ನವೆಂಬರ್ ಕ್ರಾಂತಿ ಯಾರ ಕೈಯಲ್ಲೂ ಇಲ್ಲ

| Published : Nov 17 2025, 02:00 AM IST

ಸಾರಾಂಶ

ಕಾಂಗ್ರೆಸ್ ಪಕ್ಷದಲ್ಲಿ ನವೆಂಬರ್, ಡಿಸೆಂಬರ್‌ ಕ್ರಾಂತಿ ಏನೇ ಇರಲಿ. ಕ್ರಾಂತಿ ಆಗುತ್ತೋ ಬಿಡುತ್ತೋ. ಯಾರ ಕೈಯಲ್ಲೂ ಏನೂ ಇಲ್ಲ. ಹೈಕಮಾಂಡ್‌ ನಿರ್ಧಾರವೇ ಅಂತಿಮ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಮಾರ್ಮಿಕವಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಾಂಗ್ರೆಸ್ ಪಕ್ಷದಲ್ಲಿ ನವೆಂಬರ್, ಡಿಸೆಂಬರ್‌ ಕ್ರಾಂತಿ ಏನೇ ಇರಲಿ. ಕ್ರಾಂತಿ ಆಗುತ್ತೋ ಬಿಡುತ್ತೋ. ಯಾರ ಕೈಯಲ್ಲೂ ಏನೂ ಇಲ್ಲ. ಹೈಕಮಾಂಡ್‌ ನಿರ್ಧಾರವೇ ಅಂತಿಮ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಮಾರ್ಮಿಕವಾಗಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ, ಎಂ.ಬಿ. ಪಾಟೀಲರಿಂದ ಹಿಡಿದುಕೊಂಡು ಎಲ್ಲ ಕಾರ್ಯಕರ್ತರಿಗೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ. ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಹೈಕಮಾಂಡ್. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇವರೆಲ್ಲ ಸೇರಿ ಮಾಡುವ ತೀರ್ಮಾನವೇ ಅಂತಿಮ ಎಂದರು.

ಬಿಹಾರದಲ್ಲಿ ಕಾಂಗ್ರೆಸ್ ಗೆ ಸೋಲಾಗಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ದೆಹಲಿಯ ನಾಯಕರು ಈ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದು, ಸತ್ಯ ತಿಳಿಯಲಿದೆ. ಫಲಿತಾಂಶದಿಂದ ಒಂದು ರೀತಿ ಸಂಶಯ ಉತ್ಪತ್ತಿ ಆಗಿದೆ. ಅದೇನೇ ಇರಲಿ ಜನ ತೀರ್ಪು ಕೊಟ್ಟಿದ್ದಾರೆ. ಜನರ ತೀರ್ಪನ್ನು ತಲೆ ಬಾಗಿ ಒಪ್ಪುತ್ತೇವೆ ಎಂದು ಹೇಳಿದರು.

ಮಹಾಘಟಬಂಧನಕ್ಕೆ ಮತ ಹಾಕಿದವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಮತ ಕಳ್ಳತನ ಆಗಿದ್ದನ್ನು ಆಳಂದಲ್ಲಿ ನೋಡಿದ್ದೇವೆ. ಬೆಂಗಳೂರು ಸೆಂಟ್ರಲ್‌ನಲ್ಲೂ ಮತ ಕಳ್ಳತನ ಆಗಿದೆ. ಕಲೆಕ್ಷನ್ ಕಮಿಷನ್ ರೀಪಾರ್ಮಸ್ ಮಾಡಬೇಕು. ಸುಮ್ಮನೆ ಅಫಿಡೆವಿಟ್ ಹಾಕಿ, ಅದು ಮಾಡಿ, ಇದು ಮಾಡಿ ಎಂದು ಹೇಳಿದರೆ ಆಗಲ್ಲ. ರೀಪಾರ್ಮಸ್ ತಂದು ಚುನಾವಣೆ ಪಾರದರ್ಶಕವಾಗಿ ಆಗಬೇಕು. ನಾವು ಕೇಳೋದೇನು, ಕಾಂಗ್ರೆಸ್‌ಗೆ ಸಹಾಯ ಮಾಡಿ ಎಂದು ಕೇಳ್ತೆವಾ?. ಪಾರದರ್ಶಕವಾಗಿ ಚುನಾವಣೆ ಆದ ಮೇಲೆ ಚುನಾವಣೆಯಲ್ಲಿ ಸೋಲು, ಗೆಲುವನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಆವಾಗ ನಾವು ಸೋತರೂ ಒಪ್ಪಿಕೊಳ್ಳಬೇಕಾಗುತ್ತೆ. ಎಲೆಕ್ಷನ್ ಕಮಿಷನ್ ಅವರು ಯಾಕೆ ಲಿಂಕ್ ಎಲ್ಲ ಡಿಲಿಟ್ ಮಾಡಿದ್ರು?. ಬಿಹಾರ ಬಗ್ಗೆ ಸೆಂಟ್ರಲ್ ಟೀಂ ವಿಶ್ಲೇಷಣೆ ಮಾಡುತ್ತದೆ, ಅದನ್ನ ನಾವು ರಿಲೀಸ್ ಮಾಡುತ್ತೇವೆ, ದೆಹಲಿಯಿಂದಲೂ ರಿಲೀಸ್ ಆಗುತ್ತದೆ ಎಂದು ಹೇಳದರು.