ರಾಜ್ಯದಲ್ಲಿ ಪ್ರಸ್ತುತಸಾಲಿಗೆ 60 ಲಕ್ಷ ಟನ್ ಖರೀದಿಗೆ ಸರ್ಕಾರ ನಿಗದಿಪಡಿಸಿದ್ದು, ಇದೀಗ ಸರ್ಕಾರ ನಿಗದಿಪಡಿಸಿದ ಪ್ರಮಾಣದಷ್ಟು ಖರೀದಿಸಿರುವ ಕಾರಣ ರಾಜ್ಯಾದ್ಯಂತ ನೋಂದಣಿ ಲಾಗಿನ್ ಸ್ಥಗಿತಗೊಳಿಸಲಾಗಿದೆ.
ಕನ್ನಡಪ್ರಭ ವಾರ್ತೆ ಹುಣಸೂರು ರಾಗಿ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ನೋಂದಣಿ ಕಾರ್ಯವನ್ನು ಇನ್ನಷ್ಟು ದಿನ ಮುಂದುರೆಸಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಆಗ್ರಹಿಸಿದ್ದಾರೆ.ತಾಲೂಕಿನಲ್ಲಿ ರಾಗಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರ್ಕಾರ ನಿಗದಿಪಡಿಸಿರುವ ಪ್ರಮಾಣ ಪೂರ್ಣಗೊಂಡಿದೆ ಎಂದು ಸಬೂಬು ಹೇಳಿ ನೋಂದಣಿ ಕಾರ್ಯವನ್ನು ಅ. 15ಕ್ಕೆ ಅಂತ್ಯಗೊಳಿಸಿದೆ. ಆದರೆ ಇನ್ನೂ ಅರ್ಧದಷ್ಟು ಭಾಗದ ರೈತರು ನೋಂದಣಿ ಮಾಡಿಕೊಳ್ಳಲಾಗಿಲ್ಲ. ರೈತರು ಬೆಳೆದ ಬೆಳೆ ದಲ್ಲಾಳಿಗಳ ಪಾಲಾಗಬಾರದೆನ್ನುವ ಉದ್ದೇಶದಿಂದ ಸರ್ಕಾರ ಖರೀದಿ ಕೇಂದ್ರ ಸ್ಥಾಪಿಸಿ ಅದೂ ಕೂಡ ಸಮರ್ಪಕವಾಗಿ ರೈತರಿಗೆ ನ್ಯಾಯ ನೀಡಲು ವಿಫಲವಾಗುತ್ತಿದೆ. ಇದೀಗ ನೋಂದಣಿಯಾಗದ ಬೆಳೆಗಾರರು ದಲ್ಲಾಳಿಗಳ ಮನೆಬಾಗಿಲಿಗೆ ಎಡತಾಕುವಂತಾಗಿದೆ.ರಾಜ್ಯದಲ್ಲಿ ಪ್ರಸ್ತುತಸಾಲಿಗೆ 60 ಲಕ್ಷ ಟನ್ ಖರೀದಿಗೆ ಸರ್ಕಾರ ನಿಗದಿಪಡಿಸಿದ್ದು, ಇದೀಗ ಸರ್ಕಾರ ನಿಗದಿಪಡಿಸಿದ ಪ್ರಮಾಣದಷ್ಟು ಖರೀದಿಸಿರುವ ಕಾರಣ ರಾಜ್ಯಾದ್ಯಂತ ನೋಂದಣಿ ಲಾಗಿನ್ ಸ್ಥಗಿತಗೊಳಿಸಲಾಗಿದೆ. ತಾಲೂಕಿನಲ್ಲಿ 1.30 ಲಕ್ಷ ಟನ್ ಪ್ರಮಾಣ ನೋಂದಣಿಯಾಗಿದ್ದು, ಇನ್ನೂ 5-10 ಸಾವಿರ ಟನ್ ಬಾಕಿ ಉಳಿದಿದೆ. ರೈತರಿಗೆ ಅನ್ಯಾಯವಾಗದಂತೆ ರಾಜ್ಯ ಸರ್ಕಾರ ಉಳಿದಿರುವ ರಾಗಿಯನ್ನೂ ಖರೀದಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಭತ್ತ, ಮುಸುಕಿನ ಜೋಳ ಕೇಂದ್ರವೆಲ್ಲಿ? ರಾಜ್ಯ ಸರ್ಕಾರ ಮುಸುಕಿನ ಜೋಳ ಖರೀದಿಯನ್ನು ಕೆಎಂಎಫ್‌ಗೆ ನೀಡಿ ಕೈತೊಳೆದುಕೊಂಡಿದೆ. ಇನ್ನು ಭತ್ತ ಖರೀದಿ ಕೇಂದ್ರ ಸ್ಥಾಪನೆಯೇ ಆಗಿಲ್ಲ. ರೈತರು ಹೋರಾಟ ನಡೆಸಿದ ನಂತರವೇ ಸ್ಥಾಪಿಸುವ ಮನೋಭಾವನೆ ಸರ್ಕಾರಗಳು ತೋರುತ್ತಿರುವುದು ರೈತ ವಿರೋಧಿ ಸರ್ಕಾರಗಳ ನಡೆಯಾಗಿದೆ. ಸರ್ಕಾರ ಕೂಡಲೇ ಭತ್ತ ಮತ್ತು ಮುಸುಕಿನಜೋಳ ಖರೀದಿ ಕೇಂದ್ರ ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.