ಬಾಪೂಜಿ ನಗರದಲ್ಲಿ 64ನೇ ವರ್ಷದ ಶ್ರೀ ದ್ರೌಪತಮ್ಮ ಕರಗ ಮಹೋತ್ಸವ । ಪೂಜೆ ಸಲ್ಲಿಸಿ ಕಾಣಿಕೆ ಅರ್ಪಿಸಿದ ಜನತೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರನಗರದ ಬಾಪೂಜಿ ನಗರದಲ್ಲಿ ದಕ್ಷಿಣ ಭಾರತದಲ್ಲಿಯೇ ಮಹಿಳೆಯೋರ್ವರು ಹೊರುವ ಏಕೈಕ ಕರಗವಾದ ಶ್ರೀ ದ್ರೌಪತಮ್ಮನವರ ಕರಗ ಮಹೋತ್ಸವ ಶನಿವಾರ ರಾತ್ರಿ ಅತ್ಯಂತ ವಿಶಿಷ್ಟ, ವೈಭವ ಮತ್ತು ವಿಜೃಂಭಣೆಯಿಂದ ನಡೆಯಿತು.
ನಗರದ ಶ್ರೀ ಅರುಂಧತಿ ಹರಿಜನ ಅಭಿವೃದ್ಧಿ ಸಂಘ ಇವರ ಆಶ್ರಯದಲ್ಲಿ ಬಾಪೂಜಿ ನಗರದಲ್ಲಿ ನೆಲೆಸಿರುವ ಶ್ರೀ ಮಾತಾ ಮಹೇಶ್ವರಾಂಭ ದೇವಾಲಯದಿಂದ 64ನೇ ವರ್ಷದ ಶ್ರೀ ದ್ರೌಪತಮ್ಮ ಕರಗ ಮಹೋತ್ಸವದಲ್ಲಿ ತಮಿಳುನಾಡಿನ ಕೃಷ್ಣಗಿರಿಯ ಪುಷ್ಪಾವತಮ್ಮ(ಪುತ್ತಮ್ಮ) ಹೂವಿನ ಕರಗವನ್ನು ರಾತ್ರಿ ಹತ್ತು ಗಂಟೆಗೆ ಹೊತ್ತು ದೇವಾಲಯದಿಂದ ಹೊರ ಬರುತ್ತಿದ್ದಂತೆ ನೆರೆದಿದ್ದ ಜನತೆ ಹರ್ಷೋದ್ಗಾರ ಮಾಡಿ ಭಕ್ತಿಯಿಂದ ನಮಿಸಿದರು. ಕರಗವು ಬಾಪೂಜಿ ನಗರಲ್ಲಿ ಸಂಚರಿಸಿದಾಗ ಅಲ್ಲಿಯ ಜನತೆ ಪೂಜೆ ಸಲ್ಲಿಸಿ ಕಾಣಿಕೆಗಳನ್ನು ಸರ್ಮಪಿಸಿದರು.ಬಾಪೂಜಿ ನಗರದಿಂದ ಆರಂಭವಾದ ದ್ರೌಪದಮ್ಮನವರ ಕರಗವು ಟೌನ್ ಹಾಲ್ ವೃತ್ತದಲ್ಲಿ ಹಾಕಿದ್ದ ವೇದಿಕೆಯೇರಿತು. ವೇದಿಕೆಯಲ್ಲಿ ಕರಗ ಹೊತ್ತಿದ್ದ ಪುಷ್ಪಾವತಮ್ಮ ಹಾಡುಗಳಿಗೆ ನೃತ್ಯ ಮಾಡಿ, ಅಲ್ಲಿ ನೆರೆದಿದ್ದ ಜನರ ಮನಸೂರೆಗೊಳ್ಳುವಂತೆ ಮಾಡಿದರು. ಅಲ್ಲಿಂದ ಬಜಾರ್ ರಸ್ತೆ, ಶಿಡ್ಲಘಟ್ಟ ರಸ್ತೆಯ ಮೂಲಕ ಚಾಮರಾಜ ಪೇಟೆಯ ಅಂಬೇಡ್ಕರ್ ನಗರ ಪ್ರವೇಶಿಸಿತು. ಅಂಬೇಡ್ಕರ್ ನಗರದಲ್ಲಿ ಪ್ರತಿಯೊಬ್ಬರು ಭಕ್ತಿ ಬಾವದಿಂದ ಕರಗವನ್ನು ಬರ ಮಾಡಿಕೊಂಡು ಪೂಜೆ ಸಲ್ಲಿಸಿ ಕಾಣಿಕೆಗಳನ್ನು ಸರ್ಮಪಿಸಿದರು.
ನಗರದಲ್ಲಿ ಸಂಚರಿಸಿದ ಕರಗಕ್ಕೆ ಶ್ರೀರಾಮರ ದೇವಾಲಯ,ಗಂಗಮ್ಮ ದೇಗುಲ ಸೇರಿದಂತೆ ನಗರದ ಬಹುತೇಕ ದೇವಾಲಯಗಳ ಮತ್ತು ಸಾಕಷ್ಟು ಮನೆಗಳ ಬಳಿ ಕರಗಕ್ಕೆ ಪೂಜೆ, ಕಾಣಿಕೆಗಳನ್ನು ಸಲ್ಲಿಸಿ ಜನ ಕೃತಾರ್ಥರಾದರು. ನಗರದಾದ್ಯಂತ ಸಂಚರಿಸಿದ ಕರಗ ಮರಳಿ ಶ್ರೀಮಾತಾ ಮಹೇಶ್ವರಾಂಭ ದೇವಾಲಯದ ಬಳಿಗೆ ಭಾನುವಾರ ಅಪರಾಹ್ನ ತಲುಪಿ, ಅಗ್ನಿಗುಂಡ ಪ್ರವೇಶ ಮಾಡಿದ ನಂತರ ದೇವಾಲಯ ಪ್ರವೇಶಿಸಿ ಕರಗ ಮಹೋತ್ಸವಕ್ಕೆ ತೆರೆ ಬಿತ್ತು.
ಬಾಪೂಜಿ ನಗರದಲ್ಲಿ ನಡೆಯುವ ಈ ದ್ರೌಪದಮ್ಮನವರ ಕರಗ ಮಹೋತ್ಸವವು ದಕ್ಷಿಣ ಭಾರತದಲ್ಲಿಯೇ ಏಕಮಾತ್ರ ಕರಗ ಮಹೋತ್ಸವವಾಗಿ ಹೊರಹೊಮ್ಮಿದೆ. ಚಿಕ್ಕಬಳ್ಳಾಪುರದಲ್ಲಿ ಪ್ರಪ್ರಥಮ ಬಾರಿಗೆ ಮಹಿಳೆಯ ಹೊರುವ ಕರಗ ಕಳೆದ 6 ದಶಕಗಳ ಹಿಂದೆಯೇ 1962ರಲ್ಲಿ ಮಾಜಿ ಶಾಸಕ ದಿ. ಎ.ಮುನಿಯಪ್ಪ ಅವರು ಈ ಕರಗವನ್ನ ಆರಂಭಿಸಿದ್ದರು. ಈ ಭಾಗದ ಭಕ್ತರ ಆರಾಧ್ಯ ದೈವ ಶ್ರೀ ಮಾತಾ ಮಹೇಶ್ವರಾಂಭದೇವಿಯ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬರುತ್ತಿರುವುದು ವಿಶೇಷ.
ದ್ರೌಪತಮ್ಮನವರ ಕರಗ ಮಹೋತ್ಸವದ ಧಾರ್ಮಿಕ ಕೈಂಕರ್ಯಗಳು ಬುಧವಾರದಿಂದಲೇ ಆರಂಭವಾಗಿದ್ದು, ಅಂದು ಧ್ವಜಾರೋಹಣ, ಹೋಮ, ಪೂರ್ಣಾಹುತಿ ಮತ್ತು ಅಮ್ಮನವರ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಗುರುವಾರ ದೇವರಿಗೆ ವಿಶೇಷ ಅಲಂಕಾರ ಮತ್ತು ರಾತ್ರಿ 8 ಗಂಟೆಗೆ ಹಸಿಕರಗ ಮಹೋತ್ಸವ, ಶುಕ್ರವಾರ ದೀಪೋತ್ಸವ ಮತ್ತು ದೇವಿಗೆ ಹೂವಿನ ಅಲಂಕಾರ ಮಾಡಿ, ಶನಿವಾರ ಸಂಜೆ 4 ಗಂಟೆಗೆ ಚಾಮರಾಜಪೇಟೆ ದೇವಸ್ಥಾನದಲ್ಲಿ ದೇವಾನುದೇವತೆಗಳಿಗೆ ಮತ್ತು ಪಂಚಭೂತಗಳಿಗೆ ವಿಶೇಷ ಪೂಜೆ ನಂತರ ರಾತ್ರಿ ಹತ್ತು ಗಂಟೆಗೆ ಶ್ರೀ ದ್ರೌಪತಮ್ಮನವರ ಕರಗ ಮಹೋತ್ಸವವು ಅತ್ಯಂತ ಭಕ್ತಿಪೂರ್ವಕವಾಗಿ ನಡೆಸಲಾಯಿತು ಎಂದು ತಿಳಿಸಿದರು.ಕರಗ ಮಹೋತ್ಸವವನ್ನು ಶ್ರೀ ಮಹೇಶ್ವರಿ ದೇವಾಲಯ ಅಭಿವೃದ್ಧಿ ಸಮಿತಿ, ಶ್ರೀ ಮಾತಾ ಮಹೇಶ್ವರಿ ಮಹಿಳಾ ಮಂಡಳಿ, ಶ್ರೀ ಮಹೇಶ್ವರಿ ಗ್ಯಾಸ್ ಏಜೆನ್ಸಿ ಸಿಬ್ಬಂದಿ ವರ್ಗ, ಶ್ರೀ ಅರುಂಧತಿ ಹರಿಜನ ಅಭಿವೃದ್ಧಿ ಸಂಘದ ಎಂ.ಎಸ್. ಸಂದೀಪ್ ಚಕ್ರವರ್ತಿ, ಕಾರ್ಯದರ್ಶಿ ಸಿ.ಎನ್.ಮುರಳಿ ಮೋಹನ್ ಹಾಗೂ ಜಂಟಿ ಕಾರ್ಯದರ್ಶಿ ಬಿ.ವಿ. ವೆಂಕಟೇಶ್ ಅವರ ಪರಿಶ್ರಮದಿಂದ ಆರು ದಶಕಗಳಿಂದಲೂ ಕರಗ ಮಹೋತ್ಸವ ಯಶಸ್ವಿಯಾಗಿ ನಡೆದು ಬರುತ್ತಿರುವುದು ಮತ್ತೊಂದು ವಿಶೇಷ.
ಸಿಕೆಬಿ-1 ನಗರದಲ್ಲಿ ನಡೆದ ಶ್ರೀ ದ್ರೌಪತಮ್ಮನವರ ಕರಗ ಮಹೋತ್ಸವದಲ್ಲಿ ಕರಗ ಹೊತ್ತ ಪುಷ್ಪಾವತಮ್ಮ