ಕನ್ನಡಪ್ರಭ ವಾರ್ತೆ ದಾವಣಗೆರೆ
ವರ್ಷಕ್ಕೊಮ್ಮೆ ಬರುವ ಹೋಳಿ ಹಬ್ಬದ ಬಣ್ಣಗಳಲ್ಲಿ ಮಕ್ಕಳಿಂದ ವಯೋವೃದ್ಧರಾಗಿ ಮಿಂದೇಳುವ ಮೂಲಕ ನಗರ, ಜಿಲ್ಲಾದ್ಯಂತ ಸಡಗರ, ಸಂಭ್ರಮದ ಹೋಳಿ ಆಚರಿಸಿದರೆ, ಕಳೆದ ಕೆಲವು ವರ್ಷಗಳಿಂದ ತಾವು ಧರಿಸಿದ್ದ ಅಂಗಿ, ಟಿ ಶರ್ಟನ್ನೇ ಹರಿದುಕೊಳ್ಳುವ ಮೂಲಕ ಸಂಸ್ಕೃತಿ, ಸಂಸ್ಕಾರದ ಆಚರಣೆಯಾಗಬೇಕಿದ್ದ ಹೋಳಿ ಹಬ್ಬಕ್ಕೆ ಮಸಿ ಬಳಿಯುವ ಕೆಲಸ ಈ ಸಲವೂ ಮತ್ತೆ ಮುಂದುವರಿಯಿತು.ನಗರ, ಜಿಲ್ಲಾದ್ಯಂತ ಮಕ್ಕಳು ಬುಧವಾರ ಮಧ್ಯಾಹ್ನದವರೆಗೆ ನೀಲಿ, ಹಳದಿ, ನೇರಳೆ, ಕೆಂಪು, ಗುಲಾಬಿ, ಕೇಸರಿ ಹೀಗೆ ನಾನಾ ಬಣ್ಣಗಳನ್ನು ಪರಸ್ಪರರಿಗೆ ಹಚ್ಚುವ ಮೂಲಕ ಹೋಳಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು, ಮಂಗಳವಾರ ರಾತ್ರಿಯಷ್ಟೇ ಕಾಮದಹನ ಮಾಡಿ, ತಮ್ಮ ಮನೆಯ ಪ್ರದೇಶದ ಎಲ್ಲರಿಗೂ ಕಾರಾ-ಮಂಡಕ್ಕಿ, ತೆಂಗಿನ ಕಾಯಿ, ಬಾಳೆಹಣ್ಣಿನ ಪ್ರಸಾದ ನೀಡದ್ದ ಮಕ್ಕಳು ರಾತ್ರಿಯೆಲ್ಲಾ ಕಾಮದಹನ ಸ್ಥಳದಲ್ಲಿದ್ದು, ಬೆಳಿಗ್ಗೆ ಬಣ್ಣದ ಆಟವಾಡುವ ಕನಸಿನೊಂದಿಗೆ ಮನೆ ಸೇರಿದ್ದರು.
ಪ್ರತಿ ಮನೆಗಳಲ್ಲೂ ಹೆತ್ತವರು, ಅಜ್ಜ-ಅಜ್ಜಿಗೆ ಕಾಡಿ ಬೇಡಿ, ಹೆಚ್ಚಿನ ಬಣ್ಣ ತರಿಸಿಕೊಂಡಿದ್ದ, ತಾವೇ ಹಣ ಪಡೆದುಕೊಂಡು ಹೋಗಿ ಬಣ್ಣಗಳನ್ನು ತಂದುಕೊಟ್ಟ ಪುಟ್ಟ ಮಕ್ಕಳು ಪಿಚಕಾರಿ, ವಾಟರ್ ಗನ್ ಮೂಲಕ ಮನೆ ಅಂಗಳಕ್ಕಿಳಿದರು. ಮಕ್ಕಳ ಕಿವಿ ಹಿಂಡಿ, ಕೋಲು ಹಿಡಿದುಕೊಂಡು ಮಕ್ಕಳನ್ನು ಪಾಲಕರು ಮನೆಗೆ ಕರೆದೊಯ್ಯುವಂತಹ ಸ್ಥಿತಿ ಇತ್ತು.ಮಕ್ಕಳು, ವಿದ್ಯಾರ್ಥಿ, ಯುವ ಜನರು, ಯುವತಿಯರು, ಗೃಹಿಣಿಯರು, ದಂಪತಿ, ಹಿರಿಯ ನಾಗರಿಕರು ತಮ್ಮ ಸ್ನೇಹಿತರು, ಬೇರೆ ಊರಿನಿಂದ ಇಲ್ಲಿಗೆ ಓದಲು ಬಂದ ವಿದ್ಯಾರ್ಥಿಗಳು, ಹಾಸ್ಟೆಲ್ ವಿದ್ಯಾರ್ಥಿಗಳು ಬಂಧು-ಬಳಗ, ಸ್ನೇಹಿತರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು.
ಬಣ್ಣ ಹಚ್ಚಿಸಿಕೊಂಡವರ ತಲೆಗೆ ಮೊಟ್ಟೆ ಒಡೆಯುವುದು, ಟೊಮಾಟೋ ಹಣ್ಣನ್ನು ಒಡೆದು, ಅದರ ರಸ ಹಿಂಡುವುದು ಹೀಗೆ ಯುವಕರು ಮಾಡುವುದು ಕಂಡು ಬಂದಿತು. ವಾಹನಗಳ ಸೈಲೆನ್ಸರ್ ತೆಗೆದು ಅಬ್ಬರದ ಸದ್ದು ಮಾಡುವುದು ಅಲ್ಲಲ್ಲಿ ಕಂಡು ಬಂದಿತು. ಇಲ್ಲಿನ ಪಿಜೆ ಬಡಾವಣೆ ರಾಂ ಅಂಡ್ ಕೋ ವೃತ್ತದಲ್ಲಿ ಹೋಳಿ ಆಚರಣೆಗೆ ಕಾಂಗ್ರೆಸ್ಸಿನ ಯುವ ಮುಖಂಡ ಸಮರ್ಥ ಎಂ.ಶಾಮನೂರು ಸಹ ಪಂಚೆದಾರಿಯಾಗಿ ಪಾಲ್ಗೊಂಡು, ಹೋಳಿ ಆಚರಿಸುವ ಮೂಲಕ ಎಲ್ಲರಿಗೂ ಹೋಳಿ ಹಬ್ಬದ ಶುಭಾರೈಸಿದ್ದು ಗಮನ ಸೆಳೆಯಿತು. ಹರ ಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಪ್ರತಿ ವರ್ಷದಲ್ಲಿ ಪುರುಷ-ಮಹಿಳೆಯರಿಗೆ ಪ್ರತ್ಯೇಕವಾಗಿ ಹೋಳಿ ಆಚರಿಸಲು ಅವಕಾಶ ಮಾಡಿಕೊಡಲಾಗಿತ್ತು. ಎಲ್ಲಾ ಕಡೆ ಪೊಲೀಸ್ ಬಿಗಿ ಬಂದೋಬಸ್ತ್ ಸಹ ಕಲ್ಪಿಸಲಾಗಿತ್ತು.
ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಯುವಕರು, ವಿದ್ಯಾರ್ಥಿಗಳು ಒಬ್ಬರು ಮತ್ತೊಬ್ಬರ ಅಂಗಿ, ಟೀಶರ್ಟ್ ಹರಿದು ಹಾಕುವ ಮೂಲಕ ವಿಕೃತ ಖುಷಿ ಅನುಭವಿಸುತ್ತಿದ್ದುದು ಮಾತ್ರ ಹಿರಿಯ ನಾಗರಿಕರ ಬೇಸರಕ್ಕೂ ಕಾರಣವಾಯಿತು.
ಪೊಲೀಸ ಅಧಿಕಾರಿ, ಸಿಬ್ಬಂದಿ ಬಣ್ಣದಾಟದಲ್ಲಿ ತೊಡಗಿದ್ದ ಯುವಕರಿಗೆ ಬುದ್ಧಿ ಹೇಳುತ್ತಿದ್ದ ದೃಶ್ಯ, ವಾಗ್ವಾದಗಳು ನಡೆದಿದ್ದು ಕಂಡು ಬಂದಿತು. ದ್ವಿಚಕ್ರ ವಾಹನಗಳಲ್ಲಿ 3-4 ಜನ ಕುಳಿತು ಸಾಗುವ ಯುವಕರಿಗಿಂತ ತಾವೇನು ಕಡಿಮೆ ಎಂಬಂತೆ ಯುವತಿಯರೂ 3-4 ಜನ ದ್ವಿಚಕ್ರ ವಾಹನದಲ್ಲಿ ಸಾಗುತಿದ್ದ ದೃಶ್ಯವೂ ಸಾಮಾನ್ಯವಾಗಿತ್ತು. ಅಲ್ಲಲ್ಲಿ ಮಡಿಕೆ ಒಡೆಯುವ ಸ್ಪರ್ಧೆ ನಡೆದವು. ಯುವಕರು, ಬಾಲಕರು ಮಡಿಕೆ ಒಡೆದಂತೆ ಹೆಣ್ಣು ಮಕ್ಕಳು, ಯುವತಿಯರೂ ಸಹ ಮಡಿಕೆ ಒಡೆದು ಸಂಭ್ರಮಿಸಿದರು. ಇದರೊಂದಿಗೆ ಯಾವುದೇ ಅಹಿತಕರ ಘಟನೆ ಆಗದಂತೆ ಸಡಗರದಿಂದ ಹೋಳಿ ಆಚರಿಸಲ್ಪಟ್ಟಿತು.