ಕೆ.ಆರ್.ನಗರ ಪಟ್ಟಣದ ಖಾಸಗಿ ಕ್ಲಿನಿಕ್ ಗೆ ಚಿಕಿತ್ಸೆ ಪಡೆಯಲು ಬಂದ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಇದಕ್ಕೆ ವೈದ್ಯರು ನೀಡಿದ ಚುಚ್ಚುಮದ್ದೇ ಕಾರಣ ಎಂದು ಆರೋಪಿಸಿ, ಮೃತರ ಸಂಬಂಧಿಕರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ಪಟ್ಟಣದ ಖಾಸಗಿ ಕ್ಲಿನಿಕ್ ಗೆ ಚಿಕಿತ್ಸೆ ಪಡೆಯಲು ಬಂದ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಇದಕ್ಕೆ ವೈದ್ಯರು ನೀಡಿದ ಚುಚ್ಚುಮದ್ದೇ ಕಾರಣ ಎಂದು ಆರೋಪಿಸಿ, ಮೃತರ ಸಂಬಂಧಿಕರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು.ಪಟ್ಟಣದ ಸಿ.ಎಂ. ರಸ್ತೆಯಲ್ಲಿರುವ ರಾಘವೇಂದ್ರ ಕ್ಲಿನಿಕ್ ನಲ್ಲಿ ರಾಮಯ್ಯ ಎಂಬವರು ಮೃತಪಟ್ಟಿದ್ದು, ಇಲ್ಲಿನ ವೈದ್ಯ ಡಾ.ಎಚ್.ಜಿ. ಶಂಕರ್ ಅವರು ನೀಡಿದ ಚುಚ್ಚುಮದ್ದು ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಮೃತರು ಪಟ್ಟಣದ ಸಮೀಪವಿರುವ ಕಾಳೇನಹಳ್ಳಿ ಗ್ರಾಮದ ಪೌರಕಾರ್ಮಿಕರ ಕಾಲೋನಿಯ ನಿವಾಸಿಯಾಗಿದ್ದು, ರಾಮಯ್ಯನ ಪತ್ನಿ ಪಾಪಮ್ಮ ಬೆಳಗ್ಗೆ 10 ರಲ್ಲಿ ಕ್ಲಿನಿಕ್ ಗೆ ಬಂದು ನನ್ನ ಪತಿಗೆ ತುಂಬಾ ಹೊಟ್ಟೆನೋವು ಇರುವುದರಿಂದ ಚಿಕಿತ್ಸೆ ನೀಡುವಂತೆ ಕೋರಿದ್ದಾರೆ.ರಾಮಯ್ಯನಿಗೆ ಮೊದಲೇ ಪಾರ್ಶ್ವವಾಯು ಹೊಡೆದಿದೆ ಎಂದು ಹೇಳಿ ಈ ಹಿಂದೆ ಪಡೆದಿದ್ದ ಚಿಕಿತ್ಸೆಯ ಔಷಧಿ ಚೀಟಿ ಮತ್ತು ಮಾತ್ರೆಗಳನ್ನು ಪರಿಶೀಲಿಸಿ ಚಿಕಿತ್ಸೆ ನೀಡುವಂತೆ ಮನವಿ ಮಾಡಿರುವುದಾಗಿ ಹೇಳಿದರೂ ವೈದ್ಯರು ಯಾವುದನ್ನು ಪರಿಶೀಲಿಸದೆ ಏಕಾಏಕಿ ಚುಚ್ಚು ಮದ್ದು ನೀಡಿದ್ದರಿಂದ ಮೃತಪಟ್ಟಿದ್ದಾರೆಂದು ರಾಮಯ್ಯನ ಸಂಬಂಧಿಕರು ಮತ್ತು ಅವರ ಪುತ್ರ, ಪುತ್ರಿ ಸೇರಿದಂತೆ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವೈದ್ಯರ ವಿರುದ್ದ ದೂರು ದಾಖಲಿಸಿಕೊಂಡು ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿದರು.
ಆದಿಜಾಂಬವ ಸಂಘದ ಅಧ್ಯಕ್ಷ ಎಂ.ಲೋಕೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್. ಮಹದೇವ್, ಪುರಸಭೆ ಮಾಜಿ ಅಧ್ಯಕ್ಷ ಡಿ. ಕಾಂತರಾಜು, ದಲಿತ ಮುಖಂಡರಾದ ಸಿ. ಶಂಕರ್, ಸುರೇಶ್, ರಮೇಶ್, ಮುರುಗೇಶ್, ಕುಮಾರ್, ಮಂಜುನಾಥ್, ಸಿದ್ದಯ್ಯ, ವಜ್ರೇಶ್, ನಂಜಯ್ಯ, ನೂರಾರು ಮಂದಿ ಸಂಘಟನೆಯವರು ಕ್ಲಿನಿಕ್ ಮುಂದೆ ಡಾ.ಬಿ.ಆರ್. ಅಂಬೆಡ್ಕರ್ ಅವರ ಭಾವಚಿತ್ರ ಇಟ್ಟು ಪ್ರತಿಭಟಿಸಿದರು.ಮೃತ ರಾಮಯ್ಯ ಸಫಾಯಿ ಕರ್ಮಚಾರಿಯಾಗಿದ್ದು ತುಂಬಾ ಕಡು ಬಡವರಾಗಿರುವುದರಿಂದ ಈತನ ಅಂತ್ಯಕ್ರಿಯೆ ನಡೆಸಲು ಇತರರ ಸಹಾಯ ಪಡೆಯಬೇಕಾಗಿದೆ, ಆದ್ದರಿಂದ ಇವರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಬೇಕು ಜತೆಗೆ ಚಿಕಿತ್ಸೆ ವೇಳೆ ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.