ಸಾರಾಂಶ
ಅಪ್ಪಾರಾವ್ ಸೌದಿ
ಕನ್ನಡಪ್ರಭ ವಾರ್ತೆ, ಬೀದರ್
ಬಿಜೆಪಿಯಲ್ಲಿ ಸತತ 25 ವರ್ಷ ದುಡಿದಿದ್ದೇನೆ, ಹಲವಾರು ಜವಾಬ್ದಾರಿ ಹೊತ್ತಿರುವೆ. ಒಂದು ಬಾರಿ ಮಂಡಲ ಕಾರ್ಯದರ್ಶಿಯಾಗಿ, ಎರಡು ಬಾರಿ ಜಿಲ್ಲಾ ಕಾರ್ಯದರ್ಶಿಯಾಗಿ, ಎರಡು ಬಾರಿ ಜಿಲ್ಲಾ ಉಪಾಧ್ಯಕ್ಷನಾಗಿ, ಒಂದು ಬಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದೇನೆ.
ಚುನಾವಣಾ ಅನುಭವವೂ ಸಾಕಷ್ಟು ಇದೆ. ಬಿಜೆಪಿಗೆ ಚುನಾವಣೆ ರಾಜಕೀಯವೇ ಮುಖ್ಯ ಉದ್ದೇಶವಲ್ಲ, ಸಮಾಜ ಸೇವೆ ನಮ್ಮ ಗುರಿ. ಸದ್ಯಕ್ಕೆ ಬಿಜೆಪಿಯ ಲೋಕಸಭಾ ಸೀಟ್ ಖಾಲಿಯಿಲ್ಲ.
ಆಕಾಂಕ್ಷಿಗಳು ಟಿಕೆಟ್ ಕೇಳೋದೂ ತಪ್ಪಲ್ಲ. ಅಷ್ಟಕ್ಕೂ ಬಿಜೆಪಿ ಟಿಕೆಟ್ ಫಿಕ್ಸ್‌ಡ್ ಅಲ್ಲ. ಎಲ್ಲರ ಸಲಹೆ, ಸಹಕಾರ ಪಡೆದೇ ಟಿಕೆಟ್ ನಿರ್ಧಾರವಾಗುತ್ತೆ. ಅದೇನಿದ್ದರೂ ಜಿಲ್ಲಾಧ್ಯಕ್ಷ ಗದ್ದುಗೆ ಜವಾಬ್ದಾರಿ ಹೆಚ್ಚಿಸಿದೆ, ಬಿಜೆಪಿ ಹ್ಯಾಟ್ರಿಕ್ ಬಾರಿಸೋ ಗುರಿ ನನ್ನ ಮುಂದಿದೆ.
ಬೀದರ್ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಘೋಷಿತ ಸೋಮನಾಥ ಪಾಟೀಲ್ ಸ್ಪಷ್ಟ ನುಡಿ ಇವು. ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು ಪಕ್ಷದ ಜವಾಬ್ದಾರಿ, ಸಂಘಟನೆ, ಮುಂಬರುವ ಚುನಾವಣೆ, ಟಿಕೆಟ್ ಗದ್ದಲ ಮತ್ತಿತರ ವಿಷಯಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕೇರಲು ಸಹಕಾರಿಯಾದದ್ದು ಯಾವುದು..?
ಪಾಟೀಲ್ : ನಾನು ಕಳೆದ 25 ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ವಿವಿಧ ಜವಾಬ್ದಾರಿ ಕೆಲಸ ಮಾಡಿದ್ದೇನೆ. ಒಂದು ಬಾರಿ ಮಂಡಲ ಕಾರ್ಯದರ್ಶಿಯಾಗಿ, ಎರಡು ಬಾರಿ ಜಿಲ್ಲಾ ಕಾರ್ಯದರ್ಶಿಯಾಗಿ, ಎರಡು ಬಾರಿ ಜಿಲ್ಲಾ ಉಪಾಧ್ಯಕ್ಷನಾಗಿ ಹಾಗೂ ಒಂದು ಬಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದೇನೆ.
ಅಲ್ಲದೆ ವಿವಿಧ ಚುನಾವಣೆಗಳಲ್ಲಿಯೂ ತೊಡಗಿಸಿಕೊಂಡಿದ್ದೇನೆ. ತೆಲಾಂಗಣದ ಬಾಣಸವಾಡಾ ಕ್ಷೇತ್ರ, ಮಹಾರಾಷ್ಟ್ರದ ಲಾತೂರ್ ಹಾಗೂ ತುಳಜಾಪೂರ, ಉತ್ತರಪ್ರದೇಶ ವಾರಾಣಸಿ, ರಾಜ್ಯದ ಉಪಚುನಾವಣೆಯಲ್ಲಿ ಚಿತ್ತಾಪೂರ, ಕಲಬುರಗಿ ದಕ್ಷಿಣ ಹಾಗೂ ಬಳ್ಳಾರಿಯಲ್ಲಿಯೂ ಶ್ರಮಿಸಿದ್ದೇನೆ.
ಕಳೆದ ಬಾರಿಯೂ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ. ಇವೆಲ್ಲವನ್ನೂ ಪರಿಗಣನೆ ಮಾಡಿ ಪಕ್ಷ ಸಾಮಾನ್ಯ ಕಾರ್ಯಕರ್ತನಾಗಿರುವ ನನಗೆ ಪಕ್ಷದ ಜಿಲ್ಲಾಧ್ಯಕ್ಷ ಹುದ್ದೆ ವಹಿಸಿದ್ದು ಅತ್ಯಂತ ಸಂತಸ ತಂದಿದೆ.
ಕ.ಪ್ರ : ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹುಮನಾಬಾದ್ ಫೇವರೇಟ್ ಏಕೆ?
ಪಾಟೀಲ್ : ಹುಮನಾಬಾದ್ ಕ್ಷೇತ್ರ ಚುನಾವಣಾ ರಾಜಕಾರಣದ ಯಶಸ್ಸಿನಲ್ಲಿ ಹಿಂದೆ ಬಿದ್ದಿದ್ದರೂ ಬಿಜೆಪಿಯ ಬೇರುಗಳೇ ಹುಮನಾಬಾದ್ ಮೂಲದ್ದಾಗಿವೆ. ಹಿರಿಯರಾದ ಸುಭಾಷ ಕಲ್ಲೂರ, ಸುಭಾಷ ಅಷ್ಟೀಕರ, ನಾರಾಯಣರಾವ್ ಮನ್ನಳ್ಳಿ ಹಾಗೂ ಹುಮನಾಬಾದ್ ಕುಲಕರ್ಣಿ ಅವರಿಂದ ಬಿಜೆಪಿಯ ಮೊದಲ ಸಭೆ ನಡೆಸಿದ್ದೇ ಹುಮನಾಬಾದ್ ಭವಾನಿ ಮಂದಿರದಲ್ಲಿ, ಮೊದಲ ಅಧ್ಯಕ್ಷ ಸ್ಥಾನ ಘೋಷಣೆಯಾಗಿದ್ದೂ ಇಲ್ಲಿಂದಲೇ.
ಹೀಗಾಗಿ ಜಿಲ್ಲಾ ಕೇಂದ್ರವು ಬೀದರ್ ಆದರೂ ಸಂಘಟನೆಯ ಕೇಂದ್ರ ಬೇರುಗಳು ಹುಮನಾಬಾದ್‌ನವು. ಅದಕ್ಕಾಗಿ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನದ ಕುರ್ಚಿ ಅಲಂಕರಿಸಿರೋರ ಸಂಖ್ಯೆ ಅಷ್ಟೇ ಅಲ್ಲ ಪಕ್ಷದ ಬೇರುಗಳನ್ನು ವಿಶಾಲವಾಗಿ ಹರಡಿರೋರೂ ಹುಮನಾಬಾದ್‌ನವರು ಎಂಬುವದು ನನಗೆ ಹೆಮ್ಮೆ.
ಕ.ಪ್ರ : ಪಾರ್ಟಿ ವಿಥ್ ಡಿಫರನ್ಸ್ ಎಂದೆನ್ನುವ ಬಿಜೆಪಿ ಈಗ ಜೆಡಿಎಸ್‌ನ್ನೂ ಸೇರಿಸಿಕೊಂಡಿದೆಯಲ್ಲ?
ಪಾಟೀಲ್ : ಚುನಾವಣೆಯೇ ಮುಖ್ಯ ಉದ್ದೇಶವಲ್ಲ. ಪಕ್ಷ ಕಟ್ಟುವಾಗ ಶಾಮಪ್ರಸಾದ ಮುಖರ್ಜಿ ಹಾಗೂ ದೀನ್ ದಯಾಳ್ ಉಪಾಧ್ಯಾಯರು, ಚುನಾವಣೆಯಲ್ಲಿ ಗೆಲ್ಲೋದು ಕೆಲಸ ಮಾಡಲು. ಆದರೆ ನಮ್ಮದು ದೇಶ ಕಟ್ಟುವ ಕೆಲಸ, ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸ್ಥಾಪನೆಯಾಗಿರುವ ಪಕ್ಷ. ಹೀಗಾಗಿ ಬಿಜೆಪಿ ಪಾರ್ಟಿ ವಿತ್ ಡಿಫರನ್ಸ್.
ಜೆಡಿಎಸ್ ನಮಗೆ ಈಗ ಸಾಥ್ ನೀಡಿರುವದರಿಂದ ಮುಂಬರುವ ಚುನಾವಣೆಯಲ್ಲಿ ನಮಗೆ ಪ್ಲಸ್ ಪಾಯಿಂಟ್. ಎರಡ್ಮೂರು ಬಾರಿ ಮಾತ್ರ ನಾವು ಬೇರೆಯವರಿಗೆ ಸ್ಥಾನ ಬಿಟ್ಟುಕೊಟ್ಟಿದ್ದೇವೆ, ಅದು ನಮ್ಮ ತಪ್ಪಿನಿಂದಲೇ. ಈಗ ಅದ್ಯಾವುದೂ ನಡೆಯೋಲ್ಲ. ಶತಪ್ರತಿಶತ ನಾವೇ ಗೆಲ್ತೇವೆ.
ಕ.ಪ್ರ : ಬೀದರ್‌ನಲ್ಲಿ ಬಿಜೆಪಿ ಸಂಸದರು, ಕೇಂದ್ರ ಸಚಿವರ ಸಾಧನೆ ಏನು?
ಪಾಟೀಲ್ : ರಾಷ್ಟ್ರೀಯ ಹೆದ್ದಾರಿಗಳು, ನಿಜಾಮ್ ಸಮಯದಲ್ಲಿನ ಪರಳಿಯಿಂದ ಹೈದ್ರಾಬಾದ್‌ನ ರೈಲು ಸಂಪರ್ಕ ನಮ್ಮ ಆಡಳಿತ ಬರೋವರೆಗೂ ಇತ್ತು. ಇಂದು ಹತ್ತಾರು ರೈಲುಗಳು ಓಡಾಡುತ್ತಿವೆ, ಪಾಸ್‌ಪೋರ್ಟ್ ಕೇಂದ್ರ, ಸಿಪೆಟ್ ಕಾಲೇಜು ಹಾಗೂ ಸೋಲಾರ್ ಪಾರ್ಕ ಆಗಲಿದೆ. ಹೀಗೆಯೇ ಸಾಧನೆಯ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಈ ಹಿಂದೆ ಯಾರೂ ಮಾಡದಂಥ ಅಭಿವೃದ್ಧಿ ಕಾರ್ಯಗಳು ಈ ನಮ್ಮ ಕೇಂದ್ರದ ಬಿಜೆಪಿ ಸರ್ಕಾರದ, ಬೀದರ್ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ಅವಧಿಯಲ್ಲಿ ಆಗಿವೆ.
ಕ.ಪ್ರ : ಇಷ್ಟೆಲ್ಲ ಸಾಧನೆ ಹೇಳ್ತೀರಿ, ಹಾಗಿದ್ರೆ ಟಿಕೆಟ್ ಮತ್ತೊಬ್ಬರಿಗ್ಯಾಕೆ ಕೊಡಬೇಕು?
ಪಾಟೀಲ್ : ಟಿಕೆಟ್ ಗದ್ದಲ ಏನಿಲ್ಲ. ಅದು ಪ್ರಜಾಪ್ರಭುತ್ವ ಸೌಂದರ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟಿಕೆಟ್‌ಗಾಗಿ ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ. ಅಂದ್ರೆ ನಮ್ಮ ಪಕ್ಷ ಪ್ರಬಲವಾಗಿದೆ. ನಾವೇ ಗೆಲ್ತೀವಿ ಎಂದೇ ಅರ್ಥ. ಸದ್ಯಕ್ಕಂತೂ ನಮ್ಮಲ್ಲಿ ಯಾವುದೂ ಸೀಟು ಖಾಲಿ ಇಲ್ಲ. ಹಾಲಿ ಸಂಸದರು ಕೇಂದ್ರ ಸಚಿವರಿದ್ದಾರೆ. ಅಷ್ಟಾಗ್ಯೂ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಅಂದರೆ ನಮ್ಮ ಪಕ್ಷ ಪ್ರಬಲ ಇದೆ ಎಂಬೋದು ಸಾಬೀತಾದಂತಿದೆ. ಪ್ರತಿ ಬಾರಿಯೂ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುತ್ತದೆ. ಈ ಹಿಂದಿನ ಚುನಾವಣೆಯಲ್ಲಿಯೂ ಹತ್ತಾರು ಜನ ಟಿಕೆಟ್ ಕೇಳಿದ್ದರು. ಈ ಬಾರಿಯೂ ಟಿಕೆಟ್‌ಗಾಗಿ ಕೇಳುತ್ತಿದ್ದಾರೆ. ಅಷ್ಟಕ್ಕೂ ಎಲ್ಲವನ್ನೂ ಗಮನಿಸಿ, ಎಲ್ಲರ ಸಲಹೆ, ಸಹಕಾರ ಪಡೆದೇ ಟಿಕೆಟ್ ನಿರ್ಧಾರ ಆಗುತ್ತೆ.
ಕ.ಪ್ರ: ಜಿಲ್ಲಾಧ್ಯಕ್ಷ ಅಧಿಕಾರ ಪದಗ್ರಹಣ ಯಾವಾಗ, ಯಾರ್ಯಾರು ಬರ್ತಾರೆ ...?
ಪಾಟೀಲ್: ಜ. 18 ಮತ್ತು 19ರಂದು ರಾಜ್ಯ ಕಾರ್ಯಕಾರಣಿ ಇದೆ. ಅಲ್ಲಿ ನಮ್ಮ ಹಿರಿಯರು ಸೂಚಿಸಿದಂತೆ ಪದಗ್ರಹಣ ದಿನ ನಿಗದಿಪಡಿಸುತ್ತೇವೆ. ನಮ್ಮ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನಿಸುವ ಅಭಿಲಾಷೆ ಇದೆ.