಸರ್ಕಾರ ನಿಯುಕ್ತಿಗೊಳಿಸಿದೆ.

ಬಾಗಲಕೋಟೆ ಜಿಲ್ಲೆ ಬಿಳಿಗಿರಿ ತಾಲೂಕಿನ ನಾಗರಹಾಳ ಗ್ರಾಮದ ಡಾ.ಶೇಖರ ಎಚ್. ಟೆಕ್ಕಣ್ಣನವರ್ ಪಶು ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಕಲಬುರಗಿಯ ಚಿಂಚೋಳಿಯಲ್ಲಿ ಕೆಲ ತಿಂಗಳ ಕಾಲ ಪಶುವೈದ್ಯರಾಗಿ ಸೇವೆ ಸಲ್ಲಿಸಿ, ನಂತರ ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆ ಮೂಲಕ 2008ರ ಕೆಪಿಎಸ್ ಬ್ಯಾಚ್‌ ಅಧಿಕಾರಿಯಾಗಿ ಪೊಲೀಸ್ ಇಲಾಖೆಗೆ ಸೇರ್ಪಡೆ ಆಗಿದ್ದವರು.

ಈ ಹಿಂದೆ 1 ವರ್ಷ ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ ಪ್ರೊಬೇಷನರಿ ಕರ್ತವ್ಯ ನಿರ್ವಹಿಸಿದ್ದ ಡಾ.ಶೇಖರ್ ಟೆಕ್ಕಣ್ಣನವರ್‌, 2010-12ರ ಅ‍ವಧಿಯಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಉಪ ವಿಭಾಗ, 2012-14ರಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ಉಪ ವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಪದೋನ್ನತಿ ಪಡೆದು, ಬೆಂಗಳೂರು ನಗರ ಗುಪ್ತ ವಾರ್ತೆ ವಿಭಾಗದ ಡಿಸಿಪಿಯಾಗಿ 5 ತಿಂಗಳಿನಿಂದ ಕಾರ್ಯ ನಿರ್ವಹಿಸಿದ್ದು, ಮೈಸೂರು ನಗರದ ಕಾನೂನು ಮತ್ತು ಮತ್ತು ಸುವ್ಯವಸ್ಥೆಯ 19ನೇ ಉಪ ಪೊಲೀಸ್ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ ಅನುಭವ ಡಾ.ಶೇಖರ್ ಟೆಕ್ಕಣ್ಣನವರ್ ಹೊಂದಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿದ ದುರಂತದಲ್ಲಿ ರಾಜ್ಯ ಸರ್ಕಾರ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸೇರಿದಂತೆ ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದು, ಹೀಗೆ ಅಮಾನತು ಆಗಿದ್ದ ಅಧಿಕಾರಿಗಳ ಪೈಕಿ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿದ್ದ ಶೇಖರ್ ಎಚ್.ಟೆಕ್ಕಣ್ಣನವರ್ ಸಹ ಒಬ್ಬರು.

ಇದೀಗ ದಾವಣಗೆರೆ ನೂತನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ. ದಾವಣಗೆರೆಯಿಂದ ವರ್ಗಾವಣೆಯಾದ ಉಮಾ ಪ್ರಶಾಂತ್‌ರಿಗೆ ಸ್ಥಳವನ್ನು ತೋರಿಸಿಲ್ಲ.

- - -

-10ಕೆಡಿವಿಜಿ15: ಡಾ.ಶೇಖರ್ ಎಚ್. ಟೆಕ್ಕಣ್ಣನವರ್.