ಹಣ, ಹೆಂಡ ಹಂಚಿದರೂ ನನ್ನ ಕೈ ಹಿಡಿದ ಜನತೆ: ಜೋಶಿ

| Published : Jun 05 2024, 12:30 AM IST

ಸಾರಾಂಶ

ದೇಶದಲ್ಲಿ ಕಳೆದ ಬಾರಿಗಿಂತ ಈ ಬಾರಿ ನಮಗೆ ಕಡಿಮೆ ಸ್ಥಾನಗಳು ಬಂದಿರುವುದು ನಿಜ. ಆದರೆ, ಅಧಿಕಾರದ ಗದ್ದುಗೆ ಹಿಡಿಯಲಿದ್ದೇವೆ. ಒಟ್ಟಾರೆಯಾಗಿ ದೇಶದ ಜನತೆ ಎನ್‌ಡಿಎಗೆ ಆಶೀರ್ವಾದ ಮಾಡಿದ್ದಾರೆ ಎಂದು ಪ್ರಹ್ಲಾದ ಜೋಶಿ ಹೇಳಿದರು.

ಧಾರವಾಡ:

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸತತ ಐದನೇ ಬಾರಿಗೆ ಗೆಲವು ಸಾಧಿಸಿದ ಪ್ರಹ್ಲಾದ ಜೋಶಿ ತಮ್ಮನ್ನು ಗೆಲ್ಲಿಸಿದ ಕ್ಷೇತ್ರದ ಜನತಾ ಜನಾರ್ಧನನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇಲ್ಲಿಯ ಕೃಷಿ ವಿವಿ ಆವರಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಎಲ್ಲ ನಾಯಕರು ಹಾಗೂ ಕಾರ್ಯಕರ್ತರು ನನ್ನ ಗೆಲುವಿಗೆ ಸಕ್ರಿಯರಾಗಿ ಶ್ರಮಿಸಿದ್ದಾರೆ. ಕ್ಷೇತ್ರದಲ್ಲಿ ನನ್ನ ಸೋಲಿಸುವ ಉದ್ದೇಶದಿಂದ ಅಪಪ್ರಚಾರದ ಪರಾಕಾಷ್ಠೆ ನಡೆಯಿತು. ಕಾಂಗ್ರೆಸ್ಸಿನವರು ತಮ್ಮ ಪಕ್ಷದ ಬಗ್ಗೆ ಪ್ರಚಾರ ಮಾಡದೇ, ನನ್ನ ಬಗ್ಗೆ ಅಪಪ್ರಚಾರ ಮಾಡಿದರು. ಅವರು ಅಭಿವೃದ್ಧಿ ಕೆಲಸಗಳ ಬಗ್ಗೆ ಯಾವುದೇ ಚರ್ಚೆ ಮಾಡಲಿಲ್ಲ, ದೇಶದ ಅಭಿವೃದ್ಧಿ ಕಾರ್ಯದ ಕುರಿತು ಚಕಾರ ಎತ್ತಲಿಲ್ಲ. ಕೇವಲ ಅಪಪ್ರಚಾರ ಮಾಡಿ, ಹಣ-ಹೆಂಡ ಹಂಚಿದರೂ ಸಹ ಕ್ಷೇತ್ರದ ಮತದಾರರು ನನ್ನನ್ನು ಕೈ ಹಿಡಿದಿದ್ದಾರೆ ಎಂದರು.

ಆತ್ಮವಿಮರ್ಶೆ:

ಒಟ್ಟಾರೆಯಾಗಿ ದೇಶದಲ್ಲಿ ಕಳೆದ ಬಾರಿಗಿಂತ ಈ ಬಾರಿ ನಮಗೆ ಕಡಿಮೆ ಸ್ಥಾನಗಳು ಬಂದಿರುವುದು ನಿಜ. ಆದರೆ, ಅಧಿಕಾರದ ಗದ್ದುಗೆ ಹಿಡಿಯಲಿದ್ದೇವೆ. ಒಟ್ಟಾರೆಯಾಗಿ ದೇಶದ ಜನತೆ ಎನ್‌ಡಿಎಗೆ ಆಶೀರ್ವಾದ ಮಾಡಿದ್ದಾರೆ. ನಮ್ಮ ನಿರೀಕ್ಷೆಯಂತೆ ಸ್ಥಾನಗಳು ಬಂದಿಲ್ಲ‌, ಯಾವ ಕ್ಷೇತ್ರದಲ್ಲಿ ಏಕೆ ಕಡಿಮೆ ಬಂದಿವೆ ಎಂದು ಗುರುತಿಸಿ ಪಕ್ಷದ ವರಿಷ್ಠರೊಂದಿಗೆ ಸೇರಿ ಚರ್ಚೆ ನಡೆಸಿ ಅಲ್ಲಿ ಆಗಿರುವ ತಪ್ಪಿನ ಕುರಿತು ಆತ್ಮ ವಿಮರ್ಶೆ ಮಾಡಿಕೊಳ್ಳಲಾಗುವುದು. ನರೇಂದ್ರ ಮೋದಿ ಅವರ ಚಾರ್ ಸೌ ಪಾರ್ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ಈ ಕುರಿತು ಪಕ್ಷದ ರಾಷ್ಟ್ರೀಯ ನಾಯಕರ ಜತೆ ಸೇರಿ ಚರ್ಚೆ ಮಾಡಲಾಗುವುದು ಎಂದರು.

ನಿರೀಕ್ಷೆಗೆ ತಕ್ಕಂತೆ ಮತಗಳು ಬರಲಿಲ್ಲ:

ನನ್ನ ಕ್ಷೇತ್ರದಲ್ಲಿ ಹೆಚ್ಚಿನ ಮತಗಳ ಅಂತರದಿಂದ ನಾನು ಗೆಲುವು ಸಾಧಿಸುವ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ, ಕ್ಷೇತ್ರದಲ್ಲಿ ನಾನು ನಿರೀಕ್ಷಿಸಿದಷ್ಟು ಮತಗಳು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಕೆಲವು ಕಡೆಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಮತಗಳು ಬಂದಿಲ್ಲ. ಈ ಕುರಿತು ಸಂಪೂರ್ಣ ಮಾಹಿತಿ ಪಡೆಯುವೆ. ಒಟ್ಟಾರೆಯಾಗಿ ಶೇ. 51 ರಷ್ಟು ಮತ ತಮಗೆ ಬಂದಿವೆ ಎಂದರೆ ಗೆಲುವು ಗೆಲುವೇ ಎಂದರು.

ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ:

ಅಭಿವೃದ್ಧಿ ದೃಷ್ಟಿಯಿಂದ ಮತ್ತೆ ಈ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಹು-ಧಾ ಸಮಗ್ರ ಅಭಿವೃದ್ಧಿ ಜತೆಗೆ ಮಲಪ್ರಭಾ ಕುಡಿಯುವ ನೀರನ್ನು ಜಿಲ್ಲೆಗೆ ಒದಗಿಸುವ ಯೋಜನೆ ಈಗಾಗಲೇ ಆರಂಭವಾಗಿದ್ದು, ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು‌‌. ಹು-ಧಾ 24 ಗಂಟೆ ನೀರು ಪೂರೈಕೆ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸುವುದರೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಜೋಶಿ ಭರವಸೆ ವ್ಯಕ್ತಪಡಿಸಿದರು.

ಹೈಕಮಾಂಡ್‌ಗೆ ಬಿಟ್ಟ ವಿಷಯ:

ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮೇಲೆ ನಂಬಿಕೆ ಇಟ್ಟು ಸಂಪೂರ್ಣ ಐದು ವರ್ಷಗಳ ಕಾಲ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ಜವಾಬ್ದಾರಿ ನೀಡಿದ್ದರು. ಅದರಂತೆ ನಾನು ಯಶಸ್ವಿಯಾಗಿ ಕಾರ್ಯನಿರ್ವಹಿಸಿರುವ ತೃಪ್ತಿ ನನಗಿದೆ. ಈ ಬಾರಿಯೂ ನನ್ನನ್ನು ಕೇಂದ್ರ ಸಚಿವನನ್ನಾಗಿ ಮಾಡುವುದು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷರಿಗೆ ಹಾಗೂ ಹೈಕಮಾಂಡ್ ಗೆ ಬಿಟ್ಟ ವಿಷಯ ಎಂದರು.ದಿಂಗಾಲೇಶ್ವರ ಶ್ರೀಗಳ ಆಶೀರ್ವಾದ:

ಫಕೀರ ದಿಂಗಾಲೇಶ್ವರ ಶ್ರೀಗಳು ದೊಡ್ಡ ಮಠದ ಸ್ವಾಮೀಜಿಗಳು. ನನ್ನ ಬಗ್ಗೆ ಅವರು ನೀಡಿದ ಪ್ರತಿಯೊಂದು ಹೇಳಿಕೆಗಳನ್ನು ನಾನು ಆಶೀರ್ವಾದದ ರೂಪದಲ್ಲಿಯೇ ಸ್ವೀಕರಿಸಿದ್ದೇನೆ. ಹಾಗಾಗಿಯೇ 5ನೇ ಬಾರಿಯೂ ನಾನು ಗೆಲ್ಲಲು ಅವರ ಆಶೀರ್ವಾದವೇ ಕಾರಣ ಎಂದು ಪ್ರಹ್ಲಾದ ಜೋಶಿ ಮಾರ್ಮಿಕವಾಗಿ ನುಡಿದರು.