ಸಾರಾಂಶ
ಹಾವೇರಿ: ಬೀದರ್, ಮಂಗಳೂರು ಬ್ಯಾಂಕ್ ದರೋಡೆ ಬಳಿಕ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಬ್ಯಾಂಕ್‌ಗಳಲ್ಲಿನ ಲಾಕರ್‌ಗಳಿಗೆ ಇರುವ ಭದ್ರತೆ, ಸಿಸಿಟಿವಿ ನಿರ್ವಹಣೆ, ಎಟಿಎಂಗಳ ಸುರಕ್ಷತೆ ಸೇರಿದಂತೆ ಆಯಾ ಬ್ಯಾಂಕುಗಳು ಕೈಗೊಂಡಿರುವ ಭದ್ರತಾ ಕ್ರಮಗಳನ್ನು ಪರಿಶೀಲಿಸಲು ಮುಂದಾಗಿದೆ.
ಬೀದರ್ ಮತ್ತು ಮಂಗಳೂರಿನ ಕೋಟೆಕಾರ್ ಬ್ಯಾಂಕ್‌ನಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆಕೋರರು ನುಗ್ಗಿ ಬ್ಯಾಂಕ್‌ನಲ್ಲಿದ್ದ ಹಣ, ಒಡವೆ ದೋಚಿರುವುದಕ್ಕೆ ಪೊಲೀಸ್ ಇಲಾಖೆಯ ವೈಫಲ್ಯದ ಬಗ್ಗೆಯೂ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಅದಕ್ಕಾಗಿ ಪ್ರತಿಯೊಂದು ಬ್ಯಾಂಕುಗಳಿಗೆ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಕಳೆದ ಮೂರು ದಿನಗಳಿಂದ ವಿವಿಧ ಬ್ಯಾಂಕುಗಳಿಗೆ ಪೊಲೀಸರು ಭೇಟಿ ನೀಡಿ ಭದ್ರತೆ ಪರಿಶೀಲಿಸುತ್ತಿದ್ದಾರೆ. ಬ್ಯಾಂಕುಗಳ ಲಾಕರ್ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿರುವುದನ್ನು ಪೊಲೀಸರೇ ಸ್ವತಃ ನೋಡಿ ಬರುತ್ತಿದ್ದಾರೆ. ಅಲ್ಲದೇ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಆಯಾ ಠಾಣೆ ಇನ್ಸ್‌ಪೆಕ್ಟರ್‌ಗಳು, ಪಿಎಸ್‌ಐಗಳು ಸಭೆ ನಡೆಸಿ ಸೂಕ್ತ ಮಾಹಿತಿ ನೀಡುತ್ತಿದ್ದಾರೆ.ಕೆಲವು ಬ್ಯಾಂಕುಗಳಲ್ಲಿ ಸಿಸಿಟಿವಿ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದು, ಇದ್ದರೂ ವಿಡಿಯೋ ಕಾಣಿಸದಿರುವುದು ಇತ್ಯಾದಿ ಲೋಪಗಳನ್ನು ಕಂಡು ತಕ್ಷಣ ಸರಿಪಡಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಅಲ್ಲದೇ ಬ್ಯಾಂಕಿನ ಸೆಕ್ಯುರಿಟಿ ಗಾರ್ಡ್‌ಗಳು ವಹಿಸಬೇಕಾದ ಎಚ್ಚರಿಕೆಯನ್ನು ತಿಳಿಸಿ ಬರುತ್ತಿದ್ದಾರೆ.
ಒಂದು ವಾರ ಬ್ಯಾಂಕ್ ಭದ್ರತೆ ಬಗ್ಗೆ ಫೋಕಸ್: ಬ್ಯಾಂಕುಗಳ ಭದ್ರತಾ ವ್ಯವಸ್ಥೆ ಪರಿಶೀಲನೆಗಾಗಿಯೇ ಈ ಒಂದು ವಾರವಿಡಿ ಗಮನ ಕೇಂದ್ರೀಕರಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಸ್ವತಃ ಎಸ್ಪಿ ಅಂಶು ಕುಮಾರ್ ಅವರು ಈ ಬಗ್ಗೆ ವಿಶೇಷ ಗಮನ ಹರಿಸಿದ್ದು, ಈಗಾಗಲೇ ಎಲ್ಲ ಪೊಲೀಸ್ ಠಾಣೆ, ಉಪವಿಭಾಗಗಳ ಹಂತದಲ್ಲಿ ಬ್ಯಾಂಕ್ ಸಿಬ್ಬಂದಿಯೊಂದಿಗೆ ಸಭೆ ನಡೆಸಲಾಗಿದೆ. ಅಲ್ಲದೇ ಜ.24ರಂದು ವಿವಿಧ ಇಲಾಖೆಗಳು ಜಿಲ್ಲಾ ಮಟ್ಟದ ಬ್ಯಾಂಕ್ ಭದ್ರತೆ ಪರಿಶೀಲನಾ ಸಭೆಯನ್ನು ನಡೆಸಲು ಉದ್ದೇಶಿಸಿವೆ.ಜಿಲ್ಲೆಯಲ್ಲಿ ಹಲವು ಬ್ಯಾಂಕುಗಳಲ್ಲಿ ಕಳ್ಳತನದಂತಹ ಪ್ರಕರಣ ಈ ಹಿಂದೆ ನಡೆದಿದೆ. ಆದರೂ ಕೆಲವು ಬ್ಯಾಂಕ್ ಶಾಖೆಗಳು ಭದ್ರತಾ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೆಲ ಬ್ಯಾಂಕುಗಳಲ್ಲಿ ಸಿಸಿಟಿವಿ ದುರಸ್ತಿಯಲ್ಲಿದ್ದರೂ ಸರಿಪಡಿಸದಿರುವುದು, ವೈರಿಂಗ್ ಸಮಸ್ಯೆಯಿಂದ ಸೈರನ್ ಮೊಳಗದಿರುವುದು, ಎಟಿಎಂಗಳಲ್ಲಿ ಸಿಸಿಟಿವಿ ಇಲ್ಲದಿರುವುದು, ಸೆಕ್ಯುರಿಟಿ ಗಾರ್ಡ್ ನಿಯೋಜಿಸದಿರುವುದು ಸೇರಿದಂತೆ ಬ್ಯಾಂಕುಗಳು ನಿರ್ಲಕ್ಷ್ಯ ತೋರುತ್ತಿರುವುದು ಕಳ್ಳತನ ಘಟನೆಗೆ ಕಾರಣವಾಗುತ್ತಿದೆ. ಆದರೆ, ಬಳಿಕ ಪೊಲೀಸ್ ಇಲಾಖೆ ಮೇಲೆ ಆರೋಪ ಕೇಳಿಬರುವುದರಿಂದ ಈ ಸಲ ಪೊಲೀಸರು ಈ ವಿಷಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಅದಕ್ಕಾಗಿ ಈ ವಾರವಿಡಿ ಗಮನ ನೀಡಲು ಮುಂದಾಗಿದ್ದಾರೆ.
ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಬ್ಯಾಂಕ್ ದರೋಡೆ ಪ್ರಕರಣಗಳ ಬಳಿಕ ಜಿಲ್ಲೆಯಲ್ಲಿ ಬ್ಯಾಂಕ್ ಭದ್ರತೆ ಬಗ್ಗೆ ವಿಶೇಷ ಗಮನ ನೀಡಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಪೊಲೀಸ್ ತಂಡ ಬ್ಯಾಂಕುಗಳಿಗೆ ಭೇಟಿ ನೀಡಿ ಅಲ್ಲಿಯ ಭದ್ರತಾ ವ್ಯವಸ್ಥೆ ಪರಿಶೀಲನೆ ನಡೆಸುತ್ತಿದೆ. ಬ್ಯಾಂಕ್ ಸಿಬ್ಬಂದಿಯೊಂದಿಗೆ ಆಯಾ ಠಾಣೆ ವ್ಯಾಪ್ತಿಯಲ್ಲಿ ಸಭೆ ನಡೆಸಿ ಸೂಕ್ತ ತಿಳಿವಳಿಕೆ ನೀಡಲಾಗಿದೆ. ಸೆಕ್ಯುರಿಟಿ ಗಾರ್ಡ್‌ಗಳಿಗಾಗಿಯೇ ತರಬೇತಿ ಆಯೋಜಿಸುವ ಕುರಿತು ಚಿಂತನೆ ನಡೆಸಲಾಗಿದೆ ಹಾವೇರಿ ಎಸ್ಪಿ ಅಂಶುಕುಮಾರ ಹೇಳಿದರು.