ಗಣೇಶನಗರದ ಜನತೆಗೆ ಇನ್ನೂ ತಪ್ಪದ ಸಮಸ್ಯೆ

| Published : Jan 07 2024, 01:30 AM IST / Updated: Jan 07 2024, 05:08 PM IST

ಗಣೇಶನಗರದ ಜನತೆಗೆ ಇನ್ನೂ ತಪ್ಪದ ಸಮಸ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಬಡವರು, ಶ್ರಮ ಜೀವಿಗಳೇ ತುಂಬಿರುವ ಗಣೇಶ ನಗರದಲ್ಲಿ ಸತತ ೨೫ ವರ್ಷಗಳಿಂದ ಇಲ್ಲಿನ ಜನರು ಅನುಭವಿಸಿಕೊಂಡು ಬರುತ್ತಿರುವ ರಣಭೀಕರವಾದ ಪರಿಸ್ಥಿತಿ. ಈ ಭಾಗದದಲ್ಲಿ ೨೫ಕ್ಕೂ ಹೆಚ್ಚಿನ ಮನೆಗಳಿದ್ದು ೬೦ಕ್ಕೂ ಹೆಚ್ಚಿನ ಮತದಾರರಿದ್ದಾರೆ.

ಶಿರಸಿ: ಇಕ್ಕಟ್ಟಾದ ಕಲ್ಲು ಗುಂಡಿಗಳಿಂದ ತುಂಬಿರುವ ರಸ್ತೆ, ರಸ್ತೆ ಅಂಚಿನಲ್ಲಿ ಪ್ರಪಾತದಲ್ಲಿರುವ ಮನೆಗಳು...ವಾಹನಗಳು ಸ್ವಲ್ಪ ಆಯ ತಪ್ಪಿದರೂ ನೇರವಾಗಿ ಮನೆಯ ಹೆಂಚಿನ ಮೇಲೆ ಹೋಗಿ ಕೂಡುತ್ತವೆ. ಇದು ಯಾವುದೋ ಹಳ್ಳಿಯ ಕಥೆಯಲ್ಲ. ನಗರದ ಗಣೇಶನಗದ ಎರಡನೇ ವಾರ್ಡ್ ಸ್ಥಿತಿ!.

ಹೌದು, ನಗರದಲ್ಲಿಯೇ ಬದುಕಿದ್ದರೂ ಕುಗ್ರಾಮದ ಜೀವನಕ್ಕಿಂತ ಕಠಿಣ ಇಲ್ಲಿಯ ಬದುಕು. ಅನಾರೋಗ್ಯಕ್ಕೆ ಒಳಗಾದರೆ

ಆ್ಯಂಬುಲೆನ್ಸ್‌, ಬೆಂಕಿ ಬಿದ್ದರೆ ಆರಿಸಲು ಅಗ್ನಿಶಾಮಕ ವಾಹನ ಬಾರದ ರಸ್ತೆ, ಸತ್ತರೆ ಕಂಬಳಿಯಲ್ಲಿ ಕಟ್ಟಿ ಹೆಗಲ ಮೇಲೆ ಹೊತ್ತೊಯ್ಯುವ ಕೆಟ್ಟ ದಯನೀಯ ಸ್ಥಿತಿ, ಮಳೆ ಬಂದರೆ ಧರೆ ಕುಸಿದು ಮನೆ ಮೇಲೆ ಬೀಳುವ ಭಯಾನಕ ಪರಿಸ್ಥಿತಿ ಇಲ್ಲಿಯದು.ಬಡವರು, ಶ್ರಮ ಜೀವಿಗಳೇ ತುಂಬಿರುವ ಗಣೇಶ ನಗರದಲ್ಲಿ ಸತತ ೨೫ ವರ್ಷಗಳಿಂದ ಇಲ್ಲಿನ ಜನರು ಅನುಭವಿಸಿಕೊಂಡು ಬರುತ್ತಿರುವ ರಣಭೀಕರವಾದ ಪರಿಸ್ಥಿತಿ. 

ಈ ಭಾಗದದಲ್ಲಿ ೨೫ಕ್ಕೂ ಹೆಚ್ಚಿನ ಮನೆಗಳಿದ್ದು ೬೦ಕ್ಕೂ ಹೆಚ್ಚಿನ ಮತದಾರರಿದ್ದಾರೆ. ಮನೆಗಳೆಲ್ಲ ಇಳಿಜಾರು ಪ್ರದೇಶದಲ್ಲಿರುವುದರಿಂದ ಕೆಲವರು ಮನೆಗೆ ಹೋಗಲು ಹತ್ತಿ ಇಳಿಯಲು ಎಣಿ ಮಾಡಿಕೊಂಡಿದ್ದಾರೆ. ಇಲ್ಲಿರುವ ಇಕ್ಕಟ್ಟಾದ ಇಳಿಜಾರು ರಸ್ತೆಗಳು ಕಲ್ಲು ಗುಂಡಿಗಳಿಂದ ತುಂಬಿರುವುದರಿಂದ ಮಕ್ಕಳಿರಲಿ, ಹದಹರಿಯದವರಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ.

ಬೈಕ್‌ ತಂದರೆ ಮನೆಯ ಬಾಗಿಲಲ್ಲಿ ಇಡುವಂತಿಲ್ಲ. ಎಲ್ಲೊ ಇಟ್ಟು ಮನೆಗೆ ನಡೆದು ಸಾಗಬೇಕು. ಬೆಳಗ್ಗೆ ಎದ್ದು ಬಂದು ನೋಡಿದರೆ ಬೈಕ್ ಕಳ್ಳತನ ಅಥವಾ ಪೆಟ್ರೊಲ್ ಮಾಯವಾಗಿರುತ್ತದೆ. ಅಪ್ಪಿತಪ್ಪಿಯೂ ಆಟೋ ಬಂತೆಂದರೆ ರಸ್ತೆಯಿಂದ ಕಲ್ಲು ಸಿಡಿದು ಮನೆಯ ಹಂಚಿನ ಮೇಲೆ ಬೀಳುತ್ತದೆ.ಕಳೆದ ೨೫ ವರ್ಷಗಳಿಂದ ಈ ವಾರ್ಡ್‌ನಿಂದ ಗೆದ್ದು ಬರುವ ಸದಸ್ಯರೆಲ್ಲರೂ ಕೊಟ್ಟ ಮಾತು ಉಳಿಸಿಕೊಳ್ಳುತ್ತಿಲ್ಲ. 

ಇಲ್ಲಿಯ ಭೌಗೋಳಿಕ ಸ್ಥಿತಿಯನ್ನೇ ಮುಂದಿಟ್ಟುಕೊಂಡ ಜನಪ್ರತಿನಿಧಿಗಳು ಅಭಿವೃದ್ಧಿ ಮಾಡುವುದನ್ನೇ ಮರೆತಿದ್ದಾರೆ. ಕಳೆದ ಲೋಕಸಭೆ ಚುನಾವಣೆಯ ವೇಳೆ ಇಲ್ಲಿಯ ಜನತೆ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದರಾದರೂ ಮನವೊಲಿಸಿ ಮತ ಹಾಕಿಸಿದವರೂ ಈಗ ನಾಪತ್ತೆಯಾಗಿದ್ದಾರೆ. ಅರಣ್ಯ ಅತಿಕ್ರಮಣದಾರರೇ ಜಾಸ್ತಿ ಇರುವ ಗಣೇಶ ನಗರಕ್ಕೆ ಸೌಲಭ್ಯ ಒದಗಿಸಿಕೊಡುವ ಭರವಸೆಗಳ ಈಡೇರಿಕೆಗೆ ಮುಹೂರ್ತ ಮಾತ್ರ ಬಂದಿಲ್ಲ.

ಈ ಹಾಳಾದ ರಸ್ತೆಯಿಂದ ಜೀವನವೇ ದುಸ್ತರವಾಗಿದೆ. ಏರು-ಇಳಿಜಾರಿನಿಂದ ಕೂಡಿದ ಹೊಂಡಮಯವಾದ ರಸ್ತೆಯಲ್ಲಿ ಬೈಕ್ ನಲ್ಲಿ ಬರಲೂ ಭಯ. ಇಷ್ಟು ವರ್ಷ ನಾವು ನೋವಿನಲ್ಲಿಯೇ ಬದುಕು ಕಾಣುತ್ತಿದ್ದೇವೆ. ಇನ್ನು ಮುಂದಾದರೂ ನಮ್ಮ ಬದುಕು ಹಸನಾಗಿಸಿ ಎಂದು ಪದ್ಮಾವತಿ ನಾಯ್ಕ ಆಗ್ರಹಿಸಿದ್ದಾರೆ.

ಗಣೇಶ ನಗರದ ಸಮಸ್ಯೆಯ ಬಗ್ಗೆ ಅರಿವಿದೆ. ಯಾವ ರೀತಿ ಅಲ್ಲಿಯವರ ಸಮಸ್ಯೆ ಬಗೆ ಹರಿಸಬಹುದು ಎಂದು ಚರ್ಚಿಸಿ ಪ್ರಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಪೌರಾಯುಕ್ತ ಕಾಂತರಾಜ್ ತಿಳಿಸಿದ್ದಾರೆ.