ಹಾನಗಲ್ಲ ತಾಲೂಕಿನ ದೇವರ ಹೊಸಪೇಟೆಯಲ್ಲಿ ಪಂಚಮಸಾಲಿ ಸಮುದಾಯದ ಸಮಾವೇಶವನ್ನು ರಾಜ್ಯ ಘಟಕದ ಉಪಾಧ್ಯಕ್ಷ ಶಂಕ್ರಣ್ಣ ಬಿಸನಳ್ಳಿ ಉದ್ಘಾಟಿಸಿದರು.
ಹಾನಗಲ್ಲ: ಅತ್ಯಂತ ದೊಡ್ಡ ಸಂಖ್ಯೆಯಲ್ಲಿರುವ ಪಂಚಮಸಾಲಿ ಸಮುದಾಯದ ಒಗ್ಗಟ್ಟು ಪ್ರದರ್ಶಿಸಲು ಇದು ಸಕಾಲವಾಗಿದ್ದು, ಮುಂಬರುವ ಚುನಾವಣೆಗಳಲ್ಲಿ ನಮ್ಮ ಶಕ್ತಿ ಪ್ರದರ್ಶನಕ್ಕೆ ಗಟ್ಟಿ ಹೆಜ್ಜೆ ಹಾಕಲು ಯುವಕರು, ಹಿರಿಯರ ಮಾರ್ಗದರ್ಶನದಲ್ಲಿ ಮುಂದಾಗಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ವೀರೇಶ ಮತ್ತಿಹಳ್ಳಿ ತಿಳಿಸಿದರು.
ಹಾನಗಲ್ಲ ತಾಲೂಕಿನ ದೇವರ ಹೊಸಪೇಟೆಯಲ್ಲಿ ಆಯೋಜಿಸಿದ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಹಾನಗಲ್ಲ ತಾಲೂಕು ಘಟಕದ ಸಮಾವೇಶ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಶಂಕ್ರಣ್ಣ ಬಿಸನಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಸಮುದಾಯದ ಪ್ರತಿಭಾವಂತ ಮಕ್ಕಳ ಹಿತಕ್ಕೆ ನಾವು ಬದ್ಧರಾಗಿದ್ದೇವೆ. ಅವರಿಗೆ ಒಳ್ಳೆಯ ಅವಕಾಶಕ್ಕಾಗಿ ನಾವು ಎಲ್ಲ ಸಹಾಯ ಸಹಕಾರ ನೀಡುತ್ತೇವೆ. ನಮ್ಮ ಸಮುದಾಯ ಇನ್ನಷ್ಟು ಮುಂದೆ ಬರಲು ನಮ್ಮ ಸಮುದಾಯದ ಮಕ್ಕಳು ಶಿಕ್ಷಣಕ್ಕೆ ಮೊದಲ ಆದ್ಯತೆಯಾಗಿ ನಿಲ್ಲೋಣ ಎಂದರು.
ಉದ್ಯಮಿ ಸಿದ್ದಲಿಂಗಣ್ಣ ಕಮಡೊಳ್ಳಿ ಮಾತನಾಡಿ, ಆರ್ಥಿಕ, ಸಾಮಾಜಿಕವಾಗಿ ನಾವು ನಮ್ಮ ಸಮುದಾಯವನ್ನು ಬೆಳೆಸಿಕೊಳ್ಳಬೇಕಾಗಿದೆ. ನಮ್ಮದು ದುಡಿಯುವ ಸಮುದಾಯ. ಆದರೆ ನಮ್ಮ ದುಡಿಮೆಯ ಬೆವರಿನ ಫಲ ಮಾತ್ರ ಯಾರು ಯಾರದೋ ಪಾಲಾಗುತ್ತಿದೆ. ಈಗಲಾದರೂ ನಾವು ಎಚ್ಚೆತ್ತುಕೊಳ್ಳೋಣ. ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಪ್ರೋತ್ಸಾಹದ ಕೊರತೆ ಇದೆ. ಅದನ್ನು ನೀಡಲು ನಾವು ಬದ್ಧ ಎಂದರು.ತಾಲೂಕು ಅಧ್ಯಕ್ಷ ಕರಬಸಪ್ಪ ಶಿವೂರ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಾರ್ಯದರ್ಶಿ ಸೋಮಶೇಖರ ಕೋತಂಬರಿ ಆಶಯ ನುಡಿ ನುಡಿದರು. ವಿಜಯಕುಮಾರ ದೊಡ್ಡಮನಿ, ಕೆ.ಬಿ. ಪಾಟೀಲ, ಎನ್.ಎಸ್. ಪಡೆಪ್ಪನವರ, ಎನ್.ಬಿ. ಬಣಕಾರ, ಸಿ.ಮಂಜುನಾಥ, ಗೀತಾ ಪೂಜಾರ, ಮಧು ಪಾಣಿಗಟ್ಟಿ, ಶಿವಾನಂದ ಕ್ಯಾಲಕೊಂಡ, ಭುವನೇಶ್ವರ ಶಿಡ್ಲಾಪೂರ, ಪರಮೇಶ್ವರಪ್ಪ ಹಲಗೇರಿ, ಪ್ರಕಾಶ ಗುರುಬಸಪ್ಪನವರ, ಕಲವೀರಪ್ಪ ಸಾತಣ್ಣನವರ, ಯಲ್ಲಪ್ಪ ನಾಗಪ್ಪನವರ, ನಾಗಪ್ಪ ಶಿವಣ್ಣನವರ, ಶಂಕ್ರಪ್ಪ ಉಪ್ಫಣಸಿ, ಈಶ್ವರ ಚೌಟಿ, ಸೋಮಶೇಖರ ದೊಡ್ಡಮನಿ, ಸಿದ್ದು ಓಣಿಕೇರಿ, ಶಾಂತವೀರಪ್ಪ ನೆಲೋಗಲ್ಲ, ನಾಗರಾಜ ಕ್ಯಾಬಳ್ಳಿ ವೇದಿಕೆಯಲ್ಲಿದ್ದರು.
ಹಾನಗಲ್ಲ ತಾಲೂಕಿನ ಪಂಚಮಸಾಲಿ ಸಮುದಾಯದ ಎಸ್‌ಎಸ್‌ಎಲ್‌ಸಿ, ಪಿಯುಸಿಯ ೭೦ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.