ಸಾರಾಂಶ
ಕನ್ನಡಪ್ರಭ ವಾರ್ತೆ ಬನ್ನೂರುಇತಿಹಾಸ ಪ್ರಸಿದ್ಧ ಆದಿಶಕ್ತಿ ಹುಚ್ಚಮ್ಮದೇವಿಯ ಭವ್ಯರಥೋತ್ಸವ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ರಥೋತ್ಸವದ ಹಿನ್ನೆಲೆ ದೇವಾಲಯದಲ್ಲಿ ದೇವಿಗೆ ಹಣ್ಣಿನಿಂದ ಅಲಂಕಾರ ಮಾಡಲಾಗಿತ್ತು. ಪೂಜೆ ಸಲ್ಲಿಸಲು ಭಕ್ತರ ಸಂಖ್ಯೆಯು ಹೆಚ್ಚಾಗಿತ್ತು. ನಂತರ ಪೂಜಾ ಕೈಂಕಾರ್ಯಗಳು ನಡೆದು ಕಿತ್ತಳೆ ಹಣ್ಣು, ವಿವಿಧ ಬಗೆಯ ಹೂಗಳು ಹಾಗೂ ಬಣ್ಣ ಬಣ್ಣದ ಪತಾಕೆಯಿಂದ ಅಲಂಕೃತಗೊಂಡ ತೇರಿನಲ್ಲಿ ಹುಚ್ಚಮ್ಮದೇವಿಯ ಉತ್ಸವ ಮೂರ್ತಿಯನ್ನು ರಥದ ಸುತ್ತ ಪ್ರದಕ್ಷಿಣೆ ಮಾಡಿ ರಥದ ಮೇಲೆ ಪ್ರತಿಷ್ಟಾಪಿಸಲಾಯಿತು.ರಥದಲ್ಲಿ ಪ್ರತಿಷ್ಟಾಪನೆಗೊಂಡ ದೇವಿಗೆ ಮಹಾಮಂಗಳಾರತಿಯ ಕಾರ್ಯವನ್ನು ನೆರವೇರಿಸುತ್ತಿದ್ದಂತೆ ದೇವಾಲಯದ ಆವರಣದಲ್ಲಿ ಸೇರಿದ್ದ ಭಕ್ತರು, ನವದಂಪತಿಗಳು, ಹರಕೆಯನ್ನು ಹೊತ್ತ ಭಕ್ತರು ರಥದೆಡೆ ಹಣ್ಣುಜವನ ಎಸೆದು ಹಕರೆ ತೀರಿಸಿದರು. ನಂತರ ಭಕ್ತರು ದೇವಿಗೆ ಜಯಕಾರ ಹಾಕಿ, ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ರಥದ ಕೆಳಗೆ ಮಕ್ಕಳನ್ನು ನುಸುಳಿಸಲು ಜನಜಂಗುಳಿ ಆದಿಶಕ್ತಿ ಹುಚ್ಚಮ್ಮದೇವಿಯ ರಥೋತ್ಸವದ ವೇಳೆ ರಥದ ಕೆಳಗೆ ನವಜಾತ ಶಿಶುಗಳನ್ನು, 6 ವರ್ಷದ ಒಳಪಟ್ಟ ಮಕ್ಕಳನ್ನು ನುಸುಳಿಸುವ ವಾಡಿಕೆಯಿದೆ. ಅದರಂತೆ ಮಕ್ಕಳನ್ನು ರಥದ ಕೆಳಭಾಗ ನುಸುಳಿಸುವ ಸಲುವಾಗಿ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಮಕ್ಕಳಿಗೆ ಟೋಕನ್ ಪಡೆದು ಸರದಿಯಲ್ಲಿ ಕಾದು ನಿಂತಿದ್ದರು. ರಥ ಪ್ರಾರಂಭಗೊಂಡು ದೇವಾಲಯದ ಪಕ್ಕ ತಿರುವು ಪಡೆಯುತ್ತಿದ್ದಂತೆ ಮಕ್ಕಳನ್ನು ರಥದ ಕೆಳಗೆ ನುಸುಳಿಸಲು ಅವಕಾಶವನ್ನು ಕಲ್ಪಿಸಲಾಯಿತು.ಗ್ರಾಮೀಣ ಕ್ರೀಡೆಗಳ ಪ್ರದರ್ಶನ ರಥೋತ್ಸವದ ಮುಂಭಾಗ ಗ್ರಾಮೀಣ ಕ್ರೀಡೆಗಳಾದ ದೊಣ್ಣೆ ವರಸೆ, ಕತ್ತಿವರಸೆಯನ್ನು ಯುವಕರು ಮಾಡಿ ಸಾರ್ವಜನಿಕರ ಮನಸೂರೆಗೊಂಡರು. ಹಿರಿಯರು ದೇವಿಯ ಜಾನಪದ ಗೀತೆಗಳನ್ನು ಹಾಡುತ್ತ ರಥದೊಂದಿಗೆ ಸಾಗಿದರು. ಪೋಲಿಸರ ವ್ಯವಸ್ಥೆಗೆ ಅವಕಾಶವಿಲ್ಲಗ್ರಾಮದ ಜನರು ಬಹಳಷ್ಟು ಶಿಸ್ತಿನಿಂದ ಪ್ರತಿಯೊಂದು ವರ್ಗದವರು ಕಾರ್ಯಗಳನ್ನು ಹಂಚಿಕೊಂಡು ತಮಗೆ ದೊರೆತ ಕಾರ್ಯವನ್ನು ಯಶಸ್ವಿಗೊಳಿಸಲು ಗ್ರಾಮಸ್ಥರೆ ಸ್ವಯಂ ಸೇವಕರಾಗಿ ದೇವಿಯ ಪೂಜಾ ಕಾರ್ಯವನ್ನು ನಡೆಸುವುದರಿಂದ ಇಲ್ಲಿ ಪೊಲೀಸರಿಗೆ ಅವಕಾಶವಿಲ್ಲದಂತೆ, ಯಶಸ್ವಿಯಾಗಿ ಕಾರ್ಯವನ್ನು ನಿರ್ವಹಿಸುವುದು ಇಲ್ಲಿನ ವಿಶೇಷ.ರಥವು ದೇವಾಲಯದ ಸುತ್ತ ಒಂದು ಸುತ್ತು ಬಂದು ಮೂಲ ಸ್ಥಾನ ಸೇರಿತು. ನಂತರ ರಥದ ಬಳಿ ದೇವಿಗೆ ಭಕ್ತರು ಪೂಜೆಯನ್ನು ಸಲ್ಲಿಸಿದರು. ರಥೋತ್ಸವದ ನಂತರ ಮಜ್ಜಿಗೆ ಪಾನಕ ಪ್ರಸಾದ ವಿತರಿಸಲಾಯಿತು.ಭಕ್ತರಿಗೆ ಅನ್ನಸಂತರ್ಪಣೆಯು ನಡೆಯಿತು. ಮಾಜಿ ಶಾಸಕಿ ಜೆ. ಸುನೀತ ವೀರಪ್ಪಗೌಡ, ದೇವಾಲಯದ ವ್ಯವಸ್ಥಾಪಕ ವೀರಪ್ಪಗೌಡ, ಬನ್ನೂರು ಹೋಬಳಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರವಿ, ಮನು, ಗ್ರಾಮಸ್ಥರು, ಅಪಾರ ಭಕ್ತ ವೃಂದ ಇದ್ದರು.