ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗನಾಟಕಗಳನ್ನು ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ರಂಗಕಲಾವಿದರ ಬದುಕು ಕಷ್ಟದಲ್ಲಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ. ವೀರೇಶ್ ವಿಷಾದ ವ್ಯಕ್ತಪಡಿಸಿದರು.ಪದ್ಮಭೂಷಣ ಪಂಡಿತ ಡಾ. ಪುಟ್ಟರಾಜ ಗವಾಯಿಗಳವರ ಹದಿನಾಲ್ಕನೇ ಪುಣ್ಯಸ್ಮರಣೋತ್ಸವ ಅಂಗವಾಗಿ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಂದಗಲ್ಲು ಹನುಮಂತರಾಯ ಕಲಾ ಸಂಘ ಹಾಗೂ ಚಳ್ಳಕೆರೆಯ ರಂಗಭಾರತಿ ಸಾಂಸ್ಕೃತಿಕ ಕಲಾ ಸಂಘದಿಂದ ತರಾಸು ರಂಗಮಂದಿರದಲ್ಲಿ ಪ್ರದರ್ಶನಗೊಂಡ ಕುರುಕ್ಷೇತ್ರ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಟಿವಿ, ಮೊಬೈಲ್, ವಾಟ್ಸಪ್ ಫೇಸ್ ಬುಕ್ ಹಾವಳಿಯಿಂದಾಗಿ ರಂಗಭೂಮಿ ನಶಿಸುತ್ತಿದೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕಗಳನ್ನು ವೀಕ್ಷಿಸುವ ಮೂಲಕ ರಂಗಭೂಮಿ ಕಲಾವಿದರನ್ನು ಉಳಿಸಿ ಬೆಳೆಸಬೇಕಿದೆ ಎಂದು ಮನವಿ ಮಾಡಿದರು. ಮುರುಘ ರಾಜೇಂದ್ರ ಮಠದ ಬಸವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ನ್ಯಾಯವಾದಿ ಸಿ. ಶಿವುಯಾದವ್, ಜಾನಪದ ಹಾಡುಗಾರ ಹರೀಶ್, ಜಂಬುನಾಥ್, ಹಾರ್ಮೋನಿಯಂ ಮಾಸ್ತರ್ ಕೆ. ತಿಪ್ಪೇಸ್ವಾಮಿ ಇನ್ನು ಅನೇಕರು ವೇದಿಕೆಯಲ್ಲಿದ್ದರು.ಕೃಷ್ಣನ ಪಾತ್ರದಲ್ಲಿ ಟಿ. ತಿಪ್ಪೇಸ್ವಾಮಿ, ಧರ್ಮರಾಯನ ಪಾತ್ರದಲ್ಲಿ ಜಿ. ತಿಮ್ಮಾರೆಡ್ಡಿ, ಭೀಮನಾಗಿ ಎಂ.ಜಿ. ಬೋರಯ್ಯ, ದುರ್ಯೋಧನ ಎಚ್. ಗಂಗಾಧರಪ್ಪ, ಶಕುನಿ ಪಾತ್ರದಲ್ಲಿ ಟಿ. ಚನ್ನಕೇಶವ, ಅರ್ಜುನನಾಗಿ ವಿ. ಶಿವನಪ್ಪ, ಕರ್ಣನಾಗಿ ಬಿ. ಗೋವಿಂದರಾಜು, ದುಶ್ಯಾಸನ ಎಸ್.ಪಿ. ಸುಧೀರ್, ಅಭಿಮನ್ಯು ಪಿ. ರಾಜಣ್ಣ, ಅಶ್ವಥಾಮನಾಗಿ ಪಿ. ರಾಜಣ್ಣ, ಸಾಲುಮನೆ ಬೊಮ್ಮಯ್ಯ ವಿಧುರ, ವಿ. ಯಶವಂತಪ್ಪ ದ್ರೋಣ, ರುದ್ರಮುನಿ ಭೀಷ್ಮ, ಧೃತರಾಷ್ಟ್ರನಾಗಿ ಹನುಮಂತಪ್ಪ, ಲೋಕೇಶ್ ಶಿಖಂಡಿ, ಲಕ್ಷ್ಮಿಶ್ರೀಧರ್ ದ್ರೌಪದಿ, ಕುಂತಿ, ಗಾಂಧಾರಿ, ಮಂಜುಶ್ರಿ ರುಕ್ಮಿಣಿ - ಉತ್ತರೆ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದರು.