ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಹಲವಾರು ವರ್ಷದಿಂದ ಸೇವೆ ಕಾಯಮಾತಿಗೆ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಬಿಬಿಎಂಪಿಯ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ಪ್ರಕ್ರಿಯೆ ಚುರುಕುಗೊಂಡಿದ್ದು, ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟಂಬರ್ ಮೊದಲ ವಾರದಲ್ಲಿ ನೇಮಕಾತಿಯ ಕರಡು ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಬಿಬಿಎಂಪಿಯ 3,673 ಪೌರ ಕಾರ್ಮಿಕರ ಹುದ್ದೆಗಳು ಸೇರಿದಂತೆ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳ 11,133 ಪೌರಕಾರ್ಮಿಕರ ನೇಮಕ ಸಂಬಂಧ ನಿಯಮ ರೂಪಿಸಿ, ಅರ್ಜಿ ಆಹ್ವಾನಿಸಿ ತಾತ್ಕಾಲಿಕ ನೇಮಕಾತಿ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆದರೆ, ಬಿಬಿಎಂಪಿಯ ಗುತ್ತಿಗೆ ಪೌರಕಾರ್ಮಿಕರು ಏಕಕಾಲಕ್ಕೆ ಎಲ್ಲರನ್ನು ಕಾಯಂಗೊಳಿಸಬೇಕೆಂದು ಪಟ್ಟುಹಿಡಿದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಎರಡನೇ ಹಂತದಲ್ಲಿ 11,307 ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು.
ಕಳೆದ ಮೇ15ರವರೆಗೆ ಎರಡನೇ ಹಂತದ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು,ಒಟ್ಟು 15 ಸಾವಿರ ಅರ್ಜಿ ಸಲ್ಲಿಕೆಯಾಗಿದ್ದು, ಮುಂದಿನ 10 ದಿನದಲ್ಲಿ ಅರ್ಜಿ ಪರಿಶೀಲನಾ ಕಾರ್ಯ ಪೂರ್ಣಗೊಳ್ಳಲಿದೆ. ಬಳಿಕ ನೇಮಕಾತಿ ಸಂಬಂಧ ಮೀಸಲಾತಿಗೆ ಅನುಗುಣವಾಗಿ ಕರಡು ಪಟ್ಟಿ ಬಿಡುಗಡೆ ಮಾಡಲಾಗುವುದು.
ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು 15-30 ದಿನ ಕಾಲಾವಕಾಶ ನೀಡಲಾಗುವುದು. ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ತಿದ್ದುಪಡಿ ಮಾಡಿ ಅಂತಿಮವಾಗಿ ಪೌರಕಾರ್ಮಿಕರ ನೇಮಕಾತಿ ಪಟ್ಟಿ ಬಿಡುಗಡೆ ಮಾಡಲಾಗುವುದು. ಇದಾದ ಒಂದು ತಿಂಗಳಲ್ಲಿ ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ಬಿವಿಎಂಪಿ ಆಡಳಿತ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸರ್ಕಾರದ ನಿಗದಿ ಪಡಿಸಿದ ನಿಯಮ ಪ್ರಕಾರ ಅರ್ಹರ ಆಯ್ಕೆಗೆ ಸರ್ಕಾರ ಬಿಬಿಎಂಪಿ ಮುಖ್ಯಆಯುಕ್ತರ ಅಧ್ಯಕ್ಷತೆಯಲ್ಲಿ 10 ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿದೆ. ಕಾಯಂಗೊಂಡ ಪೌರಕಾರ್ಮಿಕರಿಗೆ 17 ಸಾವಿರ ರು.ನಿಂದ 28,950 ರು. ವರೆಗೆ ವೇತನ ನಿಗದಿ ಪಡಿಸಲಾಗಿದೆ.
ಎರಡೂ ನೇಮಕಾತಿ ಒಟ್ಟಿಗೆ ಪ್ರಕಟ
ಗುತ್ತಿಗೆ ಪೌರಕಾರ್ಮಿಕರು ಹಾಗೂ ಪೌರಕಾರ್ಮಿಕರ ಸಂಘಟನೆಗಳು 3,673 ಹುದ್ದೆಯ ನೇಮಕಾತಿ ಅಂತಿಮ ಪಟ್ಟಿ ಹಾಗೂ ಇದೀಗ ಅರ್ಜಿ ಆಹ್ವಾನಿಸಿರುವ 11,703 ಹುದ್ದೆಯ ಅಂತಿಮ ಪಟ್ಟಿಯನ್ನು ಒಂದೇ ಮಾದರಿಯಲ್ಲಿ ಮಾಡಬೇಕು. ಜತೆಗೆ, ಏಕ ಕಾಲಕ್ಕೆ ಅಂತಿಮ ಪಟ್ಟಿ ಪ್ರಕಟ ಪಡಿಸಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿದ್ದು, ಎರಡು ನೇಮಕಾತಿಗೆ ಸಂಬಂಧಿಸಿದ ಕರಡು ಪಟ್ಟಿಯನ್ನು ಒಟ್ಟಿಗೆ ಬಿಡುಗಡೆ ಮಾಡಲು ಬಿಬಿಎಂಪಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಗೊಂದಲ ನಿವಾರಣೆಗೆ ಚರ್ಚೆ
ನೇಮಕಾತಿಗೆ ಸಂಬಂಧಿಸಿದಂತೆ ಬಿಬಿಎಂಪಿ ಕೆಲವು ಸಂಘಟಗಳು ಸಮಸ್ಯೆ ಮತ್ತು ಗೊಂದಲದ ಬಗ್ಗೆ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಈಗಾಗಲೇ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಈ ಎಲ್ಲ ಅಂಶಗಳನ್ನು ಒಳಗೊಂಡದಂತೆ ನೇಮಕಾತಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.
ಬಿಬಿಎಂಪಿ ಪೌರಕಾರ್ಮಿಕರ ನೇಮಕಾತಿ ಸಂಖ್ಯೆ ವಿವರ
ನೇಮಕಾತಿ ಹಂತನೇಮಕಾತಿ ಸಂಖ್ಯೆ
ನೇಮಕಾತಿ ಹಂತ-13,673
ನೇಮಕಾತಿ ಹಂತ-211,307
ಒಟ್ಟು14,980