ಹಾನಗಲ್ಲ: ತಾಲೂಕಿನಲ್ಲಿ ಕೃಷಿ ಮೇಲೆ ಅವಲಂಬಿತ ಕುಟುಂಬಗಳ ಸಂಖ್ಯೆ ಹೆಚ್ಚಿದೆ. ಒಂದು ಕೃಷಿಯಲ್ಲಿ ತೊಡಗಬೇಕು, ಇಲ್ಲವೇ ಕೂಲಿ ಕೆಲಸಕ್ಕೆ ಹೋಗಬೇಕು. ಇಂಥ ಪರಿಸ್ಥಿತಿಯಲ್ಲಿನ ಕುಟುಂಬಗಳಿಗೆ ಶಾಶ್ವತ ಮನೆ ಮಾಲಿಕತ್ವ ದೊರಕಿಸುವ ದೃಢಸಂಕಲ್ಪ ಈಡೇರಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ತಾಲೂಕಿನ ಮಕರವಳ್ಳಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ನಾನಾ ಕಂದಾಯ ಗ್ರಾಮ ಮತ್ತು ಉಪ ಗ್ರಾಮಗಳ ೩೨೩ ಫಲಾನುಭವಿ ಕುಟುಂಬಗಳಿಗೆ ಶಾಶ್ವತ ಮನೆ ಮಾಲಿಕತ್ವದ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

೨೦೨೩ರ ಸಾರ್ವತ್ರಿಕ ಚುನಾವಣೆಗೂ ಮೊದಲು ತಾಲೂಕಿನಲ್ಲಿ ೫೧ ದಿನಗಳ ಕಾಲ ದೃಢಸಂಕಲ್ಪ ಯಾತ್ರೆಯ ಮೂಲಕ ಪಾದಯಾತ್ರೆಯಲ್ಲಿ ಪ್ರತಿ ಗ್ರಾಮ, ಬೀದಿಗಳಲ್ಲಿ ಸುತ್ತಾಡಿ ಜನರ ಕಷ್ಟ ಅರಿಯುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ದಾಖಲೆ ಇಲ್ಲದೇ ಮನೆ ಕಟ್ಟಿಕೊಂಡು ಅತಂತ್ರ ಸ್ಥಿತಿಯಲ್ಲಿ ಸಾವಿರಾರು ಕುಟುಂಬಗಳು ದಿನದೂಡುತ್ತಿದ್ದ ಸಂಗತಿ ತಿಳಿದು, ಆ ಸಂದರ್ಭದಲ್ಲಿಯೇ ಇಂಥ ಕುಟುಂಬಗಳನ್ನು ಸ್ವತಂತ್ರಗೊಳಿಸುವ ದೃಢಸಂಕಲ್ಪ ಮಾಡಲಾಗಿತ್ತು. ಸುದೈವದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದು ಬಡವರ ಸಂಕಷ್ಟ ದೂರಾಗಿದೆ. ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದರೆ ತಾಲೂಕಿನಲ್ಲಿ ೬ನೇ ಗ್ಯಾರಂಟಿಯಾಗಿ ಹಕ್ಕುಪತ್ರ ವಿತರಿಸುವ ಭರವಸೆ ನೀಡಲಾಗಿತ್ತು. ಇದೀಗ ನುಡಿದಂತೆ ನಡೆದ ತೃಪ್ತಿ ಇದೆ ಎಂದರು. ತಹಶೀಲ್ದಾರ್ ರೇಣುಕಾ ಎಸ್. ಕಾನೂನಿನಲ್ಲಿರುವ ಅವಕಾಶ ಬಳಸಿ ಶಾಶ್ವತ ಮನೆ ಮಾಲಿಕತ್ವ ಒದಗಿಸುವ ಕಾರ್ಯ ತಾಲೂಕಿನಲ್ಲಿ ಪ್ರಗತಿಯಲ್ಲಿದೆ. ಈಗಾಗಲೇ ೮ ಸಾವಿರ ಕುಟುಂಬಗಳಿಗೆ ಮಾಲಿಕತ್ವ ನೀಡಲು ಸರಕಾರದ ಅನುಮೋದನೆ ಸಿಕ್ಕಿದೆ. ಕಂದಾಯ ಗ್ರಾಮ, ಉಪ ಗ್ರಾಮಗಳನ್ನು ಅಸ್ತಿತ್ವಕ್ಕೆ ತಂದು ಹಕ್ಕುಪತ್ರ ವಿತರಿಸಲಾಗುತ್ತಿದೆ. ಸರಕಾರವೇ ಫಲಾನುಭವಿ ಕುಟುಂಬಗಳ ಮನೆ ಬಾಗಿಲಿಗೆ ಹೋಗಿ ಸರ್ವೆ ಕೈಗೊಂಡು, ನೋಂದಣಿ ಪತ್ರ, ಈಸ್ವತ್ತಿನೊಂದಿಗೆ ಕಂಪ್ಯೂಟರೀಕೃತ ಹಕ್ಕುಪತ್ರ ಒಳಗೊಂಡ ದಾಖಲೆಗಳನ್ನು ನೀಡಿದೆ. ಭೂ ಗ್ಯಾರಂಟಿ ಕಾರ್ಯಕ್ರಮದಡಿ ಕರ್ನಾಟಕದಲ್ಲಿ ಅತೀ ಹೆಚ್ಚು ಕುಟುಂಬಗಳು ನಮ್ಮ ತಾಲೂಕಿನಲ್ಲಿ ಹಕ್ಕುಪತ್ರ ಪಡೆದುಕೊಂಡಿವೆ ಎಂದು ತಿಳಿಸಿದರು. ಸಮಾರಂಭದಲ್ಲಿ ಹಿರೇಕಾಂಶಿ ಗ್ರಾಮದ ೧೩೦, ಮಕರವಳ್ಳಿ ೭೩, ಶಾಡಗುಪ್ಪಿ ೭೦, ಕೊಂಡೋಜಿ ೪೦ ಹಾಗೂ ಯತ್ತಿನಹಳ್ಳಿ ಮ ಆಡೂರು ಗ್ರಾಮದ ೧೦ ಫಲಾನುಭವಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಮುಖಂಡರು ಇದ್ದರು.