ಬೇಸಿಗೆಯ ರಣ ಬಿಸಿಲು ಜೊತೆಗೆ ಬಿಸಿಯಾದ ಹವೆಯಿಂದ ಜಿಲ್ಲೆಯ ಜನರು ತತ್ತರಿಸಿದ್ದಾರೆ. ಬಿಸಿಯಾದ ವಾತಾವರಣದಿಂದ ತಪ್ಪಿಸಿಕೊಳ್ಳುವುದಕ್ಕೆ ಪರದಾಡುತ್ತಿದ್ದಾರೆ. ಬೇಸಿಗೆಯ ಬೇಗೆಯಿಂದ ಪಾರಾಗುವ ದಾರಿ ಕಾಣದೆ ದಿಕ್ಕೆಟ್ಟಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಬಿಸಿಲಿನ ತಾಪ ೩೭ ಡಿಗ್ರಿವರೆಗೆ ತಲುಪಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಬೇಸಿಗೆಯ ರಣ ಬಿಸಿಲು ಜೊತೆಗೆ ಬಿಸಿಯಾದ ಹವೆಯಿಂದ ಜಿಲ್ಲೆಯ ಜನರು ತತ್ತರಿಸಿದ್ದಾರೆ. ಬಿಸಿಯಾದ ವಾತಾವರಣದಿಂದ ತಪ್ಪಿಸಿಕೊಳ್ಳುವುದಕ್ಕೆ ಪರದಾಡುತ್ತಿದ್ದಾರೆ. ಬೇಸಿಗೆಯ ಬೇಗೆಯಿಂದ ಪಾರಾಗುವ ದಾರಿ ಕಾಣದೆ ದಿಕ್ಕೆಟ್ಟಿದ್ದಾರೆ.

ಜಿಲ್ಲೆಯಲ್ಲಿ ಬಿಸಿಲಿನ ತಾಪ ೩೭ ಡಿಗ್ರಿವರೆಗೆ ತಲುಪಿದೆ. ಮುಂದಿನ ಮೇ ೧೫ರೊಳಗೆ ೪೦ ಡಿಗ್ರಿ ತಲುಪುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲಿನಿಂದ ತಪ್ಪಿಸಿಕೊಂಡರೂ ಬಿಸಿಯಾದ ಹವೆಯಿಂದ ತಪ್ಪಿಸಿಕೊಳ್ಳಲಾಗುತ್ತಿಲ್ಲ. ಫ್ಯಾನ್, ಏರ್‌ಕೂಲರ್, ಹವಾನಿಯಂತ್ರಿಕ ಕೊಠಡಿಗಳಿಂದ ಹೊರಬರಲು ಸಾಧ್ಯವಾಗದಂತಹ ಸ್ಥಿತಿ ಇದೆ. ನಿತ್ಯ ಬೆವರಿನ ಸ್ನಾನ ಜನರಿಗೆ ಮಾಮೂಲಾಗಿದೆ.

ದ್ರವರೂಪದ ಆಹಾರಕ್ಕೆ ಹೆಚ್ಚಿದ ಬೇಡಿಕೆ:

ಬೇಸಿಗೆಯಲ್ಲಿ ಮೊದಲೆಲ್ಲಾ ಬಿಸಿಲ ತಾಪಕ್ಕಷ್ಟೇ ಜನರು ಹೆದರುತ್ತಿದ್ದರು. ಈಗ ಬಿಸಿ ಹವೆಗೂ ಹೆದರುವಂತಾಗಿದೆ. ಮನೆಯಲ್ಲೇ ಇದ್ದರೂ ಬಿಸಿಯಾದ ಗಾಳಿಗೆ ಮೈ ಬೆವರುತ್ತಿರುತ್ತದೆ. ಸೌತೆಕಾಯಿ, ಕಲ್ಲಂಗಡಿ, ಕಿತ್ತಳೆ, ವಿವಿಧ ಮಾದರಿಯ ಹಣ್ಣಿನ ರಸ, ನಿಂಬೆ ರಸ, ತಂಪಾದ ಪಾನೀಯ, ಎಳನೀರು, ಐಸ್‌ಕ್ರೀಮ್, ಮಜ್ಜಿಗೆ, ಪಾನಕಗಳಿಗೆ ಜನರು ಮೊರೆಹೋಗಿದ್ದಾರೆ. ಬೇಸಿಗೆಯಲ್ಲಿ ಸಹಜವಾಗಿಯೇ ಇವುಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಊಟ-ತಿಂಡಿಗಳಿಗಿಂತಲೂ ದ್ರವರೂಪದ ಆಹಾರಕ್ಕೆ ಜನರು ಹೆಚ್ಚಿನ ಪ್ರಾಮುಖ್ಯತೆ ನೀಡಲಾರಂಭಿಸಿದ್ದಾರೆ.

ರಾತ್ರಿ ವೇಳೆಯಂತೂ ಫ್ಯಾನ್, ಏರ್‌ಕೂಲರ್ ವ್ಯವಸ್ಥೆಯಿಲ್ಲದೆ ಮಲಗುವುದಕ್ಕೂ ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಬಿಸಿಲ ತಾಪದಿಂದ ಭೂಮಿಯ ತಾಪವೂ ಹೆಚ್ಚಿರುತ್ತದೆ. ರಾತ್ರಿ ಸಮಯದಲ್ಲಿ ಅದರ ಹವೆ ಜನರ ನೆಮ್ಮದಿಗೆಡಿಸಿದೆ. ಇದರಿಂದ ಎಷ್ಟೋ ಮಂದಿ ಸುಖನಿದ್ರೆಯಿಂದ ವಂಚಿತರಾಗಿ ನಿತ್ಯವೂ ಚಡಪಡಿಸುತ್ತಿದ್ದಾರೆ.

ಎಂದು ಮುಗಿವುದೋ ಬೇಸಿಗೆ:

ಬೇಸಿಗೆ ಸಮಯವಾಗಿರುವುದರಿಂದ ಕೆಲವರು ಬಿಸಿಲಿನ ತಾಪ ತಪ್ಪಿಸಿಕೊಳ್ಳಲು ಕಡಲ ತೀರಗಳು, ನದಿ ತೀರಗಳನ್ನು ಆಶ್ರಯಿಸಿಕೊಂಡು ಹೋಗುತ್ತಿದ್ದಾರೆ. ರಜಾ ದಿನಗಳಲ್ಲಿ ಈ ಸ್ಥಳಗಳು ಕಿಕ್ಕಿರಿದು ತುಂಬಿರುತ್ತವೆ. ಕುಟುಂಬ ಸಮೇತ ತೆರಳಿ ದೇಹವನ್ನು ತಂಪಾಗಿಸಿಕೊಂಡು ಬರುತ್ತಿದ್ದರೂ ರಜೆ ಮುಗಿದ ಬಳಿಕ ಮತ್ತದೇ ಬಿಸಿಲಿನ ಹೊಡೆತಕ್ಕೆ ಸಿಲುಕುವುದು ಸಾಮಾನ್ಯವಾಗಿದೆ. ಬಿಸಿಲಿನ ತಾಪ, ಹವೆಯಿಂದ ದೈನಂದಿನ ಕೆಲಸಗಳಲ್ಲೂ ಜನರು ತೊಡಗುವುದಕ್ಕೂ ತೊಡಕುಂಟುಮಾಡುತ್ತಿದೆ. ದೇಹ ಹೆಚ್ಚು ವಿಶ್ರಾಂತಿಯನ್ನು ಬಯಸುತ್ತಿರುವುದರಿಂದ ಯಾವ ಕೆಲಸ ಮಾಡುವುದಕ್ಕೂ ಮನಸ್ಸಾಗುತ್ತಿಲ್ಲ. ಬೇಸಿಗೆ ಎಷ್ಟು ಬೇಗ ಮುಗಿಯುವುದೋ ಎಂಬ ದಿನಗಳಿಗಾಗಿ ಮತ್ತು ಮಳೆ ಬರುವ ದಿನಗಳಿಗಾಗಿ ನಿತ್ಯವೂ ಜನರು ಎದುರುನೋಡುವಂತಾಗಿದೆ.

ಬಿಸಿಲಿನ ತಾಪಕ್ಕೆ ಹೆದರಿ ಸರ್ಕಾರಿ ನೌಕರರು, ದಿನಗೂಲಿ ನೌಕರರು, ಕಟ್ಟಡ ಕಾರ್ಮಿಕರು ಸೇರಿದಂತೆ ಹಲವಾರು ರೀತಿಯ ಕೆಲಸದಲ್ಲಿ ತೊಡಗಿರುವವರು ನೀರನ್ನು ಸದಾ ಜೊತೆಯಲ್ಲಿಯೇ ಇಟ್ಟುಕೊಳ್ಳುವಂತಹ ಪರಿಸ್ಥಿತಿ ಇದೆ. ಆಗಾಗ ನೀರನ್ನು ಕುಡಿಯುತ್ತಾ ದೇಹವನ್ನು ತಂಪಾಗಿಸಿಕೊಳ್ಳುವುದು ಅನಿವಾರ್ಯವಾಗಿದೆ. ಎಷ್ಟು ನೀರು ಕುಡಿದರೂ ಬಿಸಿಯ ಹವೆಗೆ ದಾಹ ತಣಿಯದಂತಾಗಿದೆ. ನೀರು ಕುಡಿದೇ ಜನರು ಹೊಟ್ಟೆ ತುಂಬಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಮರಗಳನ್ನು ಕಡಿದು ನೆರಳಿಗೆ ಹುಡುಕಾಟ:

ವಾಹನಗಳನ್ನು ನಿಲ್ಲಿಸುವುದಕ್ಕೂ ಜನರು ನೆರಳಿನ ಸ್ಥಳವನ್ನು ಹುಡುಕುವಂತಾಗಿದೆ. ದ್ವಿಚಕ್ರವಾಹನ, ಕಾರುಗಳನ್ನು ರಣಬಿಸಿಲಿನಲ್ಲಿ ನಿಲ್ಲಿಸಲು ಸಾಧ್ಯವಾಗದವರು ಸೂಕ್ತ ನೆರಳಿರುವ ಸ್ಥಳವನ್ನು ಬಯಸುವುದು ಸರ್ವೇ ಸಾಮಾನ್ಯವಾಗಿದೆ. ಮಳೆಗಾಲದಲ್ಲಿ ಸಮೃದ್ಧವಾಗಿ ಬೆಳೆದುನಿಂತು ತಂಪನ್ನು ನೀಡುತ್ತಿದ್ದ ಮರಗಳನ್ನು ಅವೈಜ್ಞಾನಿಕ ರೀತಿಯಲ್ಲಿ ಕಡಿದು ಬೋಳಾಗಿ ನಿಲ್ಲಿಸುತ್ತಾರೆ. ಅದೇ ಬೇಸಿಗೆ ಸಮಯದಲ್ಲಿ ಅದೇ ನೆರಳಿನ ಸ್ಥಳಕ್ಕೆ ಹುಡುಕಾಟ ನಡೆಸುವುದು ವಿಚಿತ್ರವೆನಿಸಿದರೂ ಸತ್ಯವಾಗಿದೆ.

ಏಪ್ರಿಲ್ ಕೊನೆ ವಾರದಲ್ಲಿ ಮಳೆ:

ಈಗಾಗಲೇ ಮಲೆನಾಡು, ಅರೆ ಮಲೆನಾಡು ಭಾಗದಲ್ಲಿ ಮುಂಗಾರು ಪೂರ್ವ ಮಳೆ ಆರಂಭಗೊಂಡಿದೆ. ಅಲ್ಲಿ ಬೀಳುತ್ತಿರುವ ಮಳೆಯನ್ನು ಕಂಡು ಬಯಲು ಸೀಮೆಗೆ ಯಾವಾಗ ಮಳೆಯಾವುದೋ ಎಂದು ಆಗಸದತ್ತ ದಿಟ್ಟಿಸುತ್ತಿದ್ದಾರೆ. ಆದಷ್ಟು ಬೇಗನೆ ಮಳೆಯಾಗಿ ಇಳೆ ತಂಪಾಗಿಸಲೆಂದು ಜನರು ಬಯಸುತ್ತಿದ್ದಾರೆ. ಹವಾಮಾನ ಇಲಾಖೆ ತಜ್ಞರ ಪ್ರಕಾರ ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಲಿದೆ ಎಂಬ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಮುಂಗಾರು ಪೂರ್ವ ಮಳೆ ಏಪ್ರಿಲ್ ಮಧ್ಯಭಾಗದಿಂದಲೇ ಶುರುವಾಗುತ್ತಿತ್ತು. ಆದರೆ, ಇದುವರೆಗೂ ಜಿಲ್ಲೆಯ ಯಾವ ಭಾಗದಲ್ಲೂ ಮಳೆಯಾಗಿಲ್ಲ. ರೈತರೂ ಸಹ ಮಳೆಯನ್ನೇ ಎದುರುನೋಡುತ್ತಿದ್ದರೂ ಅದರ ಲಕ್ಷಣಗಳೇ ಇದುವರೆಗೆ ಕಂಡುಬರದಿರುವುದರಿಂದ ಅನ್ನದಾತರೂ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಜಿಲ್ಲೆಯ ತಾಪಮಾನ ೩೭ ಡಿಗ್ರಿಯವರೆಗೆ ತಲುಪಿದೆ. ಮೇ ೧೫ರ ವೇಳೆಗೆ ೪೦ ಡಿಗ್ರಿ ತಲುಪುವ ನಿರೀಕ್ಷೆ ಇದೆ. ಈ ನಡುವೆ ಮುಂದಿನ ವಾರ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ. ಉತ್ತರ ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ಶುರುವಾಗಿದೆ. ಶೀಘ್ರದಲ್ಲೇ ದಕ್ಷಿಣ ಕರ್ನಾಟಕದಲ್ಲಿ ಮಳೆಯಾಗುವ ಲಕ್ಷಣಗಳಿವೆ.

- ಸುಮಂತ್, ಹವಾಮಾನ ತಜ್ಞ