ಸಾರಾಂಶ
ಯಲಬುರ್ಗಾ: ಕೂಸಿನ ಮನೆಗಳು ರಾಜ್ಯಕ್ಕೆ ಮಾದರಿಯಾಗುವಂತೆ ನಿರ್ಮಾಣ ಮಾಡುವ ಮೂಲಕ ಕೇರ್ ಟೇಕರ್‌ಗಳ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಬೆಟದಪ್ಪ ಮಾಳೆಕೊಪ್ಪ ಹೇಳಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂ, ತಾಪಂನಿಂದ ಆಯೋಜಿಸಿದ್ದ ಏಳು ದಿನಗಳ ಮಕ್ಕಳ ಆರೈಕೆದಾರರ ತರಬೇತಿಯ ಕಾರ್ಯಕ್ರಮ ಮಾತನಾಡಿದ ಅವರು, ಸರ್ಕಾರ ಇಂತಹ ಮಹತ್ವಾಕಾಂಕ್ಷಿ ಯೋಜನೆ ಕೂಸಿನ ಮನೆ ಯಶಸ್ವಿಯಾಗುವಲ್ಲಿ ಎಲ್ಲರ ಕಾರ್ಯ ಮೆಚ್ಚುವಂಥದ್ದು ಎಂದರು.ಮಕ್ಕಳ ಆರೈಕೆದಾರರು ಕೂಲಿ ಕಾರ್ಮಿಕರ ಮಕ್ಕಳ ಆರೈಕೆ ಮಾಡಿ ಅವರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಗ್ರಾಪಂಗಳ ಕೂಸಿನ ಮನೆಯಲ್ಲಿ ಮಕ್ಕಳ ಆರೈಕೆದಾರರು ಮಕ್ಕಳ ಲಾಲನೆ-ಪಾಲನೆ ಮಾಡಬೇಕು. ಅದಕ್ಕಾಗಿ ಅವರಿಗೆ ಏಳು ದಿನಗಳ ತರಬೇತಿ ನೀಡಲಾಗಿದೆ. ಇದರ ಸದುಪಯೋಗ ಪಡೆದು ತಾವು ಈ ಕೂಸಿನ ಮನೆಗಳು ಮಾದರಿಯಾಗುವಂತೆ ಕೆಲಸ ಮಾಡಬೇಕು ಎಂದರು.ತಾಪಂ ಸಹಾಯಕ ನಿರ್ದೇಶಕಿ ಗೀತಾ ಅಯ್ಯಪ್ಪ ಮಾತನಾಡಿ, ಏಳು ದಿನ ತರಬೇತಿ ಪಡೆದ ಮಕ್ಕಳ ಆರೈಕೆದಾರರು ಚೆನ್ನಾಗಿ ಕಾರ್ಯ ನಿರ್ವಹಿಸಿ ಕೂಸಿನ ಮನೆಗಳು ಜಿಲ್ಲೆಗೆ ಮಾದರಿಯಾಗಬೇಕು ಎಂದರು.ಕಾರ್ಯಕ್ರಮದಲ್ಲಿ ೭ ದಿನ ತರಬೇತಿ ಪಡೆದ ಮಕ್ಕಳ ಆರೈಕೆದಾರರಿಗೆ ಅಭಿನಂದನಾ ಪ್ರಮಾಣಪತ್ರ ನೀಡಲಾಯಿತು.ಈ ಸಭೆಯಲ್ಲಿ ಅಂಗನವಾಡಿ ಮೇಲ್ವಿಚಾರಕಿ ಜಯಲಕ್ಷ್ಮೀ ಮೆಣಸಿನಕಾಯಿ, ತಾಪಂ ಐಇಸಿ ಸಂಯೋಜಕ ಲಕ್ಷ್ಮಣ್ಣ ಕೆರಳ್ಳಿ, ಶರಣಪ್ಪ ಹಾಳಕೇರಿ, ವಿಷಯ ನಿರ್ವಾಹಕ ಬಸವರಾಜ ಮಾಲಿಪಾಟೀಲ್, ಮಕ್ಕಳ ಆರೈಕೆದಾರರು ಇದ್ದರು.