ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಲಾಭದ ಮೂಲ ಉದ್ದೇಶ ಹೊಂದಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುತ್ತಿರುವ ಇಂದಿನ ದಿನಮಾನದಲ್ಲಿ ಸೇವಾ ಮನೋಭಾವನೆಯೊಂದಿಗೆ ನಿಲಜಗಿ ಕುಟುಂಬವು ಶೈಕ್ಷಣಿಕ ಕ್ಷೇತ್ರದಲ್ಲಿ ಅದಮ್ಯ ಸಾಧನೆ ಮಾಡಿದೆ ಎಂದು ಹುಂಚ ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಪ್ರಶಂಸಿದರು.ಪಟ್ಟಣದ ವಸಂತ ನಗರದಲ್ಲಿ ಮಹಾವೀರ ಶಿಕ್ಷಣ ಸಂಸ್ಥೆಯ ನೂತನ ವಿಜಯಮಾಲಾ ನಿಲಜಗಿ ಬಿಸಿಎ ಮತ್ತು ಬಿಕಾಂ ಪದವಿ ಕಾಲೇಜಿನ ಪ್ರಾರಂಭೋತ್ಸವ, ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆ ಮತ್ತು ವಸತಿ ಗೃಹಗಳ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಒಂದೇ ಸೂರಿನಡಿ ಎಲ್ಲ ಬಗೆಯ ವಿದ್ಯಾದಾನ ಮಾಡುತ್ತಿದ್ದು ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ ಎಂದು ಆಶೀರ್ವದಿಸಿದರು.ಕೊಲ್ಲಾಪುರದ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ಈ ಕಾರ್ಯಕ್ರಮದ ಮೂಲಕ ಜೈನ ಸಮುದಾಯದ ನಾಡಿನ ವಿವಿಧ ಮಠಾಧೀಶರು ಒಂದೇ ವೇದಿಕೆಯಲ್ಲಿ ಸೇರಿರುವುದು ಅಪರೂಪ ಮತ್ತು ಯೋಗಾಯೋಗ. ದೂರದೃಷ್ಟಿ ಆಲೋಚನೆಯೊಂದಿಗೆ ದಿ.ವಸಂತ ನಿಲಜಗಿ ಸ್ಥಾಪಿಸಿರುವ ಸಂಸ್ಥೆಗಳನ್ನು ಮಹಾವೀರ ನಿಲಜಗಿ ಅವರು ಸಮರ್ಥವಾಗಿ ಮುನ್ನಡೆಸುತ್ತಿರುವ ಸಾರಥಿಯಾಗಿದ್ದಾರೆ ಎಂದು ಬಣ್ಣಿಸಿದರು.ಸೋಂದಾ ಸ್ವಾದಿ ದಿಗಂಬರ ಸಂಸ್ಥಾನ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಎನ್.ಆರ್.ಪುರ ಸಿಂಹನಗದ್ದೆ ಜೈನ ಮಠದ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಡನಬೈಲು ಜೋಗ ಧರ್ಮದರ್ಶಿ ಎಚ್.ಎಂ.ವೀರರಾಜಯ್ಯನವರು ಆಶೀರ್ವಚನ ನೀಡಿದರು.ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನ್ಯಾಯವಾದಿ ಪದ್ಮನಾಭ ಚೌಗಲಾ, ಮುಖಂಡರಾದ ಉತ್ತಮ ಪಾಟೀಲ, ಧನ್ಯಕುಮಾರ ಗುಂಡೆ, ವಿನೋದ ದೊಡ್ಡಣ್ಣವರ, ಡಾ.ನೇಮಿನಾಥ ಮಗದುಮ್ಮ, ರವಿರಾಜ ಪಾಟೀಲ, ಡಿ.ಎ.ಸದಲಗಿ, ಮಾರುತಿ ಅಷ್ಟಗಿ, ಪರಮೇಶ್ವರ ಹೆಗಡೆ, ಅಶೋಕ ಪಾಟೀಲ, ಸಂಜಯ ನಿಲಜಗಿ, ರೋಹಿತ ಚೌಗಲಾ, ಬಾಹುಬಲಿ ಸೊಲ್ಲಾಪುರೆ, ಪ್ರಜ್ವಲ ನಿಲಜಗಿ, ರಾಜು ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಇದೇ ವೇಳೆ ಮಹಾವೀರ ಸಹಕಾರಿ ಬ್ಯಾಂಕ್, ಶಿಕ್ಷಣ ಸಂಸ್ಥೆಯ ರೂವಾರಿ ದಿ.ವಸಂತ ನಿಲಜಗಿ ಅವರ ಪ್ರತಿಮೆಗೆ ವಿವಿಧ ಮಠಾಧೀಶರು ಮತ್ತು ಗಣ್ಯರು ಪುಷ್ಪಾರ್ಚನೆ ಅರ್ಪಿಸಿ ನಮನ ಸಲ್ಲಿಸಿದರು.ಶೈಕ್ಷಣಿಕ ಚಟುವಟಿಕೆ ಪ್ರೋತ್ಸಾಹಿಸಿ: ಶಾಸಕ ಅಭಯ ಸಲಹೆ
ಜೈನ ಸಮುದಾಯದ ಜನರು ಶೈಕ್ಷಣಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.ಪಟ್ಟಣದಲ್ಲಿ ಗುರುವಾರ ನಡೆದ ಮಹಾವೀರ ಶಿಕ್ಷಣ ಸಂಸ್ಥೆಯ ವಿಜಯಮಾಲಾ ನಿಲಜಗಿ ಬಿಸಿಎ ಮತ್ತು ಬಿಕಾಂ ಪದವಿ ಕಾಲೇಜಿನ ಪ್ರಾರಂಭೋತ್ಸವದಲ್ಲಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳಿಗೆ ಉತ್ತೇಜನ ನೀಡುವ ಗುಣ ಅಳವಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗಬೇಕು. ಪಂಚ ಕಲ್ಯಾಣದ ಹೆಸರಲ್ಲಿ ಪಂಚರ ಕಲ್ಯಾಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಜೈನ ಧರ್ಮದಲ್ಲಿ ಸಂಸ್ಕೃತಿ, ಸಂಸ್ಕಾರಕ್ಕೆ ತನ್ನದೇಯಾದ ಮನ್ನಣೆಯಿದೆ. ಜೈನರ ಗಂಡು-ಹೆಣ್ಣು ಲಿಂಗ ಅನುಪಾತದಲ್ಲಿ ಸಾಕಷ್ಟು ವ್ಯತ್ಯಾಸವಿದ್ದು, ಇದು ಸಮನಾಂತರವಾಗಬೇಕಿದೆ. ಈ ಭಾಗದ ಬಡವರು, ಮಧ್ಯಮ ವರ್ಗದಲ್ಲಿ ಆರ್ಥಿಕ ಶಕ್ತಿ ತುಂಬಲು ಸಹಕಾರಿ ಬ್ಯಾಂಕ್ ಸ್ಥಾಪನೆ, ಗರಿಷ್ಠ ಸಾಕ್ಷರತೆ ಸಾಧಿಸಲು ಶಿಕ್ಷಣ ಸಂಸ್ಥೆ ಸ್ಥಾಪಿಸಿದ ದಿ.ವಸಂತ ನಿಲಜಗಿ ಕಾರ್ಯ ಸ್ಮರಣೀಯವಾಗಿದೆ. ನಿಲಜಗಿ ಕುಟುಂಬ ಕೈಗೊಳ್ಳುವ ಎಲ್ಲ ಸಾಮಾಜಿಕ ಕಾರ್ಯಗಳಿಗೆ ಕತ್ತಿ ಕುಟುಂಬವು ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.ಮೆರಗು ಹೆಚ್ಚಿಸಿದ ಮೆರವಣಿಗೆ
ಸಮಾರಂಭಕ್ಕೂ ಮುನ್ನ ವಸತಿ ಗೃಹಗಳ ಉದ್ಘಾಟನೆ ಬಳಿಕ ನಡೆದ ಮಠಾಧೀಶರು ಮತ್ತು ಗಣ್ಯರನ್ನೊಳಗೊಂಡ ಭವ್ಯ ಮೆರವಣಿಗೆ ಕಣ್ಮನ ಸೆಳೆಯಿತು. ಮಹಿಳೆಯರ ಕುಂಭಮೇಳ, ಮಕ್ಕಳ ಕೋಲಾಟ, ಲೇಜಿಮ್, ಜಾಂಜ್ ಪಥಾಕ್‌ನೊಂದಿಗೆ ಮಹಾವೀರ ಶಿಕ್ಷಣ ಸಂಸ್ಥೆ ಆವರಣದವರೆಗೆ ನಡೆದ ಮೆರವಣಿಗೆ ಸಮಾರಂಭಕ್ಕೆ ಮತ್ತಷ್ಟು ಕಳೆ ತಂದಿತು. ಸಂಸ್ಥೆಯ ಇಡೀ ಆವರಣದಲ್ಲಿ ಹಬ್ಬದ ವಾತಾವರಣ ಕಂಡು ಬಂದಿತು.ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸಿಗಬೇಕಿದೆ. ಈ ನಿಟ್ಟಿನಲ್ಲಿ ಮಹಾವೀರ ಶಿಕ್ಷಣ ಸಂಸ್ಥೆಯು ಆಧುನಿಕ ಸೌಲಭ್ಯಗಳನ್ನೊಳಗೊಂಡು ಉತ್ತಮ ಶಿಕ್ಷಣ ಒದಗಿಸುವ ಮಹತ್ತರ ಕಾರ್ಯ ಮಾಡುತ್ತಿದೆ. ಸಮಾಜದಲ್ಲಿ ಎಲ್ಲ ವರ್ಗದ ಜನರು ಪರಸ್ಪರ ಸಹಕಾರದಿಂದ ಬೆಳೆಯಲು ಸಾಧ್ಯ ಎನ್ನುವುದಕ್ಕೆ ನಿಲಜಗಿ ಕುಟುಂಬವೇ ಸಾಕ್ಷಿಯಾಗಿದೆ. ಪರಸ್ಪರರಲ್ಲಿ ಪರೋಪಕಾರ ಗುಣ ಇರಬೇಕು ವಿನಹ ಪರಪೀಡನೆಯಂಥ ಮನಸ್ಸು ಹೊಂದಿರಬಾರದು.
- ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಹುಂಚ ಶ್ರೀಕ್ಷೇತ್ರ ಹೊಂಬುಜ ಜೈನಮಠ.