ಸಾರಾಂಶ
ಎಸ್.ಎಂ.ಕೃಷ್ಣ ಪಾರ್ಥಿವ ಶರೀರ ರಾಮನಗರದಿಂದ ಚನ್ನಪಟ್ಟಣಕ್ಕೆ ಆಗಮಿಸುವ ಸುದ್ದಿ ತಿಳಿದ ಗ್ರಾಮೀಣ ಜನರು ಕೆಂಗಲ್ ಬಳಿಯಿಂದಲೇ ಅಲ್ಲಲ್ಲಿ ರಸ್ತೆಯಲ್ಲಿ ಜಮಾಯಿಸಿದ್ದರು.
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ತಾಲೂಕಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ನೂರಾರು ಮಂದಿ ಪಡೆದು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು. ನಗರದ ಗಾಂಧೀ ಭವನ ವೃತ್ತದ ಬಳಿ ಇರುವ ಅಂಬೇಡ್ಕರ್ ಪುತ್ಥಳಿಯ ಎದುರು ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಲಿಸಿತ್ತು. ಸಾವಿರಾರು ಮಂದಿ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು.ಪಾರ್ಥಿವ ಶರೀರ ರಾಮನಗರದಿಂದ ಚನ್ನಪಟ್ಟಣಕ್ಕೆ ಆಗಮಿಸುವ ಸುದ್ದಿ ತಿಳಿದ ಗ್ರಾಮೀಣ ಜನರು ಕೆಂಗಲ್ ಬಳಿಯಿಂದಲೇ ಅಲ್ಲಲ್ಲಿ ರಸ್ತೆಯಲ್ಲಿ ಜಮಾಯಿಸಿದ್ದರು. ಬೆಂಗಳೂರು ಮೈಸೂರು ಹೆದ್ದಾರಿಯ ಎರಡು ಬದಿಗಳಲ್ಲಿ ನಿಂತು ಪುಷ್ಪಾರ್ಚನೆ ಮಾಡುವ ಮೂಲಕ ಆಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಮರ್ಪಿಸಿದರು.ಇನ್ನು ಎಸ್.ಎಂ. ಕೃಷ್ಣ ಅವರ ಪಾರ್ಥಿವ ಶರೀರ ನಗರದ ಅಂಬೇಡ್ಕರ್ ಪುತ್ಥಳಿಯ ಬಳಿ ಬುಧುವಾರ 12.30ಕ್ಕೆ ಆಗಮಿಸಿತು. ಬೆಳಗ್ಗಿನಿಂದಲೇ ನೂರಾರು ಜನ ಅಂಬೇಡ್ಕರ್ ಭವನದ ಬಳಿ ಅಂತಿಮ ದರ್ಶನ ಪಡೆಯಲು ಕಾದು ಕುಳಿತಿದ್ದರು. ಶಾಸಕ ಸಿ.ಪಿ.ಯೋಗೇಶ್ವರ್, ಮಾಜಿ ಶಾಸಕರಾದ ಸಾ.ರಾ.ಮಹೇಶ್, ನಾಗೇಂದ್ರ, ಎಂಎಲ್‌ಸಿ ಪುಟ್ಟಣ್ಣ, ಬಿಎಂಐಸಿಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಮಾಜಿ ಶಾಸಕ ಅಶ್ವಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ಅಜಯ್, ರಮೇಶ್‌ಗೌಡ, ಮುದ್ದುಕೃಷ್ಣ, ಮಲವೇಗೌಡ ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು.ಕಳ್ಳರ ಕೈಚಳಕ: ಎಸ್.ಎಂ.ಕೃಷ್ಣ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ಕಳ್ಳರು ಕೈಚಳಕ ತೋರಿದರು. ತಾಲೂಕಿನ ಬ್ಯಾಡರಹಳ್ಳಿ ಕೃಷ್ಣಪ್ಪ, ಕೃಷ್ಣ, ಸೇರಿದಂತೆ ಒಂದಿಬ್ಬರು ಜೇಬುಗಳಿಗೆ ಕತ್ತರಿ ಹಾಕಿದ ಕಳ್ಳರು ಲಕ್ಷಾಂತರ ಹಣ ಹಾಗೂ ಬೆಲೆ ಬಾಳುವ ಮೊಬೈಲ್‌ಗಳನ್ನು ಕಳವು ಮಾಡಿದ್ದಾರೆ. ಇದೇ ವೇಳೆ ತಗಚಗರೆ ರಾಮು ಎಂಬುವವರ ಜೇಬಿಗೆ ಕೈ ಹಾಕಿದೆನೆಂದು ಓರ್ವನನ್ನು ಹಿಡಿದು ಪೋಲಿಸರಿಗೆ ಒಪ್ಪಿಸಲಾಯಿತು. ಪೋಟೊ೧೦ಸಿಪಿಟಿ೧: ನಗರದಲ್ಲಿ ಎಸ್.ಎಂ.ಕೃಷ್ಣ ರವರ ಅಂತಿಯ ಯಾತ್ರೆಯಲ್ಲಿ ಸೇರಿದ್ದ ಅಪಾರ ಜನಸ್ತೋಮ.