ಜನತಾ ದರ್ಶನದಲ್ಲಿ ಬರುವ ಅರ್ಜಿಗಳನ್ನು ಗಮನಿಸಿದಾಗ ಆಯಾ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ದೂರುಗಳನ್ನು ಸರಿಯಾಗಿ ಪರಿಶೀಲಿಸದೆ ಕಾಟಾಚಾರಕ್ಕೆ ಉತ್ತರಿಸುತ್ತಿದ್ದಾರೆ ಎನಿಸುತ್ತಿದೆ ಎಂದು ಸಚಿವ ಸಂತೋಷ ಲಾಡ್‌ ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡ:

ಕೆಲಸದಲ್ಲಿ ವಿನಾಕಾರಣ ವಿಳಂಬ, ಉದ್ಯೋಗದಲ್ಲಿ ಆಲಸ್ಯ ಮತ್ತು ನಡಿತ್ತೈತಿ ಬಿಡು ಎನ್ನುವ ಮನೋಭಾವನೆಯ ಅಧಿಕಾರಿ, ಸಿಬ್ಬಂದಿ ಮನೆಗೆ ಹೋಗಬಹುದು ಎಂದು ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತವು ಮಂಗಳವಾರ ಆಯೋಜಿಸಿದ್ದ ಜಿಲ್ಲಾಮಟ್ಟದ 12ನೇ ಜನತಾ ದರ್ಶನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಅವರು, ಜನತಾ ದರ್ಶನದಲ್ಲಿ ಬರುವ ಅರ್ಜಿಗಳನ್ನು ಗಮನಿಸಿದಾಗ ಆಯಾ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ದೂರುಗಳನ್ನು ಸರಿಯಾಗಿ ಪರಿಶೀಲಿಸದೆ ಕಾಟಾಚಾರಕ್ಕೆ ಉತ್ತರಿಸುತ್ತಿದ್ದಾರೆ ಎನಿಸುತ್ತಿದೆ. ಸಾರ್ವಜನಿಕ ಕಳಕಳಿ, ಮಾನವೀಯತೆ ನೋಡದೆ ಯಾಂತ್ರಿಕವಾಗಿ ವರ್ತಿಸುತ್ತಿದ್ದಾರೆ ಎಂಬುದು ಪದೇ ಪದೇ ಸಲ್ಲಿಕೆ ಆಗುತ್ತಿರುವ ಅರ್ಜಿಗಳಿಂದ ತಿಳಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಅಧಿಕಾರಿ, ನೌಕರರು ಕರ್ತವ್ಯದಲ್ಲಿ ಅಶಿಸ್ತು ತೋರಿದರೆ ಶಿಸ್ತುಕ್ರಮ ನಿಶ್ಚಿತ. ಸಾರ್ವಜನಿಕರು ಸಣ್ಣ-ಪುಟ್ಟ ಸಮಸ್ಯೆಗಳಿಗಾಗಿ ಜಿಲ್ಲಾ ಹಂತದ ಕಚೇರಿಗಳಿಗೆ, ಜನತಾ ದರ್ಶನಕ್ಕೆ ಬರುವುದು ಉಚಿತವಲ್ಲ. ಎಲ್ಲ ಅಧಿಕಾರಿ, ಸಿಬ್ಬಂದಿ ಹಂತದಲ್ಲಿಯೇ ಸಾರ್ವಜನಿಕ ಸಮಸ್ಯೆಗಳನ್ನು ಸಂಯಮದಿಂದ ಆಲಿಸಿ, ಪರಿಹರಿಸಬೇಕು ಎಂದರು.

ಜನತಾ ದರ್ಶನದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 87ಕ್ಕೂ ಹೆಚ್ಚು ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಪರಿಹಾರಕ್ಕೆ ಲಾಡ್‌ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಜಿಪಂ ಸಿಇಒ ಭುವನೇಶ ಪಾಟೀಲ, ಐಎಎಸ್ ಪ್ರೊಬೇಷನರಿ ಅಧಿಕಾರಿ ರೀತಿಕಾ ವರ್ಮಾ ಸೇರಿ ಅಧಿಕಾರಿಗಳಿದ್ದರು. 87 ಅಹವಾಲು ಸ್ವೀಕಾರ..

ಕಂದಾಯ ಇಲಾಖೆಯ 21, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ 20, ನಗರಾಭಿವೃದ್ಧಿ ಇಲಾಖೆ 19, ವಸತಿ ಇಲಾಖೆ 7, ಸಾರಿಗೆ ಇಲಾಖೆ 4, ಗೃಹ ಇಲಾಖೆ ಮತ್ತು ಇಂಧನ ಇಲಾಖೆ 3, ಕೃಷಿ, ಶಾಲಾ ಶಿಕ್ಷಣ ಇಲಾಖೆ, ಆಹಾರ ಇಲಾಖೆ ತಲಾ 2, ಹಿಂದುಳಿದ ವರ್ಗಗಳ, ಸಮಾಜ ಕಲ್ಯಾಣ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆಗಳ ತಲಾ ಒಂದು ಸೇರಿ 87 ಅಹವಾಲು ಸ್ವೀಕಾರವಾಗಿವೆ.