ಮತದಾರರ ಸ್ವಾಗತಕ್ಕೆ ಸಿಂಗಾರಗೊಂಡಿವೆ ಕೋಟೆನಾಡಿನ ಮತಗಟ್ಟೆಗಳು

| Published : Apr 26 2024, 12:50 AM IST

ಮತದಾರರ ಸ್ವಾಗತಕ್ಕೆ ಸಿಂಗಾರಗೊಂಡಿವೆ ಕೋಟೆನಾಡಿನ ಮತಗಟ್ಟೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಶುಕ್ರವಾರ ನಡೆಯಲಿರುವ ಲೋಕಸಭೆ ಚುನಾವಣೆಗೆ ಮತದಾನ ಪ್ರಮಾಣ ಹೆಚ್ಚಿಸಲು, ಮತದಾರರನ್ನು ಆಕರ್ಷಿಸಲು ಜಿಲ್ಲೆಯಾದ್ಯಂತ 54 ಮತಗಟ್ಟೆ ಕೇಂದ್ರಗಳನ್ನು ವಿವಿಧ ಮಾದರಿಗಳಲ್ಲಿ ಸಿಂಗಾರಗೊಳಿಸಿದ್ದು, ಅಲಂಕೃತ ಮತಗಟ್ಟೆಗಳು ಮತದಾರರನ್ನು ಕೈ ಬೀಸಿ ಕರೆಯುತ್ತಿವೆ.

ಚಿತ್ರದುರ್ಗ: ಶುಕ್ರವಾರ ನಡೆಯಲಿರುವ ಲೋಕಸಭೆ ಚುನಾವಣೆಗೆ ಮತದಾನ ಪ್ರಮಾಣ ಹೆಚ್ಚಿಸಲು, ಮತದಾರರನ್ನು ಆಕರ್ಷಿಸಲು ಜಿಲ್ಲೆಯಾದ್ಯಂತ 54 ಮತಗಟ್ಟೆ ಕೇಂದ್ರಗಳನ್ನು ವಿವಿಧ ಮಾದರಿಗಳಲ್ಲಿ ಸಿಂಗಾರಗೊಳಿಸಿದ್ದು, ಅಲಂಕೃತ ಮತಗಟ್ಟೆಗಳು ಮತದಾರರನ್ನು ಕೈ ಬೀಸಿ ಕರೆಯುತ್ತಿವೆ.

ಜಿಲ್ಲೆಯಲ್ಲಿ ವಿಶೇಷ ವಿನ್ಯಾಸದಲ್ಲಿ ಸಖಿ ಮತಗಟ್ಟೆ, ವಿಶೇಷ ಚೇತನರ ಮಾದರಿ ಮತಗಟ್ಟೆ, ಯುವ ಮತಗಟ್ಟೆ, ಸಂಪ್ರಾದಾಯಿಕ ಮತಗಟ್ಟೆ ಹಾಗೂ ವಿಷಯಾಧಾರಿತ (ಥೀಮ್) ಮತಗಟ್ಟೆಗಳು ಸಿಂಗಾರಗೊಂಡು ಕಂಗೊಳಿಸುತ್ತಿವೆ.

ಮಹಿಳಾ ಮತದಾರರನ್ನು ಉತ್ತೇಜಿಸಲು ಪ್ರತಿ ವಿಧಾನಸಭಾ ಕ್ಷೇತ್ರವಾರು, ಮಹಿಳಾ ಮತದಾರರು ಹೆಚ್ಚಿರುವ ಕಡೆ 5 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತಗಟ್ಟೆಗಳಲ್ಲಿ ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಚುನಾವಣಾ ಕಾರ್ಯ ನಿರ್ವಹಿಸುವರು. ಇದೇ ಮಾದರಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1ರಂತೆ ವಿಶೇಷ ಚೇತನರ ಮತಗಟ್ಟೆ, ಯುವ ಮತಗಟ್ಟೆ, ವಿಷಯಾಧಾರಿತ ಹಾಗೂ ಸ್ಥಳೀಯ ಇತಿಹಾಸ, ಪರಂಪರೆ, ಸಂಸ್ಕೃತಿ ಬಿಂಬಿಸುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಮಹಿಳಾ ಮತದಾರರಿಗಾಗಿ ತೆರೆಯಲಾಗಿರುವ ಸಖಿ ಮತಗಟ್ಟೆಗಳು ತಳಿರು-ತೋರಣ, ರಂಗೋಲಿ, ಹೂ-ಗಿಡ ಅಲಂಕಾರದೊಂದಿಗೆ ಸಿಂಗಾರಗೊಂಡು ಮತದಾರರನ್ನು ಸ್ವಾಗತಿಸುತ್ತಿವೆ. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಕೋನಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಂಪುರ ಗ್ರಾಮ ಪಂಚಾಯಿತಿ ಕಚೇರಿ, ಮೇಗಳಹಟ್ಟಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ (ಹೊಸ ಕಟ್ಟಡ), ಮೊಳಕಾಲ್ಮುರು ದುರ್ಗ ಪ್ರೌಢಶಾಲೆ, ಕೊಂಡ್ಲಹಳ್ಳಿ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಕಾಟಪ್ಪನಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಳ್ಳಕೆರೆ ನಗರದ ಸರ್ಕಾರಿ ಮಾದರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಪರಶುರಾಂಪುರ, ಸಿದ್ದಾಪುರ ಹಾಗೂ ಹುಲಿಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಗೋನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊರಪೇಟೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಮಾಳಪ್ಪನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೆಳಗೋಟೆಯ ಸಂತ ಜೋಸೆಫರ ಕಾನ್ವೆಂಟ್ ಶಾಲೆಯಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಬುರುಜನರೊಪ್ಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹರಿಯಬ್ಬೆ ಸರ್ಕಾರಿ ಪಿಯು ಕಾಲೇಜು, ಬಬ್ಬೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹಿರಿಯೂರು ನೆಹರು ಮೈದಾನ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಜವನಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸದುರ್ಗ ವಿಧಾನಸಭಾ ಕ್ಷೇತ್ರದ ದೇವಿಗೆರೆ, ಹೊನ್ನೇನಹಳ್ಳಿ ಬಾಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸದುರ್ಗ ತಾಲೂಕು ಪಂಚಾಯಿತಿ ಸಭಾಭವನ, ಕಿಟ್ಟದಾಳ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಮಲ್ಲಾಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಳಲ್ಕೆರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಉರ್ದು ಶಾಲೆ, ಅರೇಹಳ್ಳಿ, ಮಾಳೇನಹಳ್ಳಿ ತಿರುಮಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ವಿಶೇಷ ಚೇತನರ ಮಾದರಿ ಮತಗಟ್ಟೆ: ಪ್ರತಿ ವಿಧಾನಸಭಾ ಕ್ಷೇತ್ರವಾರು ತಲಾ ಒಂದು ವಿಶೇಷ ಚೇತನರ ಮಾದರಿ ಮತಗಟ್ಟೆ ಸ್ಥಾಪಿಸಲಾಗಿದ್ದು, ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಎದ್ದಲು ಬೊಮ್ಮಯ್ಯನಹಟ್ಟಿ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಚಳ್ಳಕೆರೆ ನಗರದ ಟಿ.ಆರ್.ನಗರದ ವಿಶ್ವಭಾರತಿ ಹಿರಿಯ ಪ್ರಾಥಮಿಕ ಶಾಲೆ, ಚಿತ್ರದುರ್ಗ ನಗರದ ವಿ.ಪಿ.ಬಡಾವಣೆಯ ಒಂದನೇ ಕ್ರಾಸ್‍ನ ಉಪಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಹಿರಿಯೂರು ತಾಲೂಕು ಕೂನಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸದುರ್ಗ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಹೊಳಲ್ಕೆರೆ ತಾಳ್ಯದ ಚಿಗಟೀರಪ್ಪ ಬಾಲಕಿಯರ ಪ್ರೌಢಶಾಲೆಯಲ್ಲಿ ವಿಶೇಷ ಚೇತನರ ಮಾದರಿ ಮತಗಟ್ಟೆ ಸ್ಥಾಪಿಸಲಾಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರವಾರು ತಲಾ ಒಂದು ಯುವ ಜನರ ಮತಗಟ್ಟೆ ಸ್ಥಾಪಿಸಲಾಗಿದ್ದು, ಮೊಳಕಾಲ್ಮುರು ಬಿಇಒ ಕಚೇರಿಯ ಆವರಣದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ, ಚಳ್ಳಕೆರೆ ನಗರದ ಟಿ.ಆರ್.ನಗರದ ನವಚೇತನ ಹಿರಿಯ ಪ್ರಾಥಮಿಕ ಶಾಲೆ, ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದ ಸರ್ಕಾರಿ ಮೇನ್ಸ್ ಹಿರಿಯ ಪ್ರಾಥಮಿಕ ಶಾಲೆ, ಹಿರಿಯೂರು ಅಂಬಳಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸದುರ್ಗ ಜನರಲ್ ಕರಿಯಪ್ಪ ಮೆಮೊರಿಯಲ್ ಹಿರಿಯ ಪ್ರಾಥಮಿಕ ಶಾಲೆ, ಹೊಳಲ್ಕೆರೆ ಅರಸನಘಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಸ್ಥಳೀಯ ಇತಿಹಾಸ, ಪರಂಪರೆ, ಸಂಸ್ಕೃತಿ ಬಿಂಬಿಸುವ ಸಂಪ್ರಾದಾಯಿಕ (ಎಥ್ನಿಕ್) ಮತಗಟ್ಟೆಗಳನ್ನು ಪ್ರತಿ ವಿಧಾನಸಭಾ ಕ್ಷೇತ್ರವಾರು ತಲಾ ಒಂದು ಸ್ಥಾಪಿಸಲಾಗಿದೆ. ಮೊಳಕಾಲ್ಮುರು ತಾಲೂಕು ಕೆಳಗಿನ ಕಣಿವೆಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ, ಚಳ್ಳಕೆರೆ ನನ್ನಿವಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿತ್ರದುರ್ಗ ನಗರದ ಮದಕರಿಪುರ ಜಿಂದಾಲ್ ಪ್ರೌಢಶಾಲೆ, ಹಿರಿಯೂರು ವದ್ದಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸದುರ್ಗದ ಕಸಪ್ಪನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಳಲ್ಕೆರೆಯ ಮಂಜುನಾಥ್ ಪ್ರೌಢಶಾಲೆಯಲ್ಲಿ ಎಥ್ನಿಕ್ ಮತಗಟ್ಟೆ ಸ್ಥಾಪಿಸಲಾಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಂದರಂತೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 6 ವಿಷಯಾಧಾರಿತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮೊಳಕಾಲ್ಮುರು ಸರ್ಕಾರಿ ಪದವಿಪೂರ್ವ ಕಾಲೇಜು, ಚಳ್ಳಕೆರೆಯ ಸೋಮಗುದ್ದು ರಸ್ತೆಯ ಸರ್ಕಾರಿ ಪಿಯು ಕಾಲೇಜು, ಚಿತ್ರದುರ್ಗ ನಗರದ ಕೆಳಗೋಟೆಯ ಸರಸ್ವತಿ ಕಾನೂನು ಕಾಲೇಜು, ಹಿರಿಯೂರು ಹರಿಶ್ಚಂದ್ರ ಘಾಟ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸದುರ್ಗ ಮಧುರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹೊಳಲ್ಕೆರೆ ಪಟ್ಟಣದ ಬಸ್ ನಿಲ್ದಾಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಷಯಾಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ.