ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಮರ್ಯಾದಾ ಪುರುಷೋತ್ತಮ ಶ್ರೀ ರಾಮ ದೇವರ ಜನ್ಮ ದಿನವಾದ ರಾಮ ನವಮಿಯಂದು ಕಲಬುರಗಿ ನಗರ ರಾಮ ಭಕ್ತಿಯಲ್ಲಿ ಮಿಂದ್ದೆದ್ದಿತು.ನಗರದಲ್ಲಿರುವ ರಾಮ ಮಂದಿರಗಳಲ್ಲಿ ರಾಮನಾಮ ಭಜನ್ ಪ್ರತಿಧ್ವನಿಸಿದರೆ, ಮುಖ್ಯ ರಸ್ತೆಗಳಲ್ಲಿ ರಾಮದೇವ ಭವ್ಯ ಪ್ರತಿಮೆಗಳ ಮೆರವಣಿಗೆ ಗಮನ ಸೆಳೆಯಿತು. ಇನ್ನು ಜಿಲ್ಲಾದ್ಯಂತ ರಾಮನವಮಿ ಸಂಭ್ರಮ ಜೋರಾಗಿತ್ತು. ರಾಮ ಮಂದಿರಗಳು, ಪ್ರಾಣ ದೇವರ ಮಂದಿರಗಳಲ್ಲೆಲ್ಲಾ ರಾಮ ಭಜನ್, ಪ್ರಸಾದ ವಿತರಣೆ ನಡೆದವು.
ಶ್ರೀರಾಮ್ ನವಮಿ ಪ್ರಯುಕ್ತ ನಗರದ ರಾಮತೀರ್ಥದಿಂದ ಜಗತ್ ವೃತ್ತದವರೆಗೆ ಶ್ರೀರಾಮನ 15 ಅಡಿ ಎತ್ತರದ ಮೂರ್ತಿಯ ಭವ್ಯ ಶೋಭಾಯಾತ್ರೆ ನಡೆಯಿತು.ರಾಮತೀರ್ಥದಿಂದ ಆರಂಭವಾದ ಶೋಭಾಯಾತ್ರೆ ಖಾದ್ರಿ ಚೌಕ್ ಮೂಲಕ ಆಳಂದ ನಾಕಾ, ಚೌಕ್ ಪೊಲೀಸ್ ಠಾಣೆ ವೃತ್ತದ ಮೂಲಕ ಜಗತ್ ವೃತ್ತ ತಲುಪಿತು. ಸಾವಿರಾರು ಜನರು ಹಾಗೂ ಹಲವಾರು ಮಠಾಧೀಶರು ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆಯುದ್ದಕ್ಕೂ ರಾಮ ಭಕ್ತರಿಗೆ ತಂಪು ಪಾನೀಯ, ಮಜ್ಜಿಗೆ, ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಖಾದ್ರಿ ಚೌಕ್‍ನಲ್ಲಿ ಮುಸ್ಲಿಂ ಬಾಂಧವರು ರಾಮ ಭಕ್ತರಿಗೆ ತಂಪು ಪಾನೀಯದೊಂದಿಗೆ ಮಜ್ಜಿಗೆಯನ್ನೂ ಸಹ ವಿತರಿಸುವ ಮೂಲಕ ಸೌಹಾರ್ದತೆ ಮೆರೆದರು.ರಾಮ ನವಮಿ ನಿಮಿತ್ತ ಇಂದು ನಗರದ ರಿಂಗ ರಸ್ತೆಯ ರಾಮ ಮಂದಿರದಲ್ಲಿ ಹಂಸನಾಮಕ ಮತ್ತು ಲಕ್ಷ್ಮೀ ನಾರಾಯಣ ಪಾರಾಯಣ ಸಂಘದ ವತಿಯಿಂದ ರಾಮರಕ್ಷ ಸ್ತೋತ್ರ, ರಾಮಮಂತ್ರ, ವಿಷ್ಣು ಸಹಸ್ರನಾಮ, ಸುಂದರ ಕಾಂಡ,ಲಕ್ಷ್ಮೀ ಸ್ತೋತ್ರ ಪಾರಾಯಣ ಜರುಗಿತು.ಪಾರಾಯಣ ಸಂಘದ ಸಂಚಾಲಕ ರವಿ ಲಾತೂರಕರ,ಡಾ ಕೃಷ್ಣ ಕಾಕಲವಾರ, ಪದ್ಮನಾಭ ಆಚಾರ್ಯ ಜೋಶಿ,ರಾಮಾಚಾರ್ಯ ನಗನೂರ, ವಿಜಯಕುಮಾರ ಕುಲಕರ್ಣಿ, ಕಿಶೋರ ದೇಶಪಾಂಡೆ, ಶಾಮಸುಂದರ ಕುಲಕರ್ಣಿ, ಡಾ.ಶ್ರೀನಿವಾಸರಾವ ಜಾಗೀರದಾರ,ನರಸಿಂಗರಾವ ಕುಲಕರ್ಣಿ, ಅನಿಲ ಕುಲಕರ್ಣಿ, ಅನಿರುದ್ಧ,ಸಂಕರ್ಷಣ, ಸತ್ಯಬೋಧ,ಅನಂತ ಚಿಂಚನಸುರ,ಕೆ.ಬಿ ಕುಲಕರ್ಣಿ, ಆರ್.ಕೆ ಕುಲಕರ್ಣಿ ಉಪಸ್ಥಿತರಿದ್ದರು.
ಮುಸ್ಲಿಂ ಬಾಂಧವರಿಂದ ತಂಪು ಪಾನೀಯ ವ್ಯವಸ್ಥೆ:ನಗರದಲ್ಲಿ ನಡೆದ ಭವ್ಯ ರಾಮದೇವರ ಶೋಭಾಯಾತ್ರೆಯುದ್ದಕ್ಕೂ ಅಲ್ಲಲ್ಲಿ ಮುಸ್ಲಿಂ ಬಾಂಧವರು ತಂಪು ಪಾನೀಯ ನೀಡುವ ಮೂಲಕ ಸಾಮರಸ್ಯ ಸಂದೇಶ ಸಾರಿದರು. ಖಾದ್ರಿ ಚೌಕ್‍ನಲ್ಲಿ ಮುಸ್ಲಿಂ ಬಾಂಧವರು ರಾಮ ಭಕ್ತರಿಗೆ ತಂಪು ಪಾನೀಯದೊಂದಿಗೆ ಮಜ್ಜಿಗೆಯನ್ನೂ ಸಹ ವಿತರಿಸುವ ಮೂಲಕ ಸೌಹಾರ್ದ ಪರಂಪರೆಯನ್ನು ಹಾಗೇ ಮುಂದುವರಿಸಿದರು.
ಶೋಭಾ ಯಾತ್ರೆಯಲ್ಲಿ ಆಂದೋಲಾದ ಸಿದ್ದಲಿಂಗ ಮಹಾಸ್ವಾಮೀಜಿ ಅವರು ಚಾಲನೆ ನೀಡಿದರು. ಸಾನಿಧ್ಯವನ್ನು ಸರಡಗಿಯ ಶಕ್ತಿ ಪೀಠದ ಅಪ್ಪಾರಾವ್ ಮುತ್ಯಾ ವಹಿಸಿದ್ದರು. ಭವ್ಯ ಶೋಭಾ ಯಾತ್ರೆಯಲ್ಲಿ ಕಡಗಂಚಿಯ ವೀರಭದ್ರ ಶಿವಾಚಾರ್ಯರು, ಮಾಶಾಳ್‍ದ ಕೇದಾರ್ ಶ್ರೀಗಳು, ಶಹಾಪುರದ ಮಲ್ಲಿಕಾರ್ಜುನ್ ಮುತ್ಯಾ, ನೀಲೂರ್ ಶ್ರೀಗಳು, ಪಾಳಾದ ಶ್ರೀಗಳು, ಗದ್ದುಗೆಮಠದ ಶ್ರೀಗಳು ಮುಂತಾದ ಮಠಾಧೀಶರು ಪಾಲ್ಗೊಂಡಿದ್ದರು,ಸಾವಿರಾರು ಸಂಖ್ಯೆಯಲ್ಲಿನ ರಾಮ ಭಕ್ತರು ಅಲ್ಲಿಂದ ಮೆರವಣಿಗೆ ಆರಂಭಿಸಿ ಖಾದ್ರಿ ಚೌಕ್ ಮೂಲಕ ಆಳಂದ್ ನಾಕಾ, ಚೌಕ್ ಪೋಲಿಸ್ ಠಾಣೆ ವೃತ್ತದ ಮೂಲಕ ಜಗತ್ ವೃತ್ತಕ್ಕೆ ಬಂದು ತಲುಪಿತು. ಸಂಜೆ 5 ಗಂಟೆಯವರೆಗೆ ಮೆರವಣಿಗೆ ಜರುಗಿತು.
ರಾಮ ನವಮಿ ಉತ್ಸವ ಸಮಿತಿಯ ಅಧ್ಯಕ್ಷ ರಾಜು ಭವಾನಿ, ನ್ಯಾಯವಾದಿ ಚಂದ್ರಕಾಂತ್ ಆರ್. ಕಾಳಗಿ, ಮಹೇಶ್ ಗೊಬ್ಬೂರ್, ಶರಣು ಗುತ್ತೇದಾರ್, ದತ್ತು ಸುಗಂಧಿ, ಮಹೇಶ್ ಯಾದವ್, ತಾತಾಗೌಡರು ಪಾಲ್ಗೊಂಡಿದ್ದರು.ಕೋಟ್ಯಂತರ ಹಿಂದೂಗಳ ಕನಸು ಶ್ರೀರಾಮ ಮಂದಿರ ನಿರ್ಮಾಣ ಇದೀಗ ಸಾಕಾರಗೊಂಡಿರುವ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಶ್ರೀರಾಮ ನವಮಿ ಅತ್ಯಂತ ವಿಶೇಷ ಹಾಗೂ ಮಹತ್ವದ ಸಂದರ್ಭವಾಗಿ ಕಲಬುಗಿಯಲ್ಲಿ ಸಾವಿರಾರು ಭಕ್ತರನ್ನು ಆಕರ್ಷಿಸಿತು.