ಸಾರಾಂಶ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿರಾಜ್ಯದಲ್ಲಿಯೇ ಗರಿಷ್ಠ ಉಷ್ಣಾಂಶ ದಾಖಲಾಗಿರುವ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ ಜಿಲ್ಲೆ ಶಾಖ ತರಂಗ ಸುಳಿಯಲ್ಲಿ ಸಿಲಕಿ ನಲುಗುತ್ತಿದೆ.
ಕಳೆದ ಒಂದು ವಾರದಿಂದ ಕಲಬುರಗಿ ನಗರ ಹಾಗೂ ಜಿಲ್ಲಾದ್ಯಂತ ಶುರುವಾಗಿರುವ ಶಾಖ ತರಂಗಗಳ ಹಾವಳಿ, ನಿರಂತರ ಉಷ್ಣದ ಅಲೆಗಳು, ಉರಿ ಬಿಸಿಲಿನ ಉಪಟಳದಿಂದ ಜನಜೀವನ ತತ್ತರಿಸಿದೆ.ಇತ್ತೀಚೆಗಿನ ಒಂದೂವರೆ ದಶಕದಲ್ಲಿ ಇದೇ ಮೊದಲ ಬಾರಿಗೆ ಮಾರ್ಚ್‌ನಲ್ಲೇ ಪಾದರಸ ಮಟ್ಟ ಹೈಜಂಪ್ ಮಾಡಿ 40 ಡಿಗ್ರಿ ಸೆಲ್ಸಿಯಸ್ ದಾಟಿರೋದರಿಂದ ಇಲ್ಲೀಗ ಬಿಸಿಲು- ಪಾದರಸ ಎರಡೂ ಹೈಜಂಪ್ ಮಾಡವೆ.
ರಾಜ್ಯದಲ್ಲೇ ಗರಿಷ್ಠ ತಾಪಮಾನ ಕಲಬುಗಿಯಲ್ಲಿ ದಾಖಲು: ಬೆಳಗಿನ 6 ಗಂಟೆಗೆ ಯೂರ್ಯದೇವ ತನ್ನ ಪ್ರಖರ ಬಿಸಿಲ ಅಲೆಗಳೊಂದಿಗೆ ಶುರುಮಾಡುವ ಪಯಣ ಇಡೀ ದಿನ ಸಾಗಿ ಜನಜೀವನ ಅಸ್ತವ್ಯಸ್ತವಾಗುವಂತಾಗಿದೆ. ಜಿಲ್ಲೆಯಲ್ಲಿ ಶುಕ್ರವಾರ 40.9 ಡಿಗ್ರಿ ಸೆಲ್ಸಿಯಸ್ ಮತ್ತು ಶನಿವಾರ 41.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಹನಾಮಾನ ವರದಿ ಅನುಸಾರ ಇದು ರಾಜ್ಯದಲ್ಲಿಯೇ ಗರಿಷ್ಠ ಉಷ್ಣಾಂಶ ಇದಾಗಿದೆ.ರಣ ಬಿಸಿಲಿನಿಂದಾಗಿ ಜನ ಹೈರಾಣಾಗಿ ಹೋಗುತ್ತಿದ್ದಾರೆ. ಬೆಳೆಗ್ಗೆ ಹತ್ತುಗಂಟೆಯಷ್ಟೊತ್ತಿಗೆ ಬಿಸಿಲ ತಾಪ ಹೆಚ್ಚಾಗುತ್ತಿರುವುದರಿಂದ ಜನ ಹೊರಗಡೆ ಓಡಾಡುವುದೇ ದುಸ್ತರವಾದಂತಾಗಿದೆ.
ಮಧ್ಯಾಹ್ನ 12 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೂ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಈ ಅವಧಿಯಲ್ಲಿ ಜನರ ಓಡಾಟ ತೀರಾ ವಿರಳವಾಗುತ್ತಿದೆ. ಸಾಯಂಕಾಲ 6 ರ ನಂತರ ಬಿಸಿಲ ತಾಪ ಅಲ್ಪ ಮಟ್ಟಿಗೆ ಕಡಿಯಾಗುತ್ತಿರುವುದರಿಂದ ಈ ವೇಳೆ ಜನ ಮನೆಯಿಂದ ಹೊರ ಬರುವಂತಾಗಿದೆ.ತಂಪು ಪಾನೀಯಗಳಿಗೆ ಮೊರೆ: ಹಗಲು ಸುಡು ಬಿಸಿಲಿನಿಂದ ಬೆವೆತು ಹೋಗುತ್ತಿರುವ ಜನ ರಾತ್ರಿ ವೇಳೆ ಧಗೆಯಿಂದ ತತ್ತರಿಸಿ ಹೋಗುವಂತಾಗಿದೆ. ಬಿಸಿಲು ಹೆಚ್ಚಾಗಿರುವುದಿಂದ ಹಗಲು ರಾತ್ರಿ ಫ್ಯಾನ್, ಏರ್ ಕೂಲರ್, ಏಸಿ ಇಲ್ಲದೇ ದಿನ ಕಳೆಯುವುದು ಅಸಾಧ್ಯವೆನಿಸುವಂತಾಗಿದೆ.
ಬಿಸಿಲ ತಾಪದಿಂದ ತಣಿಸಿಕೊಳ್ಳಲು ಜನ ತಂಪು ಪಾನಿಯಗಳಿಗೆ ಮೊರೆ ಹೋಗುತ್ತಿದ್ದಾರೆ. ಬಡವರ ಫ್ರಿಜ್ ಎಂದೇ ಕರೆಯಲಾಗುವ ಮಣ್ಣಿನ ಮಡಿಕೆಗಳಿಗೂ ಹೆಚ್ಚಿನ ಬೇಡಿಕೆ ಬಂದಂತಾಗಿದೆ. ನಗರದ ಶರಣಬಸವೇಶ್ವರ ದೇವಸ್ಥಾನ ಸೇರಿದಂತೆ ಮತ್ತಿತರ ಕಡೆ ಮಣ್ಣಿನ ಮಡಿಕೆಗಳ ಮಾರಾಟ ಜೋರಾಗಿ ನಡೆದಿದೆ. ನಗರದ ಅಪ್ಪನ ಕೆರೆ ರಸ್ತೆ, ರಾಮ ಮಂದಿರ- ಮೋಹನ್ ಲಾಡ್ಜ್ ರಸ್ತೆ ಸರಿದಂತೆ ಹಲವು ಕಡೆ ಕಲ್ಲಂಗಡಿ ಹಣ್ಣುಗಳು ಮತ್ತು ಎಳೆ ನೀರು ಮಾರಾಟವು ಜೋರಾಗಿದೆ.ರಣ ಬಿಸಿಲಿಗೆ ಓರ್ವ ಬಲಿ?: ಈ ನಡುವೆ ರಣ ಬಿಸಿಲಿಗೆ ನರೇಗಾ ಕೂಲಿ ಕಾರ್ಮಿಕನೊಬ್ಬ ಬಲಿಯಾಗಿರುವ ವರದಿಯಾಗಿದೆ. ಜಿಲ್ಲೆಯ ಆಳಂದ ತಾಲ್ಲೂಕಿನ ದಣ್ಣೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶರಣಪ್ಪ ಸಮಗಾರ (42) ಎಂಬುವವರು ನರೇಗಾ ಕೂಲಿ ಕೆಲಸ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಶರಣಪ್ಪ ಅವರು ಬಿಸಿಲಿನ ತಾಪದಿಂದ ಅಥವಾ ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸತ್ಯ ತಿಳಿಯಲಿದೆ.
ರಣ ಬಿಸಿಲು ಮಕ್ಕಳು, ಬಾಣಂತಿಯರು ಮತ್ತು ವೃದ್ಧರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಬಿಸಿಲಿನ ತಾಪದಿಂದ ಪಾರಾಗಲು ಮನೆಯಲ್ಲೇ ಇರಲು ಆರೋಗ್ಯ ಇಲಾಖೆ ಸೂಚಿಸಿದೆ.ಕಲ್ಲಂಗಡಿ ರಾಶಿ- ಕಬ್ಬಿನ ಹಾಲಿನ ಭರಾಟೆ: ಬಿಸಿಲು ಹೆಚ್ಚುತ್ತ ಸಾಗಿದಂತಯೇ ನಗರ ಹಾಗೂ ಜಿಲ್ಲಾದ್ಯಂತ ಕಬ್ಬಿನ ಹಾಲಿನ ಮಾರಾಟ ಭರಾಟೆ ಸಾಗಿದೆ, ಅಷ್ಟೇ ಅಲ್ಲ, ಜನರ ದಾಹ ತೀರಿಸಲು ಕಲ್ಲಂಗಡಿ ಹಣ್ಣುಗಳ ರಾಶಿಯೇ ನಗರದಲ್ಲಿ ಕಾಮುತ್ತಿದೆ. ರಸ್ತೆಗಳ ಇಕ್ಕೆಲಗಳಲ್ಲಿ ವರ್ತಕರು ಕಲ್ಲಂಗಡಿ ಹಣ್ಣಿನ ರಾಶಿಯೊಂದಿಗೆ ಇದ್ದು ಭರಾಟೆ ವ್ಯಾಪಾರದಲ್ಲಿದ್ದಾರೆ.
ಬಿಸಿಲಿನಿಂದಾಗಿ ತತ್ತರಿಸಿರುವ ಜನತೆಗೆ ನಿಂಬು ಶರಬತ್, ಪಾನಕ, ಹಣ್ಣಿನ ರಸ, ಕಬ್ಬಿನ ಹಾಲು ಹೀಗೆ ಹತ್ತಾರು ತಂಪು ಪೇಯಗಳನ್ನು ಒದಗಸಲು, ಐಸ್‌ಕ್ರೀಮ್ ಪಾರ್ಲರ್‌ಗಳು ಎಲ್ಲವೂ ಕಲಬುರಗಿ ನಗರವನ್ನು ತುಂಬಿವೆ.ಹವಾಮಾನ ಇಲಾಖೆ ಕಟ್ಟೆಚ್ಚರ: ಕಲಬುರಗಿ ಜಿಲ್ಲೆಗೆ ಮತ್ತೆ ಏ.2ರಿಂದ 4ರ ವರೆಗೂ ಉಷ್ಣತೆ ಅಲೆಗಳ ಬಗ್ಗ ಎತ್ತರಿಕೆ ರವಾನೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯ ಮಾ.31ರ ವರದಿಯಂತೆ ಶಾಖದ ಅಲೆಯ ಎಚ್ಚರಿಕೆ ಬಂದಿದೆ. ರಾಜ್ಯದ ಉತ್ತರ ಒಳನಾಡಿನ ಕಲಬುರಗಿ, ಬಾಗಲಕೋಟೆ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಏ.2, 3, 4 ಹಾಗೂ 5ರಂದು ಶಾಖದ ಅಲೆ ಎಚ್ಚರಿಕೆ ನೀಡಲಾಗಿದೆ, ಈ ದಿನಗಳಲ್ಲಿ ಶಾಖದ ಅಲೆಯ ಹೆಚ್ಚಾಗಿ ಇರುವ ಸಾಧ್ಯತೆಯಿದೆ. ಬಿಸಿ ವಾತಾವರಣ ಹಾಗೂ ಶಾಖ ತರಂಗಗಳಿಂದ ಜಿಲ್ಲೆಯ ಜನತೆ ಕಾಳಜಿಯಿಂದ ಬಚಾವ್ ಆಗಬೇಕು, ಅಂದಾಗ ಮಾತ್ರ ಇಂತಹ ನಿಸರ್ಗದ ದೋಷಗಳಿಂದ ಕಲಬುರಗಿ ಬಚಾವ್ ಆಗಬುಹುದು ತಾನೆ?