ಸಿಂಧೋಳ್ ಬುಡಕಟ್ಟಿನ ಜನರಲ್ಲಿ ಕಲೆಯ ಶಕ್ತಿ ಇದೆ: ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ

| Published : May 08 2025, 12:37 AM IST

ಸಿಂಧೋಳ್ ಬುಡಕಟ್ಟಿನ ಜನರಲ್ಲಿ ಕಲೆಯ ಶಕ್ತಿ ಇದೆ: ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ನಿಮ್ಮಲ್ಲಿನ ಅನಕ್ಷರತೆ, ಮಾಹಿತಿ ಕೊರತೆಯಿಂದ ಹಲವು ಸವಲತ್ತು ಉಳ್ಳವರ ಪಾಲಾಗುತ್ತಿದೆ. ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕು. ಬೆಡಗು ಬಿನ್ನಣ, ಆಚಾರ, ಆಹಾರ ಪದ್ಧತಿ, ಕುಲಶಾಸ್ತ್ರದ ಮೂಲಕ ತಮ್ಮ ಸಮುದಾಯ ಗುರ್ತಿಸಲ್ಪಟ್ಟಿದೆ. ಈ ಆಧಾರದಂತೆ ಜಾತಿ ಪ್ರಮಾಣ ಪತ್ರವನ್ನು ಸರಿಪಡಿಸಿಕೊಳ್ಳಿ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಸಿಂಧೋಳ್ ಬುಡಕಟ್ಟು ಜನರಲ್ಲಿ ದೈವಿ ಕಲೆ ಇದೆ. ಇದನ್ನು ಸೂಕ್ತ ರೀತಿಯಲ್ಲಿ ಕಲೆ ಬಳಸಿಕೊಳ್ಳಬೇಕಿದೆ ಎಂದು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್‌ ಅಧ್ಯಕ್ಷ, ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಕೃಷ್ಣಾಪುರ ಗ್ರಾಮದ ಸಿಂಧೋಳ್ ಬುಡಕಟ್ಟು ನೆಲೆಸಿರುವ ಕೇರಿಗೆ ಭೇಟಿ ನೀಡಿ ಮಾತನಾಡಿ, ತಮ್ಮಲ್ಲಿರುವ ಕಲೆಯನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕಿದೆ. ಸಮಾಜದಲ್ಲಿನ ಶೋಷಿತ ಸಮುದಾಯದಲ್ಲಿ ಒಂದಾಗಿರುವ ತಮಗೆ ಸರ್ಕಾರದಿಂದ ವಿಶೇಷ ಸೌಲಭ್ಯ, ಸವಲತ್ತು ಸದ್ಭಳಕೆ ಮಾಡಿಕೊಂಡು ಸುಶಿಕ್ಷಿತರಾಗಲು ಚಿಂತಿಸಿ ಎಂದು ಸಲಹೆ ನೀಡಿದರು.ತಮ್ಮ ಕಲಾ ಪ್ರತಿಭೆಯನ್ನು ಇಡೀ ದೇಶಕ್ಕೆ ಹಂಚಬಹುದಾದಷ್ಟಿದೆ. ಅನಕ್ಷರತೆ, ಬಡತನದಿಂದ ಕಲೆ ಮುದುಡಿದೆ. ಊರು ಮಾರಮ್ಮನ ಚಾವಟಿ ಸೇವೆ ವೃತ್ತಿ ಬದುಕು ಬಿಡಬೇಕು. ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದರು.

ನಿಮ್ಮಲ್ಲಿನ ಅನಕ್ಷರತೆ, ಮಾಹಿತಿ ಕೊರತೆಯಿಂದ ಹಲವು ಸವಲತ್ತು ಉಳ್ಳವರ ಪಾಲಾಗುತ್ತಿದೆ. ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕು. ಬೆಡಗು ಬಿನ್ನಣ, ಆಚಾರ, ಆಹಾರ ಪದ್ಧತಿ, ಕುಲಶಾಸ್ತ್ರದ ಮೂಲಕ ತಮ್ಮ ಸಮುದಾಯ ಗುರ್ತಿಸಲ್ಪಟ್ಟಿದೆ. ಈ ಆಧಾರದಂತೆ ಜಾತಿ ಪ್ರಮಾಣ ಪತ್ರವನ್ನು ಸರಿಪಡಿಸಿಕೊಳ್ಳಿ ಎಂದರು.

ಹಳೆಯ ಸಂಪ್ರದಾಯ, ಕುಲ ಕಸುಬು ಬಿಟ್ಟು ಸರ್ಕಾರ ನೀಡುವ ಸವಲತ್ತು ಬಳಸಿಕೊಳ್ಳಬೇಕು. ಗುಡಿ, ಗೃಹ ಕೈಗಾರಿಕೆಗೆ ಮುಂದಾಗಬೇಕು. ಸ್ವಾವಲಂಭಿಗಳಾಗಿ ನಾಟಕ ಕಲಿಸುವ, ಡೋಲ್, ತಮಟೆ ನುಡಿಸುವ ಕಲಾವಿದರು ಗ್ರಾಮದಲ್ಲಿ ಸಾಕಷ್ಟಿದ್ದೀರಿ. ಹಿರಿಯ ಕಲಾವಿದರು ಮಾಶಾಸನ ಮಾಡಿಸಿಕೊಳ್ಳಲು ಮುಂದಾಗಬೇಕು ಎಂದರು.

ಈಚೆಗೆ ಎಸ್‌ಸಿ ಎಸ್‌ಟಿ ನಿಗಮದ ಅಧ್ಯಕ್ಷೆ ಜೆ.ಪಲ್ಲವಿ ಗ್ರಾಮಕ್ಕೆ ಭೇಟಿ ನೀಡಿ ತಮ್ಮ ಅಹವಾಲು ಆಲಿಸಿರುವುದು ಹೊಸ ಬದಲಾವಣೆಯ ಮನ್ವಂತರವಾಗಿದೆ. ತಮ್ಮಲ್ಲಿಅಡಗಿರುವ ಕಲಾ ವಂಶವಾಹಿನಿ ಮಕ್ಕಳಿಗೆ ಸಹಜವಾಗಿ ಬಂದಿದೆ. ನೃತ್ಯ, ಸಂಗೀತ, ನಾಟಕ, ಭರತನಾಟ್ಯದಂತಹ ಕಲೆಗೆ ಒತ್ತು ನೀಡಿ ಎಂದು ಹುರಿದುಂಬಿಸಿದರು.

ಸಮಾಜದ ಮುಖಂಡ ಮಾರಪ್ಪ ಮಾತನಾಡಿ, ನಮ್ಮೂರಿನ ಕಲಾವಿದರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದವರು ಎಂಬುದು ಖುಷಿಯಾಗಿದೆ.ಕಲಾವಿದರಿಗೆ ಮಾಶಾಸನ, ಸಂಗೀತ ಶಿಬಿರ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ವಿನಂತಿಸಿದರು.

ಈ ವೇಳೆ ಮುಖಂಡರಾದ ಅಂಜನಪ್ಪ, ರಾಜಣ್ಣ, ನರಸಿಂಹ, ಸಿದ್ದಲಿಂಗಯ್ಯ, ರಾಮಯ್ಯ, ರಂಗಯ್ಯ, ಗಂಗಮ್ಮ, ಶಂಕರ್, ಶಾಂತಕುಮಾರ್, ಲಕ್ಷ್ಮಯ್ಯ, ಶಿವಣ್ಣ, ರಾಜೇಶ್‌ ಇದ್ದರು.