ದೃಷ್ಟಿದೋಷ ಹೊಂದಿದವರ ಸಂಖ್ಯೆಯಲ್ಲಿ ಭಾರತದಲ್ಲಿಯೇ ಅಧಿಕ: ಎಸ್‌.ವಿ. ಸಂಕನೂರ

| Published : Aug 26 2024, 01:37 AM IST

ದೃಷ್ಟಿದೋಷ ಹೊಂದಿದವರ ಸಂಖ್ಯೆಯಲ್ಲಿ ಭಾರತದಲ್ಲಿಯೇ ಅಧಿಕ: ಎಸ್‌.ವಿ. ಸಂಕನೂರ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮುಂದಿರುವ ದೊಡ್ಡ ಸವಾಲನ್ನು ಮೆಟ್ಟಿ ನಿಂತು ಅಂಧತ್ವ ಮುಕ್ತ ಸಮಾಜ ಕಟ್ಟಬೇಕಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಅಳ್ನಾವರ: ಕಣ್ಣು ಪ್ರತಿಯೊಬ್ಬ ಮಾನವನ ಪ್ರಮುಖ ಅಂಗಗಳಲ್ಲಿ ಒಂದು. ಮಹತ್ವದ ಅಂಗವಾದ ದೃಷ್ಟಿ ದೋಷ ಪ್ರಪಂಚದ ಸಂಖ್ಯೆಯಲ್ಲಿ ನಮ್ಮ ದೇಶದಲ್ಲಿಯೇ ಅಧಿಕವಾಗಿದೆ. ಇದನ್ನು ಹೋಗಲಾಡಿಸಲು ಸರ್ಕಾರ, ಸಂಘ ಸಂಸ್ಥೆಗಳು, ವೈಧ್ಯಕೀಯ ಕ್ಷೇತ್ರ ಸದಾ ಶ್ರಮಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಹುಬ್ಬಳ್ಳಿಯ ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಅಂಗ ಸಂಸ್ಥೆಯಾದ ಎಸ್.ಜಿ.ಎಂ. ಟ್ರಸ್ಟ್ ವತಿಯಿಂದ ಇಲ್ಲಿಯ ಸಂಜೀವಿನಿ ಆಯುರ್ ಆಸ್ಪತ್ರೆಯ ನೆಲಮಹಡಿಯಲ್ಲಿ ತೆರೆದ ಸುಸಜ್ಜಿತ ದೃಷ್ಟಿ ಕೇಂದ್ರ ಭಾನುವಾರ ಉದ್ಘಾಟಿಸಿ ಮಾತನಾಡಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮುಂದಿರುವ ದೊಡ್ಡ ಸವಾಲನ್ನು ಮೆಟ್ಟಿ ನಿಂತು ಅಂಧತ್ವ ಮುಕ್ತ ಸಮಾಜ ಕಟ್ಟಬೇಕಿದೆ ಎಂದರು. ಗ್ರಾಮೀಣ ಭಾಗದಲ್ಲಿಯೇ ಅಂದತ್ವ ಸಮಸ್ಯೆ ಹೆಚ್ಚಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ದೂರದ ಶಹರ ಪ್ರದೇಶಕ್ಕೆ ಹೋಗದ ಬಡವರ ಪಾಲಿಗೆ ಸ್ಥಳೀಯವಾಗಿ ಉಚಿತ ಚಿಕಿತ್ಸೆ ದೊರೆಯಬೇಕು ಎಂಬ ಹಂಬಲದಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ದೂರದೃಷ್ಟಿ ವಿಚಾರಧಾರೆ ಪ್ರಯುಕ್ತ ಕೋಲ್ ಇಂಡಿಯಾ ಕಂಪನಿಯ ಪ್ರಾಯೋಜಕತ್ವದಲ್ಲಿ ಈ ಭಾಗದ ಅಳ್ನಾವರ, ಸವಣೂರು, ಮಹಾಲಿಂಗಪೂರ, ಬೀಳಗಿ ಸೇರಿ ನಾಲ್ಕು ಕಡೆ ಏಕಕಾಲಕ್ಕೆ ಇಂದು ದೃಷ್ಟಿ ಕೇಂದ್ರ ಉದ್ಘಾಟಿಸಲಾಗಿದೆ ಎಂದರು.

ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಮಾತನಾಡಿ, ನೇತ್ರ ತಪಾಸಣೆಯಲ್ಲಿ ತಮ್ಮದೆ ಆದ ಛಾಪು ಮೂಡಿಸಿದ ಹುಬ್ಬಳ್ಳಿಯ ಡಾ. ಎಂ.ಎಂ. ಜೋಶಿ ಅವರ ನೇತೃತ್ವದಲ್ಲಿ ದೃಷ್ಟಿ ಕೇಂದ್ರ ತರೆದಿದ್ದು ಶ್ಲಾಘನೀಯ ಕಾರ್ಯ, ಇಲ್ಲಿ ನುರಿತ ಸಿಬ್ಬಂದಿ ಕಾರ್ಯ ನಿಭಾಯಿಸುತ್ತಾರೆ. ಪ್ರತಿ ಮನೆಗೂ ಭೇಟಿ ನೀಡಿ ಕಣ್ಣಿನ ತಪಾಸಣೆ ಮಾಡಲಾಗುತ್ತದೆ ಜೊತೆಗೆ

ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಆನ್‌ಲೈನ್ ತಜ್ಞರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆದು ಚಿಕಿತ್ಸೆ ನೀಡುವ ವಿನೂತನ ಪದ್ದತಿ ಇಲ್ಲಿದೆ. ದೃಷ್ಟಿದೋಷದ ಕತ್ತಲ ಬದುಕಿಗೆ ಮರಳಿ ದೃಷ್ಟಿ ನೀಡಿ ಅವರ ಬದುಕಲ್ಲಿ ಹೊಸ ಬೆಳಕಿನ ಆಶಾಕಿರಣ ಮೂಡಿಸುವ ಕಾರ್ಯ ಶ್ರೇಷ್ಠವಾದದು ಎಂದರು.

ಶಿಬಿರದಲ್ಲಿ 250ಕ್ಕೂ ಹೆಚ್ಚು ಜನರನ್ನು ತಪಾಸಣಾ ಮಾಡಿ 20 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ ಎಂದು ಕಣ್ಣು ತಪಾಸಣೆ ಮಾಡಿದ ಡಾ. ಉತ್ತರಾ ಜೋಶಿ ತಿಳಿಸಿದರು. ಬೆಳಗ್ಗೆಯಿಂದ ಜನರು ಸಾಲು ನಿಂತು ಕಣ್ಣು ತಪಾಸಣೆ ಮಾಡಿಕೊಂಡರು. ಅಳ್ನಾವರ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಇದ್ದರು. ಬಿಜೆಪಿ ಪಕ್ಷದ ಅಳ್ನಾವರ ಮಂಡಳ ಅಧ್ಯಕ್ಷ ಕಲ್ಮೇಶ ಬೈಲೂರ, ಜಿಲ್ಲಾ ಉಪಾಧ್ಯಕ್ಷ ನಾರಾಯಣ ಮೋರೆ, ಡಾ. ಸಂಜಯ ಚಂದರಗಿಮಠ, ಡಾ. ಸಂಜೀವ ಕುಲಕರ್ಣಿ, ಡಾ. ಕೆ.ವಿ. ಸತ್ಯಮೂರ್ತಿ , ಮಂಜು ಪಾಟೀಲ, ಹರೀಶ ಪೂಂಜಾ ಮತ್ತಿತರರು ಇದ್ದರು. ಮಂಜುನಾಥ ಪಾಟೀಲ ನಿರೂಪಿಸಿದರು.