103 ಕಾಲೇಜು ವಿದ್ಯಾರ್ಥಿಗಳಿಂದ ರಕ್ತದಾನ

| Published : Jun 30 2024, 12:46 AM IST

103 ಕಾಲೇಜು ವಿದ್ಯಾರ್ಥಿಗಳಿಂದ ರಕ್ತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಗಾಂಧೀಪುರದ ವತಿಯಿಂದ ಶುಕ್ರವಾರ ನಡೆದ ರಕ್ತದಾನ ಶಿಬಿರದಲ್ಲಿ ೧೦೩ ಕಾಲೇಜು ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.

ಹಾವೇರಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಗಾಂಧೀಪುರದ ವತಿಯಿಂದ ಶುಕ್ರವಾರ ನಡೆದ ರಕ್ತದಾನ ಶಿಬಿರದಲ್ಲಿ ೧೦೩ ಕಾಲೇಜು ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಾರ್ವಜನಿಕ ಆಸ್ಪತ್ರೆ ರಕ್ತದಾನ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಸೇರಿ ಒಟ್ಟು ೧೦೩ ಘಟಕ ರಕ್ತವನ್ನು ಸಂಗ್ರಹಿಸಲಾಯಿತು. ಕಾಲೇಜಿನ ಸಿಬ್ಬಂದಿ ವರ್ಗದವರು ರಕ್ತದಾನ ಮಾಡಿ ವಿದ್ಯಾರ್ಥಿಗಳಿಗೆ ಪ್ರೇರೇಪಣೆಯನ್ನು ನೀಡಿದರು.ರಕ್ತನಿಧಿ ಕೇಂದ್ರದ ಅಧಿಕಾರಿ ಡಾ. ಬಸವರಾಜ ತಳವಾರ ರಕ್ತದಾನ ಶಿಬಿರವನ್ನು ಉದ್ಘಾಟನೆ ಮಾಡಿ ಮಾತನಾಡಿ, ಇಂದು ಮಾನವ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಮಾನವ ಮತ್ತು ತಂತ್ರಜ್ಞಾನದಿಂದ ಸೃಷ್ಟಿಸಲಾಗದೇ ಇರುವುದು ರಕ್ತ ಮಾತ್ರ. ಕಾರಣ ಅದನ್ನು ದಾನದಿಂದಲೇ ಪಡೆಯಬೇಕಿದೆ. ಹೀಗಾಗಿ ಈ ಕುರಿತು ವ್ಯಾಪಕವಾದ ಪ್ರಚಾರ ಹಾಗೂ ಸಂಗ್ರಹ ಮಾಡಬೇಕಾದ ಅವಶ್ಯಕತೆ ಇದೆ. ದಾನಗಳಲ್ಲಿ ಅತೀ ಶ್ರೇಷ್ಠ ದಾನ ರಕ್ತದಾನವಾಗಿದೆ. ಒಬ್ಬ ರಕ್ತದಾನಿ ೩ ಜೀವಗಳನ್ನು ಉಳಿಸಬಹುದು. ಹಾಗೆಯೇ ರಕ್ತದಾನ ಮಾಡುವುದರಿಂದ ರಕ್ತದಾನಿಗೂ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಎಂ. ಬಿ. ನಾಗಲಾಪುರ ಮಾತನಾಡಿ, ರಕ್ತದಾನ ಮಾಡುವುದರಿಂದ ಮನುಷ್ಯನ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುವುದಲ್ಲದೆ ಇನ್ನೊಬ್ಬ ವ್ಯಕ್ತಿಯ ಪ್ರಾಣ ಉಳಿಸಿದ ಸಾರ್ಥಕತೆ ಹಾಗೂ ಧನ್ಯತಾ ಭಾವ ಮೂಡುತ್ತದೆ ಎಂದರು. ಪ್ರಾಂಶುಪಾಲರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ.ಡಿ.ಟಿ. ಪಾಟೀಲ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ರಕ್ತನಿಧಿ ಕೇಂದ್ರದ ಡಾ.ಬಸವರಾಜ ಕಮತದ, ಎಚ್‌ಡಿಎಫ್‌ಸಿ ಬ್ಯಾಂಕಿನ ವ್ಯವಸ್ಥಾಪಕ ಲಕಮಾಜಿ, ಉಪನ್ಯಾಸಕ ರಮೇಶ ನಾಯಕ ಸ್ವಾಗತಿಸಿದರು. ಸಂತೋಷ ನಿರೂಪಿಸಿದರು.