ವಾಲಿದ ಕಾರವಾರದ ಕಾಳಿ ನದಿಯ ಹಳೆ ಸೇತುವೆ ಸ್ಲ್ಯಾಬ್

| Published : Feb 15 2025, 12:31 AM IST

ಸಾರಾಂಶ

ವಾಲಿದ ಹಳೆ ಸೇತುವೆಯ ಸ್ಲ್ಯಾಬ್ ತೆರವು ಕಾರ್ಯಾಚರಣೆಯೂ ಅಷ್ಟೇ ಕಠಿಣವಾಗಿದ್ದು, ಜಾಗರೂಕತೆಯಿಂದ ತೆರವು ಮಾಡಬೇಕಿದೆ.

ಕಾರವಾರ: ಇಲ್ಲಿನ ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಹಳೆ ಸೇತುವೆ ಈಗಾಗಲೇ ಕುಸಿದಿದ್ದು, ತೆರವು ಕಾರ್ಯಾಚರಣೆ ವೇಳೆ ಒಂದು ಪಿಲ್ಲರ್‌ನ ತಳಭಾಗ ಮುರಿದು ಸ್ಲ್ಯಾಬ್ ನೇರವಾಗಿ ವಾಲಿದೆ. ಅದೃಷ್ಟವಶಾತ್ ಬಲಭಾಗಕ್ಕೆ ವಾಲದ ಕಾರಣ ಮತ್ತೊಂದು ಭಾಗದ ಸೇತುವೆಗೆ ಧಕ್ಕೆಯಾಗಿಲ್ಲ.

ಕಳೆದ ವರ್ಷದ ಮಳೆಗಾಲದ ಅವಧಿಯಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಾರವಾರ- ಗೋವಾ ಸಂಪರ್ಕಿಸುತ್ತಿದ್ದ ಹಳೆಯ ಕಾಳಿ ಸೇತುವೆ ರಾತ್ರೋ ರಾತ್ರಿ ಮುರಿದು ಬಿದ್ದು ಸೇತುವೆ ಮೇಲೆ ಚಲಿಸುತ್ತಿದ್ದ ಲಾರಿ ನದಿಯಲ್ಲಿ ಮುಳುಗಡೆಯಾಗಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದ.

ಮಳೆಗಾಲದ ಬಳಿಕ ಮುರಿದುಬಿದ್ದ ಸೇತುವೆಯ ಬಿಡಿಭಾಗಗಳ ತೆರವು ಮಾಡುವ ಕೆಲಸ ನಡೆಯುತ್ತಿದೆ. ಮುರಿದು ಬಿದ್ದ ಸೇತುವೆಯ ಒಂದು ಭಾಗ ಶುಕ್ರವಾರ ನಸುಕಿನಲ್ಲಿ ಏಕಾಏಕಿಯಾಗಿ ಪಿಲ್ಲರ್ ಕೆಳಭಾಗದಲ್ಲಿ ಕಳಚಿ ತುಂಡಾಗಿದೆ. ಒಂದು ವೇಳೆ ಮುರಿದ ಹಳೆಯ ಸೇತುವೆಯ ಭಾಗ ಬಲಕ್ಕೆ ವಾಲಿ ಹೊಸ ಸೇತುವೆಗೆ ಬಡಿದಿದ್ದರೆ ಹೊಸ ಸೇತುವೆಗೂ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗುತ್ತಿತ್ತು.

ವಾಲಿದ ಹಳೆ ಸೇತುವೆಯ ಸ್ಲ್ಯಾಬ್ ತೆರವು ಕಾರ್ಯಾಚರಣೆಯೂ ಅಷ್ಟೇ ಕಠಿಣವಾಗಿದ್ದು, ಜಾಗರೂಕತೆಯಿಂದ ತೆರವು ಮಾಡಬೇಕಿದೆ. ಗೋವಾ- ಕಾರವಾರ ಸಂಪರ್ಕಕ್ಕೆ ಈಗ ಹೊಸ ಸೇತುವೆಯೊಂದೇ ಕೊಂಡಿಯಾಗಿದ್ದು, ಅದಕ್ಕೂ ಹಾನಿಯಾದರೆ ಕಾರವಾರ ತಾಲೂಕಿನ ಸದಾಶಿವಗಡ, ಮಾಜಾಳಿ ಹಾಗೂ ಗೋವಾ ರಾಜ್ಯ ಒಳಗೊಂಡು ಹಲವು ಊರುಗಳಿಗೆ ಕಾರವಾರದ ಮೂಲಕ ತೆರಳಲು ರಸ್ತೆಯೇ ಇಲ್ಲದಾಗುತ್ತದೆ.ಮಹಿಳೆ ಮೇಲೆ ಹಲ್ಲೆ: ಅಪರಾಧಿಗೆ ೧೦ ವರ್ಷ ಜೈಲು

ಶಿರಸಿ: ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅಪರಾಧಿಗೆ ೧೦ ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹೧೯ ಸಾವಿರ ದಂಡ ಹಾಗೂ ₹೧೦ ಸಾವಿರ ಮಾರಣಾಂತಿಕ ಹಲ್ಲೆಗೊಳಗಾದವರಿಗೆ ನೀಡಬೇಕೆಂದು ನಗರದ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.ಜೋಯಿಡಾ ತಾಲೂಕಿನ ರಾಮನಗರ ಕ್ಯಾಸಲ್‌ರಾಕ್ ಗ್ರಾಮದ ಮಾರ್ಕೆಟ್ ರಸ್ತೆಯ ಆರೋಪಿತ ರಮೇಶ ಗುಂಡು ಪಾವಲೆ ಎಂಬಾತನಿಗೆ ಶಿಕ್ಷೆ ಪ್ರಕಟವಾಗಿದೆ.ಜೋಯಿಡಾ ತಾಲೂಕಿನ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾಸಲ್‌ರಾಕ್ ಗ್ರಾಮದ ಮಾರ್ಕೆಟ್ ರಸ್ತೆಯಲ್ಲಿಯ ಸಾಕ್ಷಿದಾರ ದೇವಿದಾಸ ಪಾವಲೆಯವರ ಸಹೋದರ ಹಾಗೂ ಸಹೋದರಿಯವರ ಆಸ್ತಿಯನ್ನು ಹಂಚಿಕೊಂಡರೂ ಸಮಾಧಾನಗೊಂಡಿರಲಿಲ್ಲ. ಸಾಕ್ಷಿದಾರ ದೇವಿದಾಸ ಪಾವಲೆ ಅವರು ತನ್ನ ಸಹೋದರಿಯವರ ಪಾಲಿಗೆ ಬಂದಿರುವ ಮನೆಗಳನ್ನು ಬಳಕೆ ಮಾಡುತ್ತಿರುವುದರಿಂದ ಅವುಗಳ ಪಾಲು ಆಗಬೇಕು ಎಂದು ಜಗಳ ಮಾಡುತ್ತಿದ್ದ. 2020ರ ಮೇ ೨೯ರಂದು ಅಪರಾಧಿ ರಮೇಶ ಪಾವಲೆಯು ಕತ್ತಿಯಿಂದ ಸುಜಾತಾ ಪಾವಲೆ ಮೇಲೆ ಹಲ್ಲೆ ನಡೆಸಿ, ಗಾಯಗೊಳಿಸಿ ಕೊಲೆಗೆ ಯತ್ನಿಸಿದ್ದಾನೆ ಎಂದು ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ಉಪನಿರೀಕ್ಷಕ ಕಿರಣ ಪಾಟೀಲ ತನಿಖೆ ಕೈಗೊಂಡು ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನಗರದ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಪ್ರಕರಣದಲ್ಲಿರುವ ಸಾಕ್ಷಿಯಿಂದ ಆರೋಪಿತನ ವಿರುದ್ಧ ಆರೋಪ ಸಾಬೀತಾಗಿದ್ದರಿಂದ ₹೧೦ ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ದಂಡ ಹಾಗೂ ಗಾಯಾಳುವಿಗೆ ಪರಿಹಾರ ನೀಡಬೇಕೆಂದು ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಂ. ಮಳಗಿಕರ್ ವಾದ ಮಂಡಿಸಿದರು.