ಸಾರಾಂಶ
- ಕಲುಷಿತ ನೀರು ಸೇವಿಸಿ ಶುಕ್ರವಾರ ಮತ್ತೆ 27 ಜನ ದಾಖಲು । ಗುರುವಾರ 17 ಮಂದಿಗೆ ಚಿಕಿತ್ಸೆ । ನಾಲ್ವರು ಡಿಸ್‌ಚಾರ್ಜ್: ಡಾ.ಚಂದ್ರಪ್ಪ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಜೋಳದಾಳು ಗ್ರಾಮಲ್ಲಿ ಕಲುಷಿತ ನೀರು ಕುಡಿದು ವಾಂತಿ-ಭೇದಿಯಿಂದ ಸುಸ್ತಾಗಿ ಶುಕ್ರವಾರ ಸಹಾ ಗ್ರಾಮದ 27 ಜನರು ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.ಗುರುವಾರ ಬೆಳಗ್ಗೆಯಿಂದಲೇ ಜೋಳದಾಳು ಗ್ರಾಮದಲ್ಲಿ ವಾಂತಿ-ಭೇದಿಯಿಂದ ಬಳಲಿ ಗುರುವಾರ 17 ಜನ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ 27 ಮಂದಿ ದಾಖಲಾಗಿದ್ದು, ಒಟ್ಟು 44 ಜನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದಿದ್ದಾರೆ. ಇವರಲ್ಲಿ 4 ಜನರನ್ನು ಡಿಸ್ ಚಾರ್ಜ್ ಮಾಡಲಾಗಿದೆ ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಚಂದ್ರಪ್ಪ ತಿಳಿಸಿದರು.
ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಲೈನ್‌ಗಳು ಚರಂಡಿಗಳ ಪಕ್ಕದಲ್ಲಿಯೇ ಹಾದುಹೋಗಿದ್ದು, ಅಲ್ಲಲ್ಲಿ ಕೆಲ ಪೈಪ್‌ಗಳು ಒಡೆದು, ಮಳೆ ನೀರು, ಚರಂಡಿ ನೀರು ಸೇರಿಕೊಂಡು ಈ ವ್ಯಾಧಿ ಉಂಟಾಗಿರಬಹುದು ಎಂದು ಗ್ರಾಮದ ಜನರು ಹೇಳುತ್ತಾರೆ.ಜಿಲ್ಲಾಡಳಿತ ಭೇಟಿ:
ಶುಕ್ರವಾರ ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ, ತಾಪಂ ಕಾರ್ಯನಿರ್ವಾಹಕಾಧಿಕಾರಿ ಬಿ.ಕೆ.ಉತ್ತಮ, ತಹಸೀಲ್ದಾರ್ ರುಕ್ಮಿಣಿಬಾಯಿ, ತಾಲೂಕು ವೈದ್ಯಾಧಿಕಾರಿ ಶಿವಕುಮಾರ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಅಭಿಯಂತರ ಲೋಹಿತ್, ಗ್ರಾಪಂ ಮಾಜಿ ಅಧ್ಯಕ್ಷ ಕುಮಾರ್ ತಳವಾರ, ಗ್ರಾಮದ ಪ್ರಮುಖರಾದ ನಾಗರಾಜ್, ಲೋಕೇಶ್ ಭೇಟಿ ನೀಡಿದರು. ಗ್ರಾಮದ ಜನರಿಗೆ ಆರೋಗ್ಯ ರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸಿದರು. ಶುದ್ಧವಾದ ನೀರನ್ನು ಕುಡಿಯಬೇಕು ಮತ್ತು ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಮನವಿ ಮಾಡಿದರು.- - - ಬಾಕ್ಸ್ * ಹೊಸ ಪೈಪ್‌ಲೈನ್ ಅಳವಡಿಸಲು ಕ್ರಮ: ಇಒಚನ್ನಗಿರಿ ತಾಲೂಕಿನ ಜೋಳದಾಳು ಗ್ರಾಮದಲ್ಲಿ ಜನರು ಕಲುಷಿತ ನೀರು ಸೇವಿಸಿ, ವಾಂತಿ-ಭೇದಿ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಗ್ರಾಮಕ್ಕೆ ನಲ್ಲಿಗಳ ಮೂಲಕ ಸರಬರಾಜಾಗುವ ನೀರಿನ ಪೈಪ್ ಲೈನ್‌ಗಳನ್ನು ತೆಗೆದು, ಹೊಸ ಪೈಪ್ ಲೈನ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಶನಿವಾರದಿಂದಲೇ ಈ ಕಾಮಗಾರಿ ಆರಂಭಿಸಲಾಗುತ್ತಿದೆ ಎಂದು ತಾ.ಪಂ. ಇಒ ಬಿ.ಕೆ.ಉತ್ತಮ ತಿಳಿಸಿದ್ದಾರೆ.
ಈ ಘಟನೆ ಹಿನ್ನೆಲೆ ಸಂಬಂಧಪಟ್ಟ ಅಭಿಯಂತರರ ಜೊತೆಯಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಹೊಸ ಪೈಪ್ ಲೈನ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗ್ರಾಮದ ಜನರು ಶುದ್ಧ ಕುಡಿಯುವ ನೀರಿನ ಘಟಕದಲ್ಲಿನ ನೀರು ಮತ್ತು ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕೆಂದು ಸೂಚನೆಯನ್ನು ನೀಡಲಾಗಿದೆ ಎಂದರು.- - - -30ಕೆಸಿಎನ್‌ಜಿ4:
ಜೋಳದಾಳಿನಲ್ಲಿ ಜನರು ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡಿರುವ ಹಿನ್ನೆಲೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಜಿಪಂ ಇಒ ಸುರೇಶ್ ಇಟ್ನಾಳ್ ಇತರ ಅಧಿಕಾರಿಗಳು ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. -30ಕೆಸಿಎನ್‌ಜಿ5:ಕಲುಷಿತ ನೀರು ಸೇವನೆಯಿಂದ ಜನರು ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ ಅಧಿಕಾರಿಗಳು ಜೋಳದಾಳು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಜತೆ ಸಮಸ್ಯೆ ಕುರಿತು ಚರ್ಚಿಸಿದರು.