ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಗುರುತಿಸಿದರೇ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಪ್ರಧಾನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಸಿದ್ದರಾಮ ಕಳವಳ ವ್ಯಕ್ತಪಡಿಸಿದರು.ಸವದತ್ತಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಸವದತ್ತಿಯ ಜಿ.ಜಿ.ಚೋಪ್ರಾ ಸರ್ಕಾರಿ ಪಿ.ಯು.ಕಾಲೇಜಿನಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರೂ ಯೋಚಿಸಿ ಕಾಲೇಜುಮಟ್ಟದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏಕೆ ಕಡಿವೆುಯಾಗುತ್ತಿದೆ ಅಂದರೆ ಇವೆಲ್ಲ ಮಕ್ಕಳು ಕಾಲೇಜು ಬಿಟ್ಟು ಕೆಲಸಕ್ಕೆ ಹೊಗುತ್ತಿದ್ದಾರೆ. ಅಂತ ಅರ್ಥ ಅಲ್ಲವೆ. ಯಾವುದೇ ಮಕ್ಕಳು 18 ವರ್ಷ ಪೂರ್ಣಗೊಳಿಸುವವರೆಗೂ ಕೆಲಸದಲ್ಲಿ ತೊಡಗುವಂತಿಲ್ಲ. ಶಿಕ್ಷಣದಿಂದ ಡ್ರಾಫೌಟ್ ಆದ ಮಕ್ಕಳೇ ಹೆಚ್ಚೆಚ್ಚು ತೊಂದರೆಗೆ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿದರು.ನ್ಯಾಯವಾದಿ ಸಾವಿತ್ರಿ ಶಿಬಾರಗಟ್ಟಿ ಉಪನ್ಯಾಸ ಭಾಷಣ ಮಾಡಿ, ಬಾಲಕಾರ್ಮಿಕ ಪದ್ಧತಿಯು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿಯನ್ನು ಹೇಗೆ ಹಾನಿಗೊಳಿಸುತ್ತದೆ ಎಂಬುವುದರ ಬಗ್ಗೆ ಜಾಗೃತಿ ಮೂಡಿಸುವುದು ಪ್ರಮುಖವಾಗಿದೆ. ಬಾಲಕಾರ್ಮಿಕ ಪದ್ಧತಿ ಕೊನೆಗೊಳಿಸಲು ಸರ್ಕಾರಗಳು, ಸಂಘಟನೆಗಳು ಮತ್ತು ವ್ಯಕ್ತಿಗಳು ಅನೇಕ ಕ್ರಮ ಕೈಗೊಳ್ಳಲಾಗಿದೆ. ಬಾಲಕಾರ್ಮಿಕರಾಗಿರುವ ಮಕ್ಕಳಿಗೆ ಬೆಂಬಲ ನೀಡುವುದು ಮತ್ತು ಅವರನ್ನು ಶಾಲೆಗೆ ಸೇರಿಸಲು ಸಹಾಯ ಮಾಡುವುದು ಅತೀ ಅವಶ್ಯವಾಗಿದೆ ಎಂದರು.ತಹಸೀಲ್ದಾರ್ ಎಂ.ಎನ್.ಹೆಗ್ಗನ್ನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಗುವಿನ ವಯಸ್ಸು, ದೈಹಿಕ ಅಥವಾ ಮಾನಸಿಕ ಸಾಮರ್ಥ್ಯಕ್ಕೆ ಸೂಕ್ತವಲ್ಲದ ಕೆಲಸವನ್ನು ಬಾಲ ಕಾರ್ಮಿಕ ಪದ್ಧತಿ ಎಂದು ಹೇಳಲಾಗುತ್ತದೆ. 18 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಸಂಘ-ಸಂಸ್ಥೆ, ವೈಯಕ್ತಿಕವಾಗಿಯೂ ಯಾರೂ ಸಹ ಕೆಲಸಕ್ಕಾಗಿ ಬಳಸಿಕೊಳ್ಳಬಾರದೆಂದು ಕಾನೂನಿದ್ದು ಅಂತಹದ್ದು ಕಂಡು ಬಂದರೇ ಅವರ ವಿರುಧ್ಧ ಕಾನೂನಿನಲ್ಲಿ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ ಎಂದರು.ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಎ.ಎಸ್.ಬಡಕುಂದ್ರಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜೆ.ಬಿ.ಮುನವಳ್ಳಿ, ಕಾಲೇಜಿನ ಪ್ರಾಚಾರ್ಯ ಆರ್.ಪಿ.ಕೌಜಲಗಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಆರ್.ಕುಲಕರ್ಣಿ, ಕಾರ್ಮಿಕ ನೀರೀಕ್ಷಕ ಎಂ.ವಿ.ಭಾಗೋಜಿ ಇತರರು ಉಪಸ್ಥಿತರಿದ್ದರು. ಕಾಲೇಜಿನ ಶಿಕ್ಷಕ ವಿ.ಎಸ್.ಹಿರೇಮಠ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಜೀವನದಲ್ಲಿ ಎಷ್ಟೇ ಅಡೆತಡೆಗಳು ಹಾಗೂ ತೊಂದರೆಗಳು ಬಂದರೂ ಸಹ ನಮ್ಮ ಮನಸ್ಸು ದೃಢವಾಗಿರಬೇಕು. ನಮ್ಮ ನೆರೆ-ಹೊರೆಯಲ್ಲಿ ಯಾವುದಾದರೂ ಮಕ್ಕಳನ್ನು ಕೆಲಸದಲ್ಲಿ ತೊಡಗಿಸಿರುವುದು ಕಂಡು ಬಂದರೇ 1098ಗೆ ಕರೆ ಮಾಡಿ ತಿಳಿಸಬೇಕು. ಮಕ್ಕಳ ರಕ್ಷಣೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಜನರ ಸಹಕಾರ ಇಲ್ಲದೇ ಸರ್ಕಾರದ ಯಾವ ಯೋಜನೆಗಳು ಪೂರ್ಣಗೊಳ್ಳುವುದಿಲ್ಲ. ಆದ್ದರಿಂದ ಬಾಲ ಕಾರ್ಮಿಕ ಪದ್ಧತಿ ಹೋಗಲಾಡಿಸಲು ಎಲ್ಲರೂ ಕೈ ಜೋಡಿಸಿ.
-ಸಿದ್ದರಾಮ, ಪ್ರಧಾನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರು.