ಸಮಾಜದ ಓರೆಕೋರೆಗಳನ್ನು ತಿದ್ದುವ ಪ್ರಯತ್ನ ಮಾಡಿದ ಅಂಬಿಗರ ಚೌಡಯ್ಯ ಒಂದರ್ಥದಲ್ಲಿ ಬಂಡಾಯದ ಶರಣನಾಗಿ ನಮ್ಮ ಮುಂದೆ ನಿಲ್ಲುತ್ತಾರೆ ಎಂದು ಪತ್ರಕರ್ತ ಬಿ.ಡಿ.ರವಿಕುಮಾರ್ ಅಭಿಪ್ರಾಯಪಟ್ಟರು.
ಸಾಗರ: ಸಮಾಜದ ಓರೆಕೋರೆಗಳನ್ನು ತಿದ್ದುವ ಪ್ರಯತ್ನ ಮಾಡಿದ ಅಂಬಿಗರ ಚೌಡಯ್ಯ ಒಂದರ್ಥದಲ್ಲಿ ಬಂಡಾಯದ ಶರಣನಾಗಿ ನಮ್ಮ ಮುಂದೆ ನಿಲ್ಲುತ್ತಾರೆ ಎಂದು ಪತ್ರಕರ್ತ ಬಿ.ಡಿ.ರವಿಕುಮಾರ್ ಅಭಿಪ್ರಾಯಪಟ್ಟರು.
ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿವಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಜಾತಿ ಬೇಧ ಅಸಮಾನತೆಯನ್ನು ತೀವ್ರವಾಗಿ ವಿರೋಧಿಸಿದ ಅಂಬಿಗರ ಚೌಡಯ್ಯ ಅವರ ವಚನಗಳಲ್ಲಿ ದೇವರು, ಭಕ್ತಿ, ಶ್ರಮ, ಕಾಯಕ, ಮಾನವೀಯ ಮೌಲ್ಯಗಳು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು.ತಾನು ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟು ಹಾಕುವ ಅಂಬಿಗ ಮಾತ್ರವಲ್ಲ. ಭವಸಾಗರದಲ್ಲೂ ಬವಣೆಯಿಂದ ಬಳಲುವ ಭಕ್ತಜನರನ್ನು ವಚನಾಮೃತದ ಮೂಲಕ ಸಾಂತ್ವನಗೊಳಿಸುವ ಶರಣ ಎನ್ನುವುದನ್ನು ತೋರಿಸಿ ಕೊಟ್ಟಿರುವ ಅಂಬಿಗರ ಚೌಡಯ್ಯನವರು ತಮ್ಮ ಹತಾಶೆ, ನೋವು, ಬೇಗುದಿ ಎಲ್ಲವನ್ನೂ ತನ್ನದೆ ತೀಕ್ಷ್ಣ ಪದಗಳ ಆಡುನುಡಿಯ ಮೂಲಕ ವಚನಗಳಾಗಿ ಪರಿವರ್ತಿಸಿ, ನಿರ್ಭಿಡೆಯಿಂದ ಇಷ್ಟ ದೈವದ ಬದಲಿಗೆ ತನ್ನದೆ ಅಂಕಿತ ನಾಮ ಇರಿಸಿ ಹೇಳಿದ್ದಾರೆ ಎಂದು ವಿವರಿಸಿದರು.
ಗಂಗಾಮತ ಸಮಾಜದ ಅಧ್ಯಕ್ಷ ಶಿವಾನಂದ್ ಆರ್. ಮಾತನಾಡಿದರು. ಉಪ ತಹಸೀಲ್ದಾರ್ ತೋಯಜಾಕ್ಷಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಮುಖರಾದ ರವಿ ಆಯನೂರು, ರವಿಕುಮಾರ್, ಭಾಸ್ಕರ್, ಮಧುರಾ ಶಿವಾನಂದ್, ವೆಂಕಟೇಶ್ ಚಂದಳ್ಳಿ, ಪರಿಮಳ, ಆನಂದ ಬಾಳೆಕೊಪ್ಪ, ಶಿವಾನಂದ ಗೇರುಬೀಸು, ದೇವರಾಜ್, ದಯಾನಂದ್ ಇನ್ನಿತರರು ಹಾಜರಿದ್ದರು. ವಿ.ಟಿ.ಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.