ತೆರೆದುಕೊಂಡ ವಿದ್ಯುತ್ ಕಂಬದ ಪ್ಲಾನಲ್ ಬಾಕ್ಸ್, ಜೀವಕ್ಕೆ ಕುತ್ತು

| Published : Dec 14 2023, 01:30 AM IST

ತೆರೆದುಕೊಂಡ ವಿದ್ಯುತ್ ಕಂಬದ ಪ್ಲಾನಲ್ ಬಾಕ್ಸ್, ಜೀವಕ್ಕೆ ಕುತ್ತು
Share this Article
  • FB
  • TW
  • Linkdin
  • Email

ಸಾರಾಂಶ

ಕೆಲವು ದಿನಗಳ ಹಿಂದೆ ಕಡಲ ತೀರದಲ್ಲಿ ಇದೇ ರೀತಿ ಪ್ಲಾನಲ್ ಬಾಕ್ಸ್ ತೆಗೆದುಕೊಂಡು ವೈಯ್ಯರ್ ಹೊರಗೆ ಬಂದಿತ್ತು. ಇದರ ಸ್ಪರ್ಶದಿಂದ ನಾಯಿಯೊಂದು ಮೃತಪಟ್ಟಿತ್ತು.

ಕಾರವಾರ:

ನಗರದ ಪ್ರಮುಖ ರಸ್ತೆಗಳಲ್ಲಿ ಇರುವ ಬೀದಿದೀಪದ ಕಂಬಕ್ಕೆ ಅಳವಡಿಸಲಾದ ಹಲವು ಪ್ಯಾನಲ್ ಬಾಕ್ಸ್‌ ಮುಚ್ಚಳಗಳು ತೆರೆದುಕೊಂಡಿದ್ದು, ಅಪಾಯಕ್ಕೆ ಆಹ್ವಾನಿಸುವಂತಿದೆ.

ಸುಭಾಸ್ ಸರ್ಕಲ್, ಮಲಾದೇವಿ ಕ್ರೀಡಾಂಗಣ, ರವೀಂದ್ರನಾಥ ಟಾಗೋರ ಕಡಲ ತೀರದ ಒಳಗೊಂಡು ಹಲವೆಡೆ ವಿದ್ಯುತ್ ಕಂಬಕ್ಕೆ ಅಳವಡಿಸಲಾದ ಪ್ಯಾನಲ್ ಬಾಕ್ಸ್ ಮುಚ್ಚಳವೇ ಇಲ್ಲ. ಕೆಲವು ಇಲ್ಲಿನ ಉಪ್ಪು ನೀರಿಗೆ ತುಕ್ಕು ಹಿಡಿದು ಹಾಳಾಗಿದ್ದರೆ, ಇನ್ನು ಕೆಲವು ಚೋರರ ಪಾಲಾಗಿದೆ. ಹೈ ವೋಲ್ಟೇಜ್ ವಿದ್ಯುತ್ ಹರಿಯುವುದರಿಂದ ಅಪಾಯಕಾರಿಯಾಗಿದೆ. ವಿದ್ಯುತ್ ಮೀಟರ್, ಡಿಪಿ, ಸ್ವಿಚ್, ವೈಯ್ಯರ್ ಒಳಗೊಂಡು ವಿವಿಧ ವಿದ್ಯುತ್ ಉಪಕರಣಗಳು ಇರುತ್ತವೆ. ಮನುಷ್ಯರು ಅಥವಾ ಜಾನುವಾರುಗಳು ಇದನ್ನು ಸ್ಪರ್ಶಿಸಿದರೆ ಮೃತಪಡುತ್ತಾರೆ. ಕೆಲವು ದಿನಗಳ ಹಿಂದೆ ಕಡಲ ತೀರದಲ್ಲಿ ಇದೇ ರೀತಿ ಪ್ಲಾನಲ್ ಬಾಕ್ಸ್ ತೆಗೆದುಕೊಂಡು ವೈಯ್ಯರ್ ಹೊರಗೆ ಬಂದಿತ್ತು. ಇದರ ಸ್ಪರ್ಶದಿಂದ ನಾಯಿಯೊಂದು ಮೃತಪಟ್ಟಿತ್ತು. ಇದು ಅಪಾಯದ ಕರೆ ಘಂಟೆಯಾಗಿದೆ.ಇಲ್ಲಿನ ಮಾಲಾದೇವಿ ಕ್ರೀಡಾಂಗಣದಲ್ಲಿ ಪ್ರತಿನಿತ್ಯ ಮಕ್ಕಳು ಆಡವಾಡುತ್ತಿರುತ್ತಾರೆ. ಆಕಸ್ಮಿಕವಾಗಿ ತೆರೆದ ಈ ಬಾಕ್ಸ್ ಸ್ಪರ್ಶಿಸಿದರೆ ಅವಘಡ ನಡೆಯುತ್ತದೆ. ಕಡಲ ತೀರದಲ್ಲಿ ಕೂಡಾ ಪ್ರತಿನಿತ್ಯ ಸಂಜೆ ಚಿಕ್ಕಮಕ್ಕಳು ಮರಳಿನಲ್ಲಿ ಆಟವಾಡುತ್ತಿರುತ್ತಾರೆ. ನೂರಾರು ಜನರು ವಾಯುವಿಹಾರಕ್ಕೆ ತೆರಳುತ್ತಾರೆ.ನಗರಸಭೆಯಿಂದಲೇ ಈ ಬಾಕ್ಸ್‌ಗಳ ನಿರ್ವಹಣೆಯಾಗುತ್ತಿದೆ. ಲವಣಾಂಶದಿಂದ ಕೂಡಿರುವ ಗಾಳಿಯಿಂದಾಗಿ ಕಬ್ಬಿಣದ ಈ ಬಾಕ್ಸ್‌ಗಳು ಬೇಗ ಹಾಳಾಗುತ್ತವೆ. ತುಕ್ಕು ಹಿಡಿದು ಬಿದ್ದ ಬಾಕ್ಸ್ ಅಥವಾ ಮುಚ್ಚಳಗಳ ಚೋರರ ಪಾಲಾಗುತ್ತಿದೆ. ಕಾಲಕಾಲಕ್ಕೆ ನಿರ್ವಹಣೆ ಮಾಡಿ ತುಕ್ಕು ಹಿಡಿಯದಂತೆ ಹಾಗೂ ಯಾರೂ ಇದನ್ನು ತೆಗೆದುಕೊಂಡು ಹೋಗದಂತೆ ನಗರಸಭೆ ಅಧಿಕಾರಿಗಳು ಕ್ರಮವಹಿಸಬೇಕಿದೆ. ಅನಾಹುತ ನಡೆಯುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.