ಸಾರಾಂಶ
-ಸಂಧ್ಯಾ ಸುರಕ್ಷಾ ಯೋಜನೆಯಿಂದ ಫಲಾನುಭವಿಗಳಿಗೆ ಸಿಗಬೇಕಾದ ಹಣ ಅನರ್ಹರಿಗೆ । ಕ್ರಮಕ್ಕೆ ಭ್ರಷ್ಟಾಚಾರ ವಿರೋಧಿ ದಳ ಒತ್ತಾಯ
----ಬಸವರಾಜ ಎಂ. ಕಟ್ಟಿಮನಿ
ಕನ್ನಡಪ್ರಭ ವಾರ್ತೆ ಹುಣಸಗಿಸಂಧ್ಯಾ ಸುರಕ್ಷಾ ಯೋಜನೆಯಿಂದ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಹಣ ಅನರ್ಹರಿಗೆ ನೀಡಿ ಅಕ್ರಮವೆಸಗಿರುವ ಘಟನೆ ಸಮೀಪದ ಕಕ್ಕೇರಾ ಹೋಬಳಿಯ ಉಪ ತಹಸೀಲ್ದಾರ ಕಚೇರಿಯಲ್ಲಿ ಬೆಳಕಿಗೆ ಬಂದಿದೆ.
ವಯೋವೃದ್ಧರು ಮುಪ್ಪಿನ ಕಾಲದಲ್ಲಿ ಜೀವನ ನಡೆಸಲು ಅನುಕೂಲವಾಗುವ ದೃಷ್ಟಿಯಿಂದ ಸರ್ಕಾರ 65 ವರ್ಷ ಮೇಲ್ಪಟವರಿಗೆ ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೊಳಿಸಿದೆ. ಸಂಧ್ಯಾ ಸುರಕ್ಷಾ ಹಾಗೂ ವೃದ್ಧಾಪ್ಯ ವೇತನ ಹಾಗೂ ವಿಧವಾ ವೇತನ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅದರದ್ದೇಯಾದ ಮಾನದಂಡ ಇದೆ.ಆದರೆ, ಕಕ್ಕೇರಾ ಗ್ರೇಡ್-2 ತಹಸೀಲ್ದಾರ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿರುವ ಆರೋಪ ಕೇಳಿ ಬಂದಿದೆ. ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ಅನರ್ಹ ಫಲಾನುಭವಿಗಳನ್ನು ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನೀರಿಕ್ಷಕರು ಅರ್ಜಿಗಳನ್ನು ತಿರಸ್ಕಾರ ಮಾಡಿದ್ದರೂ, ಕಕ್ಕೇರಾ ನಾಡಕಚೇರಿ ವಿಷಯ ನಿರ್ವಾಹಕ ಮತ್ತು ಗ್ರೇಡ್-2 ತಹಸೀಲ್ದಾರ ಅವರು ತಿರಸ್ಕಾರಗೊಂಡ ಅರ್ಜಿಗಳನ್ನು ಅನುಮೋದನೆ ಮಾಡಿ ಸರಕಾರದ ಬೊಕ್ಕಸಕ್ಕೆ ಹಾನಿಯುಂಟು ಮಾಡಲಾಗಿದೆ ಎಂದು ಆರೋಪಗಳು ಮೇಲ್ನೋಟಕ್ಕೆ ಕಂಡು ಬಂದಿರುತ್ತವೆ ಎನ್ನಲಾಗಿದೆ.
ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಹರಾಗಬೇಕಾದರೆ 65 ವರ್ಷ ಮೇಲ್ಪಟ್ಟವರಾಗಿರಬೇಕು ಎಂಬ ನಿಯಮವಿದೆ ಎಂದು ಆದರೆ, ಕಂದಾಯ ಅಧಿಕಾರಿಗಳು 40 ರಿಂದ 45 ವರ್ಷ ಒಳಗಿನವರು ಅರ್ಜಿ ಸಲ್ಲಿಸಿದ್ದರೂ ತಿರಸ್ಕರಿಸದೆ ಅನುಮೋದನೆ ಮಾಡಿ ಸುಮಾರು ನೂರಾರು ಜನರಿಗೆ ಪ್ರತಿ ತಿಂಗಳು ಸಂಧ್ಯಾ ಸುರಕ್ಷೆಯ ಹಣವನ್ನು ಮಂಜೂರು ಮಾಡಲಾಗಿದೆ. ಇದರಿಂದ ಸರ್ಕಾರ ಬೊಕ್ಕಸಕ್ಕೆ ಕೊಟ್ಯಾಂತರ ರು.ಗಳ ಅಕ್ರಮ ನಡೆದಿದೆ ಎಂದು ರಾಷ್ಟ್ರೀಯ ಭ್ರಷ್ಟಚಾರ ವಿರೋಧಿ ದಳದ ಜಿಲ್ಲಾಧ್ಯಕ್ಷ ಕಾಶೀನಾಥ ಹಾದಿಮನಿ ಅವರು ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಿದ್ದಾರೆ.ಕ್ರಮ ಕೈಗೊಳ್ಳಲು ಕಂದಾಯ ಇಲಾಖೆ ಹಿಂದೇಟು?
ಕಕ್ಕೇರಾ ಹೋಬಳಿ ಹಾಗೂ ಹುಣಸಗಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹಲವು ಗ್ರಾಮದಲ್ಲಿ ವಯೋವೃದ್ಧರಲ್ಲದ ಫಲಾನುಭವಿಗಳಿಗೆ ಪಿಂಚಣಿ ಹಣ ಜಮಾ ಆಗಿರುವ ಆರೋಪದ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿಗಳ ತಂಡವನ್ನು ರಚಿಸಿ ಸ್ಥಳಕ್ಕೆ ಭೇಟಿ ನೀಡಿ ವರದಿಯನ್ನು ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಅಕ್ರಮ ಮೇಲ್ನೋಟಕ್ಕೆ ಕಂಡು ಬಂದರೂ, ಕಂದಾಯ ಇಲಾಖೆ ಅಧಿಕಾರಿಗಳು ಗ್ರೇಡ್ 2 ತಹಸೀಲ್ದಾರ ಅವರ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕಲಾಗುತ್ತಿದೆ ಎಂದು ರಾಷ್ಟ್ರೀಯ ನಿಂಗರಾಜ ದ್ಯಾಮನಾಳ, ಗೈಯಪ್ಪ ಸೊನ್ನಾಪೂರ, ಚನ್ನು ಕಟ್ಟಿಮನಿ ಆರೋಪಿಸಿದ್ದಾರೆ.ಕ್ರಮಕ್ಕೆ ಒತ್ತಾಯ: ಈ ಅಕ್ರಮದ ಕುರಿತು ಡಿ.18 2024 ರಂದು ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳ ಜಿಲ್ಲಾ ಸಮಿತಿ ಯಾದಗಿರಿ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದರು. ಸಹಾಯಕ ಆಯುಕ್ತರ ನೇತೃತ್ವದಲ್ಲಿ ತನಿಖೆ ಮಾಡಲು ಆದೇಶ ಜಾರಿಗೊಳಿಸಿ ಕಂದಾಯ ಇಲಾಖೆ ಕೈ ತೊಳೆದುಕೊಂಡಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧ್ಯಕ್ಷ ಕಾಶಿನಾಥ ಹಾದಿಮನಿ ಒತ್ತಾಯಿಸಿದ್ದಾರೆ.
----20ವೈಡಿಆರ್7 : ಹುಣಸಗಿ ಸಮೀಪದ ಕಕ್ಕೇರಾ ತಹಸೀಲ್ದಾರ ಕಾರ್ಯಾಲಯದಲ್ಲಿ ವಯೋವೃದ್ಧರಿಗೆ ಸಿಗಬೇಕಾದ ಪಿಂಚಣಿ ವಯಸ್ಕರಿಗೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳ ತಂಡ ವಿವಿಧ ಪಲಾನುಭವಿಗಳ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.