ಒಂದು ಸಮುದಾಯವನ್ನು ಓಲೈಕೆ ರಾಜಕಾರಣ ಕಾಂಗ್ರೆಸ್ ಡಿಎನ್ಎಯಲ್ಲೇ ಇದೆ

| Published : Sep 21 2024, 01:53 AM IST

ಒಂದು ಸಮುದಾಯವನ್ನು ಓಲೈಕೆ ರಾಜಕಾರಣ ಕಾಂಗ್ರೆಸ್ ಡಿಎನ್ಎಯಲ್ಲೇ ಇದೆ
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಬೇರೆ ದೇಶದಲ್ಲಿ ಗಣೇಶನ ಹಬ್ಬ ಮಾಡುತ್ತಿದ್ದೇವಾ ಅಂತಾ ಅನಿಸಿದೆ. ಈ ಬಗ್ಗೆ ಅನೇಕರು‌ ನೋವು ತೋಡಿಕೊಂಡಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಒಂದು ಸಮುದಾಯವನ್ನು ಓಲೈಕೆ ಮಾಡುವ ರಾಜಕಾರಣ ಕಾಂಗ್ರೆಸ್ ರಕ್ತದಲ್ಲೇ ಇದೆ. ಕಾಂಗ್ರೆಸ್ ನ ಡಿಎನ್ಎಯಲ್ಲೇ ಇದೆ ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್ ವಾಗ್ದಾಳಿ ನಡೆಸಿದರು.

ಗಣೇಶ ವಿಸರ್ಜನೆ ವೇಳೆ ನಡೆದಿರುವ ಗಲಾಟೆಗೆ ಬಿಜೆಪಿ ನಾಯಕರ ಹೇಳಿಕೆಗಳೇ ಕಾರಣ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಶುಕ್ರವಾರ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಗಣೇಶ ವಿಸರ್ಜನೆಗೆ ಕಾಂಗ್ರೆಸ್ ಸರ್ಕಾರ ತಡೆಯೊಡ್ಡಿದೆ.

ನಾವು ಬೇರೆ ದೇಶದಲ್ಲಿ ಗಣೇಶನ ಹಬ್ಬ ಮಾಡುತ್ತಿದ್ದೇವಾ ಅಂತಾ ಅನಿಸಿದೆ. ಈ ಬಗ್ಗೆ ಅನೇಕರು‌ ನೋವು ತೋಡಿಕೊಂಡಿದ್ದಾರೆ ಎಂದರು.

ಅಧಿಕಾರಿಗಳು ಯಾಕೆ ಈ ರೀತಿ ಮಾಡುತ್ತಿದ್ದಾರೆಂದು ವಿಮರ್ಶೆ ಮಾಡಿಕೊಳ್ಳಲಿ. ಬಹುಸಂಖ್ಯಾತ ಹಿಂದೂಗಳಿರುವ ದೇಶದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಪೊಲೀಸ್ ವಾಹನದಲ್ಲಿ ಗಣೇಶನ ವಿಗ್ರಹ ಇಟ್ಟುಕೊಂಡಿದ್ದಾರೆ. ಈ ರೀತಿ ಯಾವಾಗಲಾದರೂ ಆಗಿದೆಯಾ ಎಂದು ಅವರು ಕಿಡಿಕಾರಿದರು.

ತಪ್ಪು ಮಾಡಿದ್ದರೇ ಶಿಕ್ಷೆ ಕೊಡಲಿ

ಕೋವಿಡ್ ಸಮಯದಲ್ಲಿ ಹಗರಣ ನಡೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರಾದರೂ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು 16 ತಿಂಗಳಾಗಿದೆ. 16 ತಿಂಗಳ ಹಿಂದೆ ಬಿಜೆಪಿ ಸರ್ಕಾರ ಇತ್ತು. ಈಗ ಮಧ್ಯಂತರ ವರದಿ ತರಿಸಿಕೊಂಡಿದ್ದಾರೆ. ಅಂತಿಮ ವರದಿ ಯಾವಾಗ ಬರುತ್ತೋ ಗೊತ್ತಿಲ್ಲ. ಸರ್ಕಾರಗಳು ಸೈಕಲ್ ಇದ್ದ ಹಾಗೆ. ಚಕ್ರ ತಿರುಗುವ ರೀತಿ ತಿರುಗುತ್ತೇ. ಹಿಂದೆ ನಮ್ಮ ಸರ್ಕಾರ ಇತ್ತು. ಈಗ ಕಾಂಗ್ರೆಸ್ ಸರ್ಕಾರ ಇದೆ. ನಾವು ಒಂದೇ ಒಂದು ಪ್ರಕರಣದಲ್ಲಿ ಈ ರೀತಿ ಮಾಡಿಲ್ಲ ಎಂದರು.

ಒಂದೇ ಒಂದು ದ್ವೇಷದ ರಾಜಕಾರಣ ಮಾಡಿಲ್ಲ. ತನಿಖಾ ಅಸ್ತ್ರ ಇಟ್ಟುಕೊಂಡು ಬೆದರಿಸುವ ಕೆಲಸ‌ ಮಾಡಲಿಲ್ಲ. ನಾವು ಹೆದರಿಕೊಳ್ಳಲು ಯಾವುದೇ ವಿಷಯ ಬಚ್ಚಿಟ್ಟಿಲ್ಲ. ಕುರ್ಚಿ ಇರುವವರೆಗೆ ಮಾಡುತ್ತಾರೆ. ಮುಂದೆ ಇನ್ನೊಬ್ಬರು ಬರುತ್ತಾರೆ, ಅವರಿಗೆ ದ್ವೇಷದ ರಾಜಕಾರಣ ಮಾಡುವುದು ಗೊತ್ತಿಲ್ಲವಾ? ದ್ವೇಷದ ರಾಜಕಾರಣ ಕಲಿಸಿ ಕೊಡುತ್ತಿದ್ದಾರೆ. ನಾವು ಕಲಿತುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಐಟಿ ಬಿಜೆಪಿ ಸರ್ಕಾರ ಬಂದ ಮೇಲೆ ಬಂತಾ? ಹಿಂದೆ ಎಷ್ಟು ಜನರನ್ನು ಇವರು ಜೈಲಿಗೆ ಕಳುಹಿಸಿದ್ದಾರೆ‌. ಜನಾರ್ಧನ ರೆಡ್ಡಿಯನ್ನು ಜೈಲಿಗೆ ಕಳಹಿಸಿದವರು ಯಾರು? ಅವರಿದ್ದಾಗ ಸಿಬಿಐ, ಐಟಿ ಪವಿತ್ರ ಸಂಸ್ಥೆ. ಈಗ ವರ್ಸ್ಟ್ ಆಗಿವೆಯಾ? ಕಾಂಗ್ರೆಸ್ ಯಾವಾಗ ಆಡಳಿತ ಕಳೆದುಕೊಂಡಿತು. ಈಗ ತನಿಖಾ ಸಂಸ್ಥೆ ವಿರುದ್ಧ ಹರಿಹಾಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

----

ಬಾಕ್ಸ್....

ಮುನಿರತ್ನ ಪ್ರಕರಣ ಗೊತ್ತಿಲ್ಲ

ಶಾಸಕ ಮುನಿರತ್ನ ಮತ್ತೆ ಅರೆಸ್ಟ್ ಆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಾ.ಕೆ. ಸುಧಾಕರ್ ಅವರು, ನನಗೆ ಪ್ರಕರಣ ಏನು ಅಂತಾ ಗೊತ್ತಿಲ್ಲ. ತಿಳಿದುಕೊಂಡು ಮಾತನಾಡುತ್ತೇನೆ ಎಂದರು.

ಮುನಿರತ್ನರ ಜೊತೆ ಓಡಾಡಿದವರಿಗೆ ಎಚ್‌ಐವಿ ಇಂಜೆಕ್ಟ್ ಆಗಿದೆ ಎಂದು ಶಾಸಕ ಡಾ. ರಂಗನಾಥ್ ಹೇಳಿಕೆ‌ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ವೈಯಕ್ತಿಕ ವಿಚಾರ ಮಾತನಾಡುವುದಿಲ್ಲ. ಆ ಆರೋಪ ದೃಢವಾಗಬೇಕು. ದೃಢವಾದ ಮೇಲೆ ಮಾತನಾಡುತ್ತೇನೆ. ಅಂತಿಮ ವರದಿ ಬಂದ ಮೇಲೆ ಮಾತನಾಡುತ್ತೇನೆ ಎಂದು ಹೇಳಿದರು.