ದೈಹಿಕವಾಗಿ ಅಸಮರ್ಥರು ಸಮಾಜದ ಭಾಗ-ಶಾಸಕ ಶಿವಣ್ಣನವರ

| Published : Oct 14 2024, 01:27 AM IST

ಸಾರಾಂಶ

ದೈಹಿಕವಾಗಿ ಅಸಮರ್ಥರಿಗೆ ಸಹಾಯ ಮತ್ತು ಸಹಕಾರ ಸಲ್ಲಿಸುವುದರಿಂದ ಗೌರವ ಹೆಚ್ಚಾಗಲಿದೆ. ಅವರ ಸಂಖ್ಯೆ ಕಡಿಮೆಯಿದ್ದರೂ ಅವರೂ ಸಹ ಸಮಾಜದ ಭಾಗವಾಗಿದ್ದಾರೆ. ಹೀಗಾಗಿ ಅಂತಹವರ ವಿಷಯದಲ್ಲಿ ಸರ್ಕಾರ ಎಂದಿಗೂ ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದಿಲ್ಲ ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ದೈಹಿಕವಾಗಿ ಅಸಮರ್ಥರಿಗೆ ಸಹಾಯ ಮತ್ತು ಸಹಕಾರ ಸಲ್ಲಿಸುವುದರಿಂದ ಗೌರವ ಹೆಚ್ಚಾಗಲಿದೆ. ಅವರ ಸಂಖ್ಯೆ ಕಡಿಮೆಯಿದ್ದರೂ ಅವರೂ ಸಹ ಸಮಾಜದ ಭಾಗವಾಗಿದ್ದಾರೆ. ಹೀಗಾಗಿ ಅಂತಹವರ ವಿಷಯದಲ್ಲಿ ಸರ್ಕಾರ ಎಂದಿಗೂ ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದಿಲ್ಲ ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಪಂಚಾಯತ್ ಆವರಣದಲ್ಲಿ ವಿಶೇಷ ಚೇತನರ ಜಿಲ್ಲಾ ಕಲ್ಯಾಣಾಧಿಕಾರಿಗಳ ಇಲಾಖೆ ವತಿಯಿಂದ ಸ್ವಯಂ ಚಾಲಿತ ಬೈಕ್ ವಿತರಿಸಿ ಅವರು ಮಾತನಾಡಿದರು. ವಿಶೇಷ ಚೇತನರು ದೈಹಿಕ ಇತಿಮಿತಿ ಹೊಂದಿದ್ದು ತಮ್ಮ ದೈನಂದಿನ ಬದುಕಿನ ಅಗತ್ಯತೆ ಮತ್ತು ಉದ್ಯೋಗ ನಿರ್ವಹಣೆ ಮಾಡಲು ಬೇರೋಬ್ಬರನ್ನು ಅವಲಂಬಿಸುವುದು ಬೇಡ. ಹೀಗಾಗಿ ಸ್ವಯಂ ಚಾಲಿತ ಮೋಟರ್ ಸೈಕಲ್ ಗಳನ್ನು ನೀಡುತ್ತಿರುವುದಾಗಿ ತಿಳಿಸಿದರು.

ವಿಶೇಷ ಚೇತನರ ಮಹತ್ವಾಕಾಂಕ್ಷೆಗಳು ಸಹಜ ಮಾನವರಂತೆಯೇ ಇರುತ್ತದೆ, ಕರುಣೆ ಮತ್ತು ಸಹಾನುಭೂತಿ ನೋಟವು ಮಹತ್ವಾಕಾಂಕ್ಷೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಜನರು ವಿಶೇಷ ಚೇತನರನ್ನು ಅಪ್ಪಿಕೊಂಡು ಅವರಿಗೆ ಸಹಾಯ ಹಸ್ತ ನೀಡಬೇಕು ಮತ್ತು ಅವರ ಹಕ್ಕುಗಳನ್ನು ರಕ್ಷಿಸುವ ಕಾನೂನು ಹೊಂದಿರಬೇಕು ಮತ್ತು ಗೌರವಿಸಬೇಕು ಆದಾಗ್ಯೂ ವಿಕಲ ಚೇತನರ ಹಕ್ಕುಗಳು ಕೇವಲ ಘೋಷಣೆಗಳಾಗಿ ನಿಲ್ಲಬಾರದು ಎಂದರು.

ವಿಶ್ವದಲ್ಲಿ ಅಂಗವಿಕಲರ ಪ್ರಮಾಣವು ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಶೇ.10ರಿಂದ 15ಕ್ಕೇರಿದ್ದು ಅಂಕಿ ಅಂಶಗಳಿಂದ ತಿಳಿದುಕೊಳ್ಳಬಹುದು, ವಿಶ್ವದ ಜನಸಂಖ್ಯೆಯ ಸುಮಾರು ಶೇ.15 ಪ್ರತಿ ಶತದಷ್ಟು ವಿಕಲಾಂಗರ ಸಂಖ್ಯೆಯಿದ್ದು ಪ್ರಪಂಚದಾದ್ಯಂತ ವಿಕಲಾಂಗತೆಗಳು ಮತ್ತು ದುರ್ಬಲತೆಗಳು ಶತಕೋಟಿ ದಾಟಲಿದೆ ಎಂದರು. ಈ ಸಂದರ್ಭದಲ್ಲಿ ರುದ್ರಣ್ಣ ಹೊಂಣದ, ಸುರೇಶಗೌಡ ಪಾಟೀಲ, ಲಿಂಗರಾಜ ಕುಮ್ಮೂರ, ಜಗದೀಶ ಪೂಜಾರ, ಶಾಂತಪ್ಪ ದೊಡ್ಮನಿ, ಮಲ್ಲಿಕಾರ್ಜುನ ಕರಲಿಂಗಪ್ಪನವರ ಹಾಗೂ ಇನ್ನಿತರರಿದ್ದರು.

ಅನರ್ಹ ಫಲಾನುಭವಿಗೂ ಬೈಕ್, ಶಾಕ್ ಆದ ಶಾಸಕರು: ಸ್ವಯಂಚಾಲಿತ ಬೈಕ್ ವಿತರಣೆ ವೇಳೆ ಎರಡೂ ಕಾಲುಗಳು ಸುಸೂತ್ರವಾಗಿದ್ದು ಕೈಬಲಹೀನತೆ ಇರುವ ವ್ಯಕ್ತಿಯೊಬ್ಬನಿಗೆ ಬೈಕ್ ನೀಡಿದ್ದು ಶಾಸಕ ಬಸವರಾಜ ಶಿವಣ್ಣನವರ ಅವರ ಗಮನಕ್ಕೆ ಬಂದಿತು, ಇದರಿಂದ ಆಕ್ರೋಶಗೊಂಡು ಈ ಸಂದರ್ಭದಲ್ಲಿ ಕಲ್ಯಾಣಾಧಿಕಾರಿ ಆಯೀಷಾ ನದಾಫ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕರು ಇವರನ್ನು ಯಾವ ಆಧಾರದಲ್ಲಿ ಆಯ್ಕೆ ಮಾಡಿದ್ದೀರಿ, ಕಣ್ಮುಚ್ಚಿ ಫಲಾನುಭವಿ ಆಯ್ಕೆ ಮಾಡುವುದಾದರೇ ನೀವೇಕೆ ಬೇಕು ಇದರ ಸಮಗ್ರ ವರದಿ ನೀಡುವಂತೆ ತೀವ್ರ ತರಾಟೆಗೆ ತೆಗೆದುಕೊಂಡರು.ಸ್ವಯಂ ಚಾಲಿತ ಬೈಕ್ ವಿತರಣೆ ಕಾರ್ಯಕ್ರಮದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ, ಅನರ್ಹ ಫಲಾನುಭವಿಗಳು ಇದರಲ್ಲಿದ್ದು ಫಲಾನುಭವಿಗಳ ಆಯ್ಕೆ ವಿಷಯವನ್ನು ಸ್ವತಃ ಶಾಸಕರಿಗೇ ತಿಳಿಯದಂತೆ ಮಾಡಿರುವ ವಿಶೇಷ ಚೇತನರ ಜಿಲ್ಲಾ ಕಲ್ಯಾಣಾಧಿಕಾರಿಗಳಿಂದಲೇ ಇಂತಹ ತಾರತಮ್ಯ ನಡೆದಿದೆ, ಕೆಟ್ಟು ನಿಂತಿರುವ ಬೈಕ್ ವಿತರಿಸಿದ್ದೇ ಇವರ ಸಾಧನೆಯಾಗಿದ್ದು ಮಾನ್ಯ ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು ಎಂದು ‍ವಿಶೇಷ ಚೇತನರ ಸಂಘದ ತಾಲೂಕು ಅಧ್ಯಕ್ಷ ಪಾಂಡು ಸುತಾರ ಹೇಳಿದರು.