ಬಿಸಿಲ ತಾಪಕ್ಕೆ ಮಂಡ್ಯ ಜಿಲ್ಲೆಯ ಜನರು ಕಂಗಾಲು..!

| Published : May 01 2024, 01:27 AM IST

ಸಾರಾಂಶ

ಉತ್ತರ ಕರ್ನಾಟಕಕ್ಕೆ ಎದುರಾಗಿರುವ ಉಷ್ಣಹವೆಯ ಬಿಸಿ ನಿಧಾನವಾಗಿ ದಕ್ಷಿಣಕ್ಕೂ ತಟ್ಟಲಾರಂಭಿಸಿದೆ. ಇದರ ಪರಿಣಾಮ ಬಿಸಿಲಿನ ತೀವ್ರತೆ, ಉಷ್ಣಹವೆಯಿಂದಾಗಿ ಜಿಲ್ಲೆಯೊಳಗೆ ಬೇಸಿಗೆ ಸಮಯದ ವಾತಾವರಣದಲ್ಲಿ ಗಣನೀಯ ಪ್ರಮಾಣದ ಬದಲಾವಣೆಗಳು ಕಂಡುಬರುತ್ತಿವೆ. ಭೂಮಿ ಕಾದ ಕೆಂಡದಂತಾಗಿದೆ. ಸುಡುಬಿಸಿಲಿನಲ್ಲಿ ವಾಹನಗಳಲ್ಲಿ ಓಡಾಡುವುದೂ ಕಷ್ಟಕರವೆನಿಸಿದೆ. ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಸಂಚರಿಸುವವರ ಸಂಖ್ಯೆಯೂ ವಿರಳವಾಗಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಬಿಸಿಲ ತಾಪ ದಿನದಿಂದ ದಿನಕ್ಕೆ ಹೆಚುತ್ತಾ ಜನರನ್ನು ಬೆಚ್ಚಿಬೀಳಿಸುತ್ತಿದ್ದರೆ, ಮತ್ತೊಂದೆಡೆ ಬಿಸಿಯಾದ ಗಾಳಿ ಜನರನ್ನು ಕಂಗಾಲಾಗುವಂತೆ ಮಾಡಿದೆ. ಬಿಸಿಲಿಗೆ ಮೈಯ್ಯೊಡ್ಡುವುದಕ್ಕೆ ಜನರು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಜಿಲ್ಲೆಯ ತಾಪಮಾನ ೩೫ ರಿಂದ ೩೬ ಡಿಗ್ರಿ ಇರುತ್ತಿತ್ತು. ಈ ವಾತಾವರಣಕ್ಕೆ ಜಿಲ್ಲೆಯ ಜನರು ಒಗ್ಗಿಕೊಂಡಿದ್ದಾರೆ. ಕಳೆದೆರಡು ವರ್ಷಗಳಿಂದ ತಾಪಮಾನದಲ್ಲಿ ಏರಿಕೆಯಾಗಿದ್ದು, ಗರಿಷ್ಠ ತಾಪಮಾನ ೩೯ ಡಿಗ್ರಿವರೆಗೆ ತಲುಪಿದೆ. ಇಷ್ಟೊಂದು ಬಿಸಿಲ ತಾಪ ಜನರಿಗೆ ಹೊಸ ಅನುಭವವಾಗಿದ್ದು, ಅದನ್ನು ಸಹಿಸಿಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ. ದೇಹದಲ್ಲಿ ನೀರಿನಂಶವೇ ಕ್ಷೀಣಿಸುತ್ತಾ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಮಂಡ್ಯದಲ್ಲೂ ಉಷ್ಣ ಹವೆ:

ಉತ್ತರ ಕರ್ನಾಟಕಕ್ಕೆ ಎದುರಾಗಿರುವ ಉಷ್ಣಹವೆಯ ಬಿಸಿ ನಿಧಾನವಾಗಿ ದಕ್ಷಿಣಕ್ಕೂ ತಟ್ಟಲಾರಂಭಿಸಿದೆ. ಇದರ ಪರಿಣಾಮ ಬಿಸಿಲಿನ ತೀವ್ರತೆ, ಉಷ್ಣಹವೆಯಿಂದಾಗಿ ಜಿಲ್ಲೆಯೊಳಗೆ ಬೇಸಿಗೆ ಸಮಯದ ವಾತಾವರಣದಲ್ಲಿ ಗಣನೀಯ ಪ್ರಮಾಣದ ಬದಲಾವಣೆಗಳು ಕಂಡುಬರುತ್ತಿವೆ. ಭೂಮಿ ಕಾದ ಕೆಂಡದಂತಾಗಿದೆ. ಸುಡುಬಿಸಿಲಿನಲ್ಲಿ ವಾಹನಗಳಲ್ಲಿ ಓಡಾಡುವುದೂ ಕಷ್ಟಕರವೆನಿಸಿದೆ. ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಸಂಚರಿಸುವವರ ಸಂಖ್ಯೆಯೂ ವಿರಳವಾಗಿದೆ. ಜನರು ನೆರಳಿರುವ ಜಾಗಗಳಲ್ಲಿ ವಿಶ್ರಾಂತಿ ಪಡೆಯುವುದಕ್ಕೆ ಹೆಚ್ಚು ಬಯಸುತ್ತಿದ್ದಾರೆ. ವಯಸ್ಸಾದವರಂತೂ ಬಿಸಿಲಿಗೆ ಬರುವುದಕ್ಕೆ ಹೆದರಿ ಮನೆಯನನ್ನು ಸೇರಿಕೊಳ್ಳುವಂತಾಗಿದೆ.

ದಾಹ ಇಂಗಿಸಿಕೊಳ್ಳಲು ಒದ್ದಾಟ:

ತಾಪಮಾನದಿಂದಾಗಿ ಚರ್ಮ ಸಮಸ್ಯೆಗಳು ಹೆಚ್ಚು ಕಂಡುಬರುತ್ತಿದೆ. ಚರ್ಮ ಒಣಗುವುದು, ಕಪ್ಪಾಗುವುದು, ಸ್ಕಿನ್‌ಬರ್ನ್ ಸಮಸ್ಯೆಗಳು ಹೆಚ್ಚಾಗುತ್ತಿವೆ. ನೀರು ಎಷ್ಟೇ ಸೇವಿಸಿದರೂ ಬಿಸಿಲ ತಾಪ ಮತ್ತು ಬಿಸಿ ಗಾಳಿಗೆ ದೇಹದಲ್ಲಿರುವ ನೀರಿನಂಶ ಬೆವರಿನ ರೂಪದಲ್ಲಿ ಹೊರಬರುತ್ತಿದೆ. ಇದಕ್ಕಾಗಿ ಜನರು ಎಳನೀರು, ಹಣ್ಣಿನ ರಸಗಳಿಗೆ ಮೊರೆಹೋಗಿದ್ದಾರೆ.

ಎಳನೀರಿಗೆ ಬೇಡಿಕೆ ತೀವ್ರವಾಗಿದ್ದರೂ ಅಷ್ಟೇ ಪ್ರಮಾಣದ ಕೊರತೆಯೂ ಎದುರಾಗಿದೆ. ಅರ್ಧಗಂಟೆಗೊಮ್ಮೆ ನೀರು ಸೇವಿಸಿದರೂ ತೃಪ್ತಿ ಕೊಡುತ್ತಿಲ್ಲ. ಬಿಸಿ ಗಾಳಿಗೆ ನೀರು ಕೂಡ ಬಿಸಿಯಾಗುತ್ತಿದೆ. ಇದಕ್ಕಾಗಿ ಮಜ್ಜಿಗೆ, ಐಸ್‌ಕ್ರೀಂ, ಕಲ್ಲಂಗಡಿ, ಹಣ್ಣಿನ ರಸಗಳನ್ನು ಸೇವಿಸುವುದರೊಂದಿಗೆ ಜನರು ತಮ್ಮ ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳುವುದಕ್ಕೆ ಒದ್ದಾಟ ನಡೆಸಿದ್ದಾರೆ.

ಭೂಮಿಯ ತಾಪವೂ ಅಧಿಕ:

ಭೂಮಿಯ ಮೇಲಿನ ಉಷ್ಣಾಂಶ ಒಂದೆಡೆಯಾದರೆ ಬಿಸಿಲಿಗೆ ಕಾದಿರುವ ಭೂಮಿಯೂ ತಾಪವನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಧಗೆಯನ್ನು ಉಕ್ಕೇರುವಂತೆ ಮಾಡುತ್ತಿದೆ. ಫ್ಯಾನ್, ಹವಾನಿಯಂತ್ರಿತ ವ್ಯವಸ್ಥೆ ಇಲ್ಲದೆ ಇರಲಾಗದಂತಹ ಪರಿಸ್ಥಿತಿ ಮನೆಮಾಡಿದೆ. ರಣಬಿಸಿಲಿನಿಂದಾಗಿ ಜನರು ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ಇಷ್ಟೊಂದು ತಾಪಮಾನವನ್ನು ಹಿಂದೆಂದೂ ಕಂಡಿರದ ಸಕ್ಕರೆ ನಾಡಿನ ಜನರು ಬಿಸಿಲ ಬೇಗೆಯನ್ನು ತಾಳಲಾರದೆ ಬೇಸಿಗೆ ಮುಗಿಯುವ, ಮಳೆ ಬರುವ ದಿನಗಳನ್ನು ಕಾತರದಿಂದ ಎದುರುನೋಡುತ್ತಿದ್ದಾರೆ.

ಕೇವಲ ಬೆಳಗ್ಗೆ ಹೊತ್ತು ಮಾತ್ರವಲ್ಲದೆ ರಾತ್ರಿ ಸಮಯದಲ್ಲೂ ಧಗೆಯ ಪ್ರಮಾಣ ತೀವ್ರಗತಿಯಲ್ಲಿರುವುದು ಹಲವರ ನಿದ್ದೆಗೆಡಿಸುವಂತೆ ಮಾಡಿದೆ. ತಂಪಾದ ಗಾಳಿ ಇಲ್ಲದೆ ಮೈಯ್ಯಿಂದ ಬೆವರು ಹೊರಬರುತ್ತಿರುತ್ತದೆ. ಫ್ಯಾನ್‌ಗಳನ್ನು ಹಾಕಿಕೊಂಡು ನೆಮ್ಮದಿ ನಿದ್ರೆ ಮಾಡೋಣವೆಂದರೆ ಅದರ ಗಾಳಿಯೂ ಬಿಸಿಯಾಗಿಹೋಗುತ್ತಿದೆ. ಹವಾನಿಯಂತ್ರಿತ ವ್ಯವಸ್ಥೆಯಲ್ಲಿರುವವರು ಸಮಾಧಾನದಿಂದ ನಿದ್ರೆ ಮಾಡುವಷ್ಟು ಪುಣ್ಯವಂತರೆನಿಸಿದ್ದಾರೆ.

ಪ್ರಾಣಿಗಳ ಮೂಕವೇದನೆ:

ಬಿಸಿಲ ಬೇಗೆ ಕೇವಲ ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ತಟ್ಟಿದೆ. ಜಾನುವಾರುಗಳು ಬಿಸಿಲಿನಲ್ಲಿ ಮೇಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಳ್ಳ-ಕೊಳ್ಳ, ಕೆರೆಗಳಲ್ಲಿ ನೀರು ಬತ್ತಿಹೋಗಿರುವುದರಿಂದ ನೀರಿಗಾಗಿ ಪರದಾಡುವಂತಹ ಸ್ಥಿತಿ ಎದುರಾಗಿದೆ. ಬಿಸಿಲ ತಾಪವನ್ನು ಸಹಿಸಿಕೊಳ್ಳಲಾಗದೆ ಮೂಕವಾಗಿಯೇ ವೇದನೆಯನ್ನು ಅನುಭವಿಸುತ್ತಿವೆ. ಮನೆಯಲ್ಲಿರುವ ಸಾಕು ಪ್ರಾಣಿಗಳೂ ಕೂಡ ದೇಹದಲ್ಲಿ ನೀರಿನಂಶದ ಕೊರತೆಯಿಂದ ಅಸ್ವಸ್ಥಗೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ಗ್ರಾಮಾಂತರ ಪ್ರದೇಶದಲ್ಲೂ ರೈತರು ಜಾನುವಾರುಗಳನ್ನು ಮೇಯಿಸುವುದಕ್ಕೆ ಕರೆದೊಯ್ಯದೆ ನೆರಳಿನಲ್ಲೇ ಕಟ್ಟಿಹಾಕುತ್ತಿದ್ದಾರೆ. ಅವುಗಳಿಗೆ ಮೆಕ್ಕೆಜೋಳ, ಹುಲ್ಲು, ರಾಗಿ ಹುಲ್ಲು, ಸೀಮೆ ಹುಲ್ಲನ್ನು ಕೊಯ್ದು ತಂದು ಸಮಯಕ್ಕೆ ನೀಡುತ್ತಾ ನೀರು ಕೊಡುತ್ತಿದ್ದಾರೆ. ಜಮೀನಿಲ್ಲದವರು ಮಾತ್ರ ತಂಪಾದ ನೆರಳಿರುವ ಜಾಗದಲ್ಲಿ ಕಟ್ಟಿ ಮೇಯಿಸಿಕೊಂಡು ಬರುತ್ತಿರುವುದನ್ನು ಕಾಣಬಹುದಾಗಿದೆ. ಹಲವರು ಜಾನುವಾರುಗಳನ್ನು ಬೋರ್‌ವೆಲ್, ಪಂಪ್‌ಸೆಟ್ ಹೊಂದಿರುವವರ ಬಳಿ ಹೋಗಿ ನೀರು ಕುಡಿಸಿಕೊಂಡು ಮನೆಗೆ ಕರೆತರುತ್ತಿದ್ದರೆ, ಕೆರೆ, ಕಟ್ಟೆ, ಹಳ್ಳಗಳನ್ನೇ ಆಶ್ರಯಿಸಿಕೊಂಡಿದ್ದವರು ಹಾಗೂ ನೀರಿಲ್ಲದ ಕಡೆಗಳಲ್ಲಿರುವವರು ಜಾನುವಾರುಗಳನ್ನು ಮನೆಗೆ ಕರೆತಂದ ಬಳಿಕವಷ್ಟೇ ನೀರು ಕುಡಿಸುವಂತಹ ಶೋಚನೀಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.ಬದಲಾದ ಬೇಸಿಗೆ ವಾತಾವರಣ

ಜಿಲ್ಲೆಯಲ್ಲಿ ಈ ಬಾರಿಯ ಬೇಸಿಗೆಯ ವಾತಾವರಣ ಬದಲಾಗಿದೆ. ೩೬ ಡಿಗ್ರಿವರೆಗೆ ಇರುತ್ತಿದ್ದ ತಾಪಮಾನ ೩೯-೪೦ ಡಿಗ್ರಿಗೆ ತಲುಪಿದೆ. ಉಷ್ಣಹವೆ ಬಿಸಿ ಜನರಿಗೆ ತಟ್ಟಿರುವುದರಿಂದ ಚರ್ಮದ ಸಮಸ್ಯೆಗಳು ಹೆಚ್ಚಿವೆ. ಮಕ್ಕಳು ಬಿಸಿಲಿನಲ್ಲಿ ಆಟವಾಡದಂತೆ ಎಚ್ಚರವಹಿಸಿ. ತಾಪ ಹೆಚ್ಚಿರುವ ಕಾರಣ ದೇಹದಲ್ಲಿ ನೀರಿನಂಶ ಉಳಿಯದೆ ಬೆವರಿನ ರೂಪದಲ್ಲಿ ಹೊರಬರುತ್ತಿದೆ. ಹೆಚ್ಚು ನೀರು, ಹಣ್ಣಿನ ರಸ, ಎಳನೀರು ಸೇವಿಸುವ ಮೂಲಕ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ.

-ಡಾ.ಅನಿಲ್ ಆನಂದ್, ಖ್ಯಾತ ವೈದ್ಯರುಬಿಸಿಲಿನ ಬಗ್ಗೆ ಎಚ್ಚರಿಕೆ ಇರಲಿ

ಈಗಿನ ಸುಡುಬಿಸಿಲಿನ ಬಗ್ಗೆ ಜನರು ಎಚ್ಚರದಿಂದ ಇರಬೇಕು. ಬೆಳಗ್ಗೆ ೭ ಗಂಟೆಯಿಂದ ೧೧ ಗಂಟೆಯೊಳಗೆ ಸಾಧ್ಯವಾದಷ್ಟು ಕೆಲಸಗಳನ್ನು ಮುಗಿಸಿಕೊಳ್ಳಿ. ಮತ್ತೆ ಸಂಜೆಯ ಬಳಿಕ ದಿನನಿತ್ಯದ ಕೆಲಸಗಳನ್ನು ಮಾಡಿಕೊಳ್ಳುವುದು ಉತ್ತಮ. ಬಿಸಿಲಿನಲ್ಲಿ ಕೆಲಸ ಮಾಡುವುದರಿಂದ ಸನ್ ಸ್ಟ್ರೋಕ್‌ಗೆ ಒಳಗಾಗುವ ಸಾಧ್ಯತೆಗಳಿವೆ. ಅರ್ಧಗಂಟೆಗೊಮ್ಮೆ ನೀರನ್ನು ಸೇವಿಸಿ. ಹಣ್ಣಿನ ರಸ, ಎಳನೀರು, ಕಲ್ಲಂಗಡಿ ಹಣ್ಣುಗಳನ್ನು ಹೆಚ್ಚು ಸೇವಿಸುವುದು ಉತ್ತಮ. ದೇಹದಲ್ಲಿ ನೀರಿನಂಶ ಇಂಗದಂತೆ ಕಾಪಾಡಿಕೊಳ್ಳಬೇಕು.

- ಡಾ.ಕೆ.ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ, ಮಂಡ್ಯ