ವಚನ ಸಾಹಿತ್ಯದಲ್ಲಿರುವ ತತ್ವಾದರ್ಶ ಯುವಪೀಳಿಗೆಗೆ ಅವಶ್ಯ

| Published : Nov 14 2025, 01:45 AM IST

ಸಾರಾಂಶ

12ನೇ ಶತಮಾನದಲ್ಲಿ ರಚನೆಯಾದ ವಚನಗಳು ಮಾನವ ಕುಲಕ್ಕೆ ದಾರಿದೀಪಗಳಾಗಿವೆ. ಶರಣರ ವಚನಗಳಲ್ಲಿ ಜೀವನದ ಎಲ್ಲ ಸಮಸ್ಯೆಗಳಿಗೂ ಸೂಕ್ತ ಪರಿಹಾರವಿದೆ. ಇಂತಹ ಶ್ರೇಷ್ಠ ವಚನಗಳನ್ನು ನಿರ್ಲಕ್ಷಿಸದೆ ವಚನದ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಬದುಕಿನಲ್ಲಿ ಸಾರ್ಥಕತೆ ಪಡೆಯುವಂತೆ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶಪ್ಪ.ಕೆ.ಬಿ ಕರೆ ನೀಡಿದರು.

ಶಿಕಾರಿಪುರ: 12ನೇ ಶತಮಾನದಲ್ಲಿ ರಚನೆಯಾದ ವಚನಗಳು ಮಾನವ ಕುಲಕ್ಕೆ ದಾರಿದೀಪಗಳಾಗಿವೆ. ಶರಣರ ವಚನಗಳಲ್ಲಿ ಜೀವನದ ಎಲ್ಲ ಸಮಸ್ಯೆಗಳಿಗೂ ಸೂಕ್ತ ಪರಿಹಾರವಿದೆ. ಇಂತಹ ಶ್ರೇಷ್ಠ ವಚನಗಳನ್ನು ನಿರ್ಲಕ್ಷಿಸದೆ ವಚನದ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಬದುಕಿನಲ್ಲಿ ಸಾರ್ಥಕತೆ ಪಡೆಯುವಂತೆ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶಪ್ಪ.ಕೆ.ಬಿ ಕರೆ ನೀಡಿದರು.

ಪಟ್ಟಣದ ಭವಾನಿರಾವ್‌ ಕೇರಿಯಲ್ಲಿನ ಮೈತ್ರಿ ಪ್ರಾಥಮಿಕ ಶಾಲೆ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ನಡೆದ ತಾಲೂಕು ಮಟ್ಟದ ಪ್ರೌಢಶಾಲೆಗಳ ವಚನ ಪ್ರತಿಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಾತಿ, ಮೌಢ್ಯ, ಗೊಡ್ಡು ಸಂಪ್ರದಾಯದ ಅಂಧಕಾರದ ಉಚ್ಚ್ರಾಯ ಸ್ಥಿತಿಯಲ್ಲಿದ್ದ 12ನೇ ಶತಮಾನದಲ್ಲಿ ಸಮಾಜವನ್ನು ಸರಿದಾರಿಗೆ ತರುವಲ್ಲಿ ಶಿವಶರಣರ ಕೊಡುಗೆ ಬಹು ಮಹತ್ವದ್ದಾಗಿದ್ದು, ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿನ ಲೋಪವನ್ನು ತಿದ್ದಲು ಹಲವು ಶ್ರೇಷ್ಠ ವಚನಕಾರರು ರಚಿಸಿದ ವಚನಗಳು ಮನುಕುಲದ ಪ್ರಗತಿಗೆ ದಾರಿದೀಪವಾಗಿದೆ. ವಚನ ಸಾಹಿತ್ಯದಲ್ಲಿರುವ ತತ್ವ ಆದರ್ಶಗಳು ಇಂದಿನ ಯುವಪೀಳಿಗೆಗೆ ಅಗತ್ಯವಾಗಿದೆ ಎಂದರು. ಪ್ರಸ್ತುತ ಸಮಾಜದಲ್ಲಿನ ಹಲವು ಸಮಸ್ಯೆಗಳಿಗೆ ವಚನ ಸಾಹಿತ್ಯ ಸೂಕ್ತ ಪರಿಹಾರ ನೀಡಲಿದ್ದು, ವಚನದ ಮೂಲಕ ಜೀವನದಲ್ಲಿ ಪ್ರಬುದ್ಧತೆ ಸಾಧಿಸಲು ಸಾಧ್ಯವಾಗಲಿದೆ. ವಚನ ಸಾಹಿತ್ಯವನ್ನು ಸಂಗೀತದ ಮೂಲಕ ಜನರಿಗೆ ತಿಳಿಸುವುದರಿಂದ ವಚನ ಸಾಹಿತ್ಯವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯ ಎಂದರು. ಕುಮದ್ವತಿ ಪ್ರೌಢಶಾಲೆಯ ಪ್ರಾಚಾರ್ಯ ವಿಶ್ವನಾಥ.ಪಿ ಮಾತನಾಡಿ, ವಚನಗಳು ಮನುಷ್ಯನ ಸುಖಮಯ ಜೀವನಕ್ಕೆ, ಆಧ್ಯಾತ್ಮಕ್ಕೆ, ಜ್ಞಾನ ಸಂಪತ್ತಿಗೆ, ಸಾಮಾಜಿಕ, ಸೌಹಾರ್ದ, ಸಾಮರಸ್ಯದ ಬೆಳವಣಿಗೆ ಜತೆಗೆ ದೇಶದ ಪ್ರಗತಿಗೆ ಸಂಜೀವಿನಿಯಾಗಿವೆ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಕೆ.ಶಶಿಧರ ಸ್ವಾಮಿ ಕಣಿವೆಮನೆ ಮಾತನಾಡಿ, 12ನೇ ಶತಮಾನದಲ್ಲಿ ಏಕಕಾಲಕಕ್ಕೆ ಅನೇಕ ಶರಣರು ಒಂದೇ ಕಡೆ ಇದ್ದು ವಚನ ಸಾಹಿತ್ಯವನ್ನು ರಚಿಸಿ ಜಗತ್ತಿನ ಕಲ್ಯಾಣಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅದು ಕಲ್ಯಾಣ ಕ್ರಾಂತಿಯಾಗಿ ಇತಿಹಾಸದಲ್ಲಿ ಪ್ರಸಿದ್ಧವಾಗಿದ್ದು, ಇಂತಹ ವಚನ ಸಾಹಿತ್ಯದ ಉತ್ಸವ ಆಚರಿಸುವುದೆಂದರೆ ಸಾಮಾಜಿಕ ಚೈತನ್ಯದ ಪುನರ್ ಜಾಗೃತಿಯ ಕಾರ್ಯವಾಗಿದೆ. ಈ ಮೂಲಕ ನಮ್ಮನ್ನು ನಾವು ಜೀವಂತವಾಗಿರಿಸಿಕೊಳ್ಳುವುದಾಗಿದೆ ಎಂದರು. ತಾ. ಶರಣ ಸಾಹಿತ್ಯ ಪರಿಷತ್ ಪ್ರ.ಕಾ ಜಿ.ಎಮ್.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕದಳಿ ವೇದಿಕೆ ಅಧ್ಯಕ್ಷೆ ಮತ್ತು ದತ್ತಿ ದಾನಿ ಕಾಂಚನ ಕುಮಾರ್, ತಾ.ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಸೋಮಶೇಖರ್ ಗಟ್ಟಿ, ಕ್ರೇತ ಸಂಪನ್ಮೂಲ ಕಚೇರಿಯ ಕೋಟ್ರೇಶಪ್ಪ, ಚಂದ್ರಶೇಖರ್ ಸೂರಹೊನ್ನೆ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಪ್ರಶಾಂತ ಕುಬಸದ ಸ್ವಾಗತಿಸಿದರು. ಲಲಿತ ನಿರೂಪಿಸಿದರು. ಚಂದ್ರಕಲಾ ವಂದಿಸಿದರು.