ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಭಾರತದ ಪ್ರತಿಯೊಬ್ಬ ಪ್ರಜೆಗೆ ಇರುವ ಏಕೈಕ ಗ್ರಂಥ ಎಂದರೆ ಸಂವಿಧಾನ. ಇಂತಹ ಮಾನವೀಯ ಗ್ರಂಥದಿಂದ ಸಮಾನತೆಯ ಸಾರ್ಥಕತೆ ಕಂಡುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.ತಾಲೂಕಿನ ಕೆರಗೋಡು ಗ್ರಾಮದ ಒಂದನೇ ಬ್ಲಾಕ್‌ನಲ್ಲಿ ಅಂಬೇಡ್ಕರ್ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಭೀಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಭಾರತಕ್ಕೆ ಮಾತ್ರ ನಾಯಕರಲ್ಲ. ಇಡೀ ವಿಶ್ವಕ್ಕೇ ನಾಯಕರು. ಪ್ರಪಂಚದ ೭೦ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಅವರ ಪುತ್ಥಳಿ, ಪ್ರತಿಮೆಗಳಿವೆ ಎಂದರು.
ಅಂಬೇಡ್ಕರ್ ಭಾರತದಲ್ಲಿ ಹುಟ್ಟಲಿಲ್ಲ ಎಂದರೆ ದೇಶ ಬಡವಾಗುತ್ತಿತ್ತು. ಇಂತಹ ದೇಶದಲ್ಲಿ ಹುಟ್ಟಿರುವ ನಾವು ಭಾಗ್ಯಶಾಲಿಗಳು, ಅಂಬೇಡ್ಕರ್ ಜಯಂತಿ ಒಂದು ದಿನಕ್ಕೆ ಸೀಮಿತವಾಗಬಾರದು. ಅವರ ಮೌಲ್ಯಗಳು, ಚಿಂತನೆಗಳು, ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಮ್ಮ ಮಕ್ಕಳಿಗೂ ತಿಳಿಸಬೇಕು ಎಂದರು.ಶಾಸಕ ಪಿ.ರವಿಕುಮಾರ್ ಮಾತನಾಡಿ, ಅಂಬೇಡ್ಕರ್ ಅವರು ಬರೆದ ಶ್ರೇಷ್ಠ ಸಂವಿಧಾನವನ್ನು ಕೋಮುವಾದಿಗಳು ಬದಲಾಯಿ ಸುವುದಕ್ಕಾಗಿ ಧರ್ಮ ಹಾಗೂ ಜಾತಿಗಳ ನಡುವೆ ವಿಷಬೀಜ ಬಿತ್ತುವ ಮೀರ್ ಸಾದಿಕ್ ಕೆಲಸ ಮಾಡುತ್ತಿದ್ದಾರೆ, ಅಂತವರ ಬಗ್ಗೆ ಸಾರ್ವಜನಿಕರು ಹಾಗೂ ಯುವಕರು ಎಚ್ಚರ ವಹಿಸಬೇಕು ಎಂದರು.
ಸಂವಿಧಾನ ತಿರುಚುವ ಕೆಲಸಕ್ಕೆ ಕೈ ಹಾಕಿರುವ ಕೋಮುವಾದಿಗಳು ಜಾತಿ-ಜಾತಿಗಳ ನಡುವೆ ಗಲಭೆಯೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ನಾವೇ ಹೊಡೆದಾಡಿಕೊಳ್ಳುವಂತೆ ಮಾಡುತ್ತಿದ್ದಾರೆ. ಇಂತಹ ಸಮಾಜಘಾತುಕರ ಬಗ್ಗೆ ಎಚ್ಚರವಹಿಸಬೇಕೆಂದು ತಿಳಿಸಿದರು.ಮೈಸೂರು ಪತ್ರಕರ್ತರ ಸಂಘದ ಅಧ್ಯಕ್ಷ ದೀಪಕ್ ಮುಖ್ಯ ಭಾಷಣ ಮಾಡಿದರು. ಮೈಷುಗರ್ ಎಂಡಿ ಮಂಗಲ್ ದಾಸ್, ದಸಂಸ ಸಂಚಾಲಕ ಗುರುಪ್ರಸಾದ್ ಕೆರಗೋಡು, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್‌ಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ನಾಗೇಶ್, ಕೆಎಸ್‌ಆರ್‌ಟಿಸಿ ವಿಭಾಗಿಯ ನಿಯಂತ್ರಣ ಅಧಿಕಾರಿ ಎಸ್.ಪಿ. ನಾಗರಾಜು, ಮದನ್, ಪ್ರಸನ್ನಕುಮಾರ್, ವಸಂತರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್, ಸದಸ್ಯರಾದ ಶಾಂತಗಿರಿ, ಲಿಂಗದೇವರು, ಸುಹಾಸಿನಿ, ದಿವಾರ್ಕ ಇತರರು ಉಪಸ್ಥಿತರಿದ್ದರು.