ಹಬ್ಬದೋಕುಳಿಯಲ್ಲಿ ಮಿಂದೆದ್ದ ಜನತೆ

| Published : Mar 27 2024, 01:04 AM IST

ಸಾರಾಂಶ

ಕೆಲವರು ಸ್ವಇಚ್ಚೆಯಿಂದ ಬಣ್ಣದೋಕುಳಿಯಲ್ಲಿ ಭಾಗವಹಿಸಿದ್ದರೆ, ಬಣ್ಣದಿಂದ ದೂರು ಇರ ಬಯಸಿದವರಿಗೆ ಗೆಳತಿಯರು, ಬಂಧು-ಬಾಂಧವರು ಒತ್ತಾಯದಿಂದ ಬಣ್ಣ ಹಾಕಿದರು

ಗಜೇಂದ್ರಗಡ: ಹೋಳಿ ಹಬ್ಬದ ಪ್ರಯುಕ್ತ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟ ರತಿ ಕಾಮಣ್ಣರಿಗೆ ಪೂಜೆ ಪುನಸ್ಕಾರಗಳೊಂದಿಗೆ ಮಂಗಳವಾರ ರತಿ, ಮನ್ಮಥರ ಮೂರ್ತಿಗಳ ಮೆರವಣಿಗೆ ಹಾಗೂ ಬಣ್ಣದೋಕುಳಿ ಸಂಭ್ರಮದಿಂದ ನಡೆಯಿತು.

ಸಂಸ್ಕೃತಿ, ಸಂಪ್ರದಾಯಗಳ ಪ್ರತೀಕವಾಗಿರುವ ಹೋಳಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವ ಮೂಲಕ ಹಬ್ಬಗಳಿಗೆ ವಿಶೇಷ ಮೆರಗು ನೀಡಿತು. ಯುವಕರು ಹಾಗೂ ಮಹಿಳೆಯರು ರಂಗದೋಕುಳಿಯನ್ನು ಸಂಭ್ರಮದಿಂದ ಆಚರಿಸಿದರು. ಪರಸ್ಪರ ಬಣ್ಣ ಎರಚಿ, ಒಬ್ಬರ ಮುಖ ಇನ್ನೊಬ್ಬರಿಗೆ ಗುರುತಿಸಲಾಗದಷ್ಟು ಬಣ್ಣದಲ್ಲಿ ಮಿಂದೆದ್ದ ಯುವತಿಯರ ಮೋಜಿನಾಟ ಗಮನ ಸೆಳೆಯಿತು.

ಕೆಲವರು ಸ್ವಇಚ್ಚೆಯಿಂದ ಬಣ್ಣದೋಕುಳಿಯಲ್ಲಿ ಭಾಗವಹಿಸಿದ್ದರೆ, ಬಣ್ಣದಿಂದ ದೂರು ಇರ ಬಯಸಿದವರಿಗೆ ಗೆಳತಿಯರು, ಬಂಧು-ಬಾಂಧವರು ಒತ್ತಾಯದಿಂದ ಬಣ್ಣ ಹಾಕಿದರು. ಯುವತಿಯರು, ಮಕ್ಕಳು ಪರಸ್ಪರ ಬಣ್ಣ ಎರಚಿ, ಹಲಗೆ ಬಾರಿಸುವ ಮೂಲಕ ಸಂತಸಪಟ್ಟರು. ಸೌಹಾರ್ದತೆಗೆ ಹೆಸರಾದ ಬಣ್ಣದ ರಂಗುರಂಗಿನ ಹೋಳಿಯಲ್ಲಿ ಹಿಂದು, ಮುಸ್ಲಿಂ, ಸರ್ವ ಸಮಾಜ ಬಾಂಧವರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ರತಿ-ಕಾಮಣ್ಣನಿಗೆ ವಿಶೇಷ ಉಡಿಗೆ-ತೊಡಿಗೆ ಮೂಲಕ ಅಲಂಕರಿಸಿ ಭಕ್ತರು ತಮ್ಮ ಬೇಡಿಕೆಗಳನ್ನು ಸಲ್ಲಿಸುವ ಮೂಲಕ ಟ್ರ್ಯಾಕ್ಟರ್ ನಲ್ಲಿ ರತಿ-ಮನ್ಮಥರನ್ನು ಕುಳ್ಳಿರಿಸಿ, ವೇಷಧರಿಸಿದ ಗಂಡು ಮಕ್ಕಳು, ಗೂಟಕ್ಕೆ ಬಡಿದ ಕೃತಕ ಶವದ ಮುಂದೆ ಬೊಬ್ಬೆ ಹಾಕಿ ಅತ್ತು, ಬಾಯಿ ಬಡಿದುಕೊಂಡು ಮನರಂಜಿಸುವುದು ಹೋಳಿ ಹಬ್ಬದ ಒಂದು ವಿಶೇಷವಾಗಿತ್ತು.

ಕಳೆದ ಶಿವರಾತ್ರಿ ಅಮವಾಸ್ಯೆ ನಂತರ ಆಕಾಶದಲ್ಲಿ ಚಂದಿರ ಕಂಡಾಗ ಚಿಕ್ಕ ಮಕ್ಕಳು, ಯುವಕರು ತಂಡ ತಂಡವಾಗಿ ಹಲಗೆ ಬಾರಿಸುತ್ತಾ, ಕೃತಕ ಶವ ಮಾಡಿ ಶವದ ಹೆಸರಿನಲ್ಲಿ ಆಡ್ಯಾಡಿಕೊಂಡು ಅಳುತ್ತಾ ಬಾಯಿ, ಬಾಯಿ ಬಡೆದುಕೊಳ್ಳುತ್ತಾರೆ. ಹೀಗೆ ೧೫ ದಿವಸಗಳ ಕಾಲ ನಡೆದ ಹೋಳಿ ಆಚರಣೆ ಹುಣ್ಣಿಮೆ ಮರುದಿನ ಪರಸ್ಪರ ಬಣ್ಣ ಎರಚಿ ಸಂಭ್ರಮಿಸುತ್ತಾರೆ. ನಂತರ ಹೂಯ್ಯಕೊಂಡ ಬಾಯಿಗೆ ಹೋಳಿಗೆ ತುಪ್ಪ ಎಂಬ ನಾನುಡಿಯಂತೆ ಮನೆಯಲ್ಲಿ ಹೋಳಿಗೆ ಮಾಡಿಕೊಂಡು ಸವಿ ಭೋಜನ ಸವಿದರು.

ಪಟ್ಟಣದ ಕೊಳ್ಳಿಯವರ ಕತ್ರಿ, ಡೊಳ್ಳಿನವರ ಓಣಿ, ವಾಣಿಪೇಟೆ, ಸಿಂಹಾಸನಪೇಟೆ, ಕಾಗಿಯವರ ಓಣಿ ಮುಂತಾದ ಕಡೆಯಲ್ಲಿ ಪ್ರತಿಷ್ಠಾಪಿಸಿದ ರತಿ, ಮನ್ಮಥರರನ್ನು ಮೆರವಣಿಗೆ ನಡೆದ ಬಳಿಕ ಕಾಮ ದಹನ ನಡೆಸಿದರು.