ವೈಜ್ಞಾನಿಕ ಸಾಧನೆಯಲ್ಲಿ ವಿಜ್ಞಾನಿಗಳ ಪರಿಶ್ರಮ ಅನನ್ಯ: ಮುನಿಯಪ್ಪ
KannadaprabhaNewsNetwork | Published : Oct 15 2023, 12:45 AM IST
ವೈಜ್ಞಾನಿಕ ಸಾಧನೆಯಲ್ಲಿ ವಿಜ್ಞಾನಿಗಳ ಪರಿಶ್ರಮ ಅನನ್ಯ: ಮುನಿಯಪ್ಪ
ಸಾರಾಂಶ
ದೊಡ್ಡಬಳ್ಳಾಪುರ: ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತ ಜಗತ್ತಿನ ಅಗ್ರ ರಾಷ್ಟ್ರಗಳ ಸಾಲಿನಲ್ಲಿ ಗುರ್ತಿಸಿಕೊಳ್ಳುವ ಸಾಧನೆಯಲ್ಲಿ ವಿಜ್ಞಾನಿಗಳ ಕೊಡುಗೆ ಮಹತ್ವದ್ದು ಎಂದು ಬೆಂ.ಗ್ರಾ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ದೊಡ್ಡಬಳ್ಳಾಪುರ: ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತ ಜಗತ್ತಿನ ಅಗ್ರ ರಾಷ್ಟ್ರಗಳ ಸಾಲಿನಲ್ಲಿ ಗುರ್ತಿಸಿಕೊಳ್ಳುವ ಸಾಧನೆಯಲ್ಲಿ ವಿಜ್ಞಾನಿಗಳ ಕೊಡುಗೆ ಮಹತ್ವದ್ದು ಎಂದು ಬೆಂ.ಗ್ರಾ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ದೊಡ್ಡಬಳ್ಳಾಪುರದಲ್ಲಿ ಭಾನುವಾರ ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ತು ಆಯೋಜಿಸಿದ್ದ ನಾಯಕತ್ವ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ದಾನಿ ರವಿ ಬಿಳಿಶಿವಾಲೆ ಅವರು ದಾನವಾಗಿ ನೀಡಿದ 10 ಎಕರೆ ಜಮೀನನ್ನು ಪರಿಷತ್ತಿಗೆ ಹಸ್ತಾಂತರಿಸಿ ಮಾತನಾಡಿದರು. ದೇವರ ಹೆಸರಿನಲ್ಲಿ ಜನರನ್ನು ಹೆದರಿಸುವ ಪರಿಪಾಠ ಸಲ್ಲದು. ಮೌಢ್ಯದ ಹೆಸರಿನಲ್ಲಿ ಸಮಾಜವನ್ನು ದಾರಿ ತಪ್ಪಿಸುವ ಕೆಲಸವೂ ಒಪ್ಪಿತವಲ್ಲ. ದೇವರು ಎಂಬ ನಂಬಿಕೆ ಅನೇಕರಲ್ಲಿ ಹೊಸ ಸ್ಪೂರ್ತಿಗೆ ಕಾರಣವಾಗಬೇಕು. ಜನರು ಮೌಢ್ಯಗಳಿಂದ ಹೊರಬಂದು ಮಾನವತಾವಾದವನ್ನು ಬೆಳಸಿಕೊಳ್ಳಬೇಕಾಗಿದೆ. ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಬೇಕಾಗಿದೆ. ಆಧುನಿಕ ಕಾಲಘಟ್ಟದಲ್ಲಿ ನವ ಸಮಾಜವನ್ನು ನಿರ್ಮಾಣ ಮಾಡುವ ಹಂತದಲ್ಲಿ ಸಂಘಟನೆಗಳು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು. ಮನಸ್ಸುಗಳನ್ನು ಒಂದಾಗಿಸಬೇಕು. ಅರಿವಿನ ಕಣ್ಣನ್ನು ತೆರೆಸಬೇಕು. ಸಮಾಜವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಾಮಾಜಿಕವಾಗಿ ಸಮಾನತೆಯ ಆಶಯಕ್ಕೆ ಪೂರಕವಾಗಿ ನಿರ್ಮಾಣ ಮಾಡಬೇಕಾಗಿದೆ ಎಂದರು. ಪ್ರತಿ ಮಗುವೂ ವಿಜ್ಞಾನಿಯೇ: ಡಾ.ಎ.ಎಸ್.ಕಿರಣ್‌ಕುಮಾರ್ ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್‌ಕುಮಾರ್ ಮಾತನಾಡಿ, ಪ್ರತಿಯೊಬ್ಬ ಮಗುವು ಸಹ ಒಬ್ಬ ಶ್ರೇಷ್ಠ ವಿಜ್ಞಾನಿಯಾಗಿರುತ್ತಾನೆ. ವಿಜ್ಞಾನ ಕ್ಷೇತ್ರದಲ್ಲಿ ಭಾರತ ದೇಶ ಜಗತ್ತಿನ ನೇತೃತ್ವವನ್ನು ವಹಿಸುತ್ತಿದೆ. ಭಾರತ ದೇಶದ ಅತ್ಯಂತ ದೊಡ್ಡ ಸಾಧನೆ ಇತ್ತೀಚಿಗೆ ಚಂದ್ರನೆಡೆಗೆ ಸಾಗಿ ಅಲ್ಲಿಯೂ ಸಹ ಸಂಶೋಧನೆ ನಡೆಸಿದ ಹೆಗ್ಗಳಿಕೆ ನಮ್ಮದಾಗಿದೆ. ಪ್ರಪಂಚದಲ್ಲಿ ಯಾವ ದೇಶಗಳು ಮಾಡದೆ ಸಾಧನೆಯನ್ನು ಭಾರತ ನಡೆಸಿದೆ. ಈ ಸಾಧನೆಗೆ ಪ್ರಮುಖವಾದ ಕಾರಣ ನಮ್ಮಲ್ಲಿರುವ ಕುತೂಹಲವಾಗಿದೆ ಎಂದರು. ಮಕ್ಕಳಲ್ಲಿ ವೈಜ್ಞಾನಿಕ ಆಸಕ್ತಿ ವೃದ್ದಿಸಲಿ: ಸ್ವಾತಂತ್ರ್ಯ ದೊರಕಿದ ಸಂದರ್ಭದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆಹಾರ, ಶಿಕ್ಷಣ ಹಾಗೂ ವಸತಿಯಂತಹ ಅನೇಕ ಸಮಸ್ಯೆಗಳು ದೇಶವನ್ನು ಆವರಿಸಿತ್ತು, ನಿಧಾನವಾಗಿ ದೇಶದಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ರೀತಿಯಲ್ಲಿ ಆಧ್ಯತೆ ನೀಡುವ ಮೂಲಕ ವಿಜ್ಞಾನವನ್ನು ಬೆಳೆಸುವ ಕಾರ್ಯ ನಡೆಯುತ್ತಿದೆ. ಸಮಾಜದ ಬೆಳವಣಿಗೆಗೆ ಈ ವಿಜ್ಞಾನ ಬೇಕಾಗಿದೆ, ಇಂದು ಎಲ್ಲಾ ಕ್ಷೇತ್ರಗಳಲ್ಲೂ ವಿಜ್ಞಾನ ಆವರಿಸಿದೆ. ತಂತ್ರಜ್ಞಾನದ ಬಳಕೆಯಿಂದ ಅಭಿವೃದ್ದಿಯ ಕಾರ್ಯ ವೇಗವಾಗಿ ನಡೆಯುತ್ತಿದೆ, ವೈಜ್ಞಾನಿಕ ಪ್ರಜ್ಞೆಯನ್ನು ಪ್ರತಿಯೊಬ್ಬರಲ್ಲೂ ಬೆಳೆಸುವ ಕಾರ್ಯ ಆಗಬೇಕಾಗಿದೆ. ವಿಜ್ಞಾನದಲ್ಲಿ ಕುತೂಹಲ, ಆಸಕ್ತಿ, ಪ್ರಶ್ನೆ ಮಾಡುವುದಾಗಿದೆ. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಮೂಡಿಸುವ ಮೂಲಕ ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಧೀರಜ್ ಮುನಿರಾಜ್, ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್, ಡಾ.ಹುಲಿಕಲ್ ನಟರಾಜ್, ಡಾ.ಸಿ.ಸೋಮಶೇಖರ್ ಮತ್ತಿತರರು ಪಾಲ್ಗೊಂಡಿದ್ದರು. 14ಕೆಡಿಬಿಪಿ4- ದೊಡ್ಡಬಳ್ಳಾಪುರದಲ್ಲಿ ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ತು ಆಯೋಜಿಸಿದ್ದ ನಾಯಕತ್ವ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಜ್ಞಾನ ಗ್ರಾಮದ ನೀಲನಕ್ಷೆ ಅನಾವರಣಗೊಳಿಸಲಾಯಿತು.