ಮುಂದಿನ 4 ವರ್ಷ ಮಾಲೂರು ತಾಲೂಕು ಅಭಿವೃದ್ಧಿ ಪರ್ವ

| Published : Apr 30 2024, 02:02 AM IST

ಸಾರಾಂಶ

ಮುಂದಿನ ನಾಲ್ಕು ವರ್ಷ ತಾಲೂಕಿನ ಅಭಿವೃದ್ಧಿ ಪರ್ವ ಪ್ರಾರಂಭವಾಗಲಿದೆ. ಬಸ್ ನಿಲ್ದಾಣ ಅಭಿವೃದ್ಧಿಗಾಗಿ ೧೧ ಕೋಟಿ ವ್ಯಯ ಮಾಡಲಾಗುತ್ತಿದ್ದು, ಜೂನ್‌ನಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ೧೦ ಕೋಟಿ ವೆಚ್ಚದಲ್ಲಿ ದೊಡ್ಡಕೆರೆ ಅಭಿವೃದ್ಧಿ ಕಾಮಗಾರಿ

ಕನ್ನಡಪ್ರಭ ವಾರ್ತೆ ಮಾಲೂರು

ಮುಂದಿನ ನಾಲ್ಕು ವರ್ಷಗಳಲ್ಲಿ ತಾಲೂಕಿನಲ್ಲಿ ಅಭಿವೃದ್ಧಿ ಪರ್ವ ಕಾಣಲಿದ್ದು, ಚುನಾವಣೆ ನೀತಿ ಸಂಹಿತೆ ಮುಗಿದ ತಕ್ಷಣ ಸರಣಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಅವರು ಇಲ್ಲಿನ ಸುದ್ದಗುಂಟೆ ಶ್ರೀ ಆಂಜನೇಯಸ್ವಾಮಿ ದೇವಾಲಯ ಬಳಿ ಆಧುನೀಕರಣಗೊಳ್ಳುತ್ತಿರುವ ಕಲ್ಯಾಣಿ ಕಾಮಗಾರಿ ವಿಕ್ಷೀಸಿ ಮಾತನಾಡಿದ ಅ‍ವರು, ಮೇ ೫ ರಂದು ಮಾಲೂರಿನಲ್ಲಿ ನಡೆಯಲಿರುವ ಹೂವಿನ ಕರಗ ರಾಜ್ಯ ಸೇರಿದಂತೆ ಪಕ್ಕದ ರಾಜ್ಯಗಳಲ್ಲಿ ಪ್ರಸಿದ್ದವಾಗಿದ್ದು, ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ ಎಂದರು.

ಕಲ್ಯಾಣಿ ಅಧುನೀಕರಣಕ್ಕೆ ₹25 ಲಕ್ಷ

ಕರಗ ಮಹೋತ್ಸವ ಪ್ರಾರಂಭವಾಗುವುದೇ ಈ ಕಲ್ಯಾಣಿಯಿಂದ ಹಸಿಕರಗವನ್ನು ಹೊರಗೆ ತರುವ ಮೂಲಕ.ಆ ಅದ್ಬುತ ಕ್ಷಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಈ ಕಲ್ಯಾಣಿ ಬಳಿ ಜಮಾಯಿಸಲಿದ್ದು, ಅವರ ಸುರಕ್ಷತೆಗಾಗಿ ಈ ಕಲ್ಯಾಣಿಯನ್ನು ೨೫ ಲಕ್ಷ ರು.ಗಳನ್ನು ನಗರೋತ್ಥಾನ ಯೋಜನೆಯಡಿ ಮಂಜೂರು ಮಾಡಲಾಗಿದೆ ಎಂದ ಶಾಸಕರು ಈ ಕಲ್ಯಾಣಿ ನಿರ್ಮಾಣ ಉಸ್ತುವಾರಿ ವಹಿಸಿಕೊಂಡಿರುವ ಪಿ.ವೆಂಕಟೇಶ್ ಅವರ ಶ್ರಮ ಹಾಗೂ ದಾನಿಗಳ ಸಹಕಾರದಲ್ಲಿ ಕಡಿಮೆ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು. ತಾಲೂಕು ಅಭಿವೃದ್ಧಿ ಕಾರ್ಯ

ಮುಂದಿನ ನಾಲ್ಕು ವರ್ಷ ತಾಲೂಕಿನ ಅಭಿವೃದ್ಧಿ ಪರ್ವ ಪ್ರಾರಂಭವಾಗಲಿದೆ ಎಂದರು. ಪಟ್ಟಣದ ಬಸ್ ನಿಲ್ದಾಣ ಅಭಿವೃದ್ಧಿಗಾಗಿ ೧೧ ಕೋಟಿ ವ್ಯಯ ಮಾಡಲಾಗುತ್ತಿದ್ದು,ಬಹುಶಃ ಜೂನ್ ತಿಂಗಳಲ್ಲಿ ಪ್ರಾರಂಭವಾಗಲಿದೆ ಎಂದರು.೧೦ ಕೋಟಿ ವೆಚ್ಚದಲ್ಲಿ ಈಗಾಗಲೇ ಪ್ರಾರಂಭವಾಗಲಿರುವ ಇಲ್ಲಿನ ದೂಡ್ಡಕೆರೆ ಅಭಿವೃದ್ಧಿ ಕಾಮಗಾರಿಗೆ ಹೆಚ್ಚು ವರಿಯಾಗಿ ಮತ್ತೇ ಹತ್ತು ಕೋಟಿ ಮಂಜೂರು ಮಾಡಲಾಗುತ್ತಿದ್ದು, ಪಾರ್ಕ್,ವಾಕಿಂಗ್ ಪಾತ್ ಸೇರಿದಂತೆ ದೂಡ್ಡ ಕೆರೆಗೆ ಆಧುನೀಕ ಸ್ಪರ್ಶ ನೀಡಲಾಗುವುದು ಎಂದರು.

೩೦೦ ಕೋಟಿಯಲ್ಲಿ ನಿರ್ಮಾಣವಾಗಲಿರುವ ಪಟ್ಟಣದ ಎ.ಪಿ.ಎಂ.ಸಿ.ಯಾರ್ಡ್ ಬಳಿಯ ಹಾರೋಹಳ್ಳಿಯಿಂದ ಹೊಸೂರು ರಸ್ತೆವರೆಗಿನ ಮೇಲ್ಸೇತುವೆ ಗೆ ಕೋಲಾರ ರಸ್ತೆಯ ಸಬ್ಬೇನಹಳ್ಳಿಯಿಂದ ಬರುವ ೬ ಪಥದ ರಸ್ತೆಯಿಂದ ಬರುವ ವಾಹನಗಳು ಹೂಸೂರು ಕಡೆ ಹೋಗಲಿದೆ. ಈ ಮೇಲ್ಸೇತುವೆ ಯಲ್ಲಿ ಅವಕಾಶ ಇಲ್ಲದಿದ್ದ ಡಿಪಿಆರ್ ಬದಲಾಯಿಸಲು ತಿಳಿಸಿದ್ದು, ಈ ಕಾಮಗಾರಿ ಸಹ ನೀತಿ ಸಂಹಿತೆ ಮುಗಿದ ತಕ್ಷಣ ಪ್ರಾರಂಭಿಸಲಾಗುವುದು ಎಂದರು.

ಕರಗಕ್ಕೆ ಸಕಲ ಸೌಲಭ್ಯ

ಕರಗ ಮಹೋತ್ಸವ ಭಾಗವಹಿಸುವ ಜನರಿಗೆ ಬೇಕಾದ ಮೂಲಭೂತ ಸೌಕರ್ಯ ಜತೆಯಲ್ಲಿ ಕುಡಿಯುವ ನೀರು,ಪಟ್ಟಣ ಸ್ವಚ್ಚತೆ ಕಾಪಾಡುವಂತೆ ಪುರಸಭೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದ ಶಾಸಕರು ಕರಗ ಮಹೋತ್ಸವದಲ್ಲಿ ಈ ಬಾರಿ ವಿಶೇಷ ವಾಗಿ ಪಟಾಕಿ ಶೋ ಹಾಗೂ ಸಾಧು ಕೋಕಿಲ ರಸ ಮಂಜರಿ ಎರ್ಪಡಿಸಲಾಗಿದೆ ಎಂದರು.ಶಾಸಕರು, ದಾನಿಗಳ ನೆರವು

ಮಾರಿಕಾಂಬ ದೇವಾಲಯ ಸಮಿತಿ ಅಧ್ಯಕ್ಷ ಪಿ.ವೆಂಕಟೇಶ್ ಮಾತನಾಡಿ, ಶಾಸಕರ ಹಾಗೂ ದಾನಿಗಳ ಸಹಕಾರದಲ್ಲಿ ಕೇವಲ ನಾಲ್ಕು ತಿಂಗಳಲ್ಲಿ ಕಾಮಗಾರಿಗೆ ಪೂರ್ಣಗೊಳಿಸಲು ಸಾಧ್ಯವಾಯಿತು. ಮುಂದಿನ ದಿನದಲ್ಲಿ ಈ ಕಲ್ಯಾಣಿಯ ಉಳಿದ ಭಾಗದಲ್ಲಿ ಸುಂದರವಾದ ಪಾರ್ಕ್, ನೀರಿನ ಕುಂಡ ಸೇರಿದಂತೆ ಕಲ್ಯಾಣಿ ಸುತ್ತ ಮರಗಳನ್ನು ಬೆಳೆಸುವ ಇರಾದೆ ಇದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕರ‍್ಯಕ್ಕೆ ಕೈ ಜೋಡಿಸಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಧುಸೂಧನ, ಪುರಸಭೆ ಸದಸ್ಯರಾದ ಭಾರತಮ್ಮ ಶಂಕರಪ್ಪ, ಮುರಳಿಧರ್, ವೆಂಕಟೇಶ್, ಜಾಕೀರ್ ಖಾನ್, ಮಂಜುನಾಥ್, ಪ್ರಾಧಿಕಾರದ ಅಧ್ಯಕ್ಷ ನಯೀಮ್, ಅಶ್ವಥ ರೆಡ್ಡಿ, ಎಂ.ಪಿ.ವಿ.ಮಂಜು, ಕೃಷ್ಣ, ಹೋಟೇಲ್ ವೆಂಕಟಸ್ವಾಮಿ, ಶಬ್ಬೀರ್, ಹರೀಶ್ ಗೌಡ, ನವೀನ್ ಇನ್ನಿತರರು ಇದ್ದರು.