ಉಡುಪಿ: ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆ ಮತ್ತು ಪದಗಳಲ್ಲಿ ತ್ರಿಪದಿಗಳ ಮೂಲಕ ಸಮಾಜವನ್ನು ತಿದ್ದಿದ ಸರ್ವಜ್ಞರು, ಇಂದಿನ ಪೀಳಿಗೆಗೆ ಸನ್ಮಾರ್ಗವನ್ನು ತೋರಿದ್ದಾರೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು. ಶುಕ್ರವಾರ ಹಿರಿಯಡ್ಕದ ಡಾ. ಚಂದಯ್ಯ ಹೆಗ್ಡೆ ಸಭಾಭವನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕುಲಾಲ ಸಂಘಗಳ ಒಕ್ಕೂಟಗಳ ಸಹಯೋಗದಲ್ಲಿ ನಡೆದ ಕಾರ್‍ಯಕ್ರಮ ಉದ್ಘಾಟಿಸಿ, ಕವಿ ಸರ್ವಜ್ಞ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿ ಮಾತನಾಡಿದರು.

16ನೇ ಶತಮಾನದಲ್ಲೇ ಸರ್ವಜ್ಞನು ಸಾಮಾಜಿಕ ಸಮಾನತೆ, ನೈತಿಕತೆ ಮತ್ತು ಜ್ಞಾನವನ್ನು ಸರಳ ತ್ರಿಪದಿಗಳ ಮೂಲಕ ಬೋಧಿಸಿದ್ದಾರೆ. ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಜನ ಸಾಮಾನ್ಯರಲ್ಲಿ ನೀತಿ ಪಾಠಗಳನ್ನು ಬಿತ್ತಲು ಇಂದಿಗೂ ಪ್ರಸ್ತುತವಾಗಿದೆ ಎಂದರು.

ಸರ್ವಜ್ಞರ ಬಗಗೆ ವಿಶೇಷ ಉಪನ್ಯಾಸ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶೇಖರ ಕುಲಾಲ್, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸರ್ವಜ್ಞರು ವಚನಗಳನ್ನು ಬರೆಯದ ಕ್ಷೇತ್ರಗಳಿಲ್ಲ. ಸರ್ವಜ್ಞರ ತ್ರಿಪದಿಗಳಲ್ಲಿನ ಸಾರಗಳಿಂದ ಪರಿಣಾಮಕಾರಿ ವ್ಯಕ್ತಿತ್ವ ಹೊಂದಲು ಸಾಧ್ಯವಿದ್ದು, ವಿದ್ಯಾರ್ಥಿಗಳು ಕವಿ ಸರ್ವಜ್ಞರ ಆದರ್ಶ, ತತ್ವ, ವಿಚಾರಧಾರೆಗಳನ್ನು ಆಳವಡಿಸಿಕೊಂಡು ಸತ್ಪ್ರಜೆಗಳಾಗಿ ಜೀವನ ರೂಪಿಸಿಕೊಳ್ಳಬೇಕು ಎಂದರು.

ಈ ಸಂದರ್ಭ ವಿದ್ಯಾರ್ಥಿಗಳಿಗೆ ಕವಿ ಸರ್ವಜ್ಞರ ಕುರಿತು ರಸ ಪ್ರಶ್ನೆಯನ್ನು ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್‍ಯಕ್ರಮದಲ್ಲಿ ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸಂತೋಷ್ ಕುಲಾಲ್, ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷ ಕಾಳು ಕುಲಾಲ, ಹಿರಿಯಡ್ಕ ಸರಕಾರಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ವೀಣಾ, ಉಪಪ್ರಾಂಶುಪಾಲ ಪ್ರಕಾಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

ಕಾರ್‍ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಾಂಜಿ ನಿರೂಪಿಸಿ, ಶಾಲೆಯ ಹಿಂದಿ ಶಿಕ್ಷಕ ರವೀಂದ್ರ ಪ್ರಭು ವಂದಿಸಿದರು.